Advertisement

ಕೋವಿಡ್ 19 ವಿರುದ್ಧ ಹೋರಾಟ; ಭಾರತ ಆಪದ್ಭಾಂಧವ-ಸಕಾಲದ ನೆರವಿಗೆ ಅಫ್ಘಾನ್ ಕೃತಜ್ಞತೆ

09:17 AM Apr 19, 2020 | Nagendra Trasi |

ನವದೆಹಲಿ:ಇಡೀ ಜಗತ್ತು ಮಾರಣಾಂತಿಕ ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ ಐದು ಲಕ್ಷದಷ್ಟು ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕಳುಹಿಸಿಕೊಟ್ಟಿದ್ದು, ಇದಕ್ಕಾಗಿ ಅಭಿನಂದನೆ ಸಲ್ಲಿಸುವುದಾಗಿ ಅಫ್ಘಾನಿಸ್ತಾನದ ರಾಯಭಾರಿ ತಾಹೀರ್ ಖಾದ್ರಿ ಟ್ವೀಟ್ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

ಭಾರತಕ್ಕೆ ನಿರಂತರವಾಗಿ ಬೇಡಿಕೆ ಇಟ್ಟಿದ್ದು, “ಈ ನಿಟ್ಟಿನಲ್ಲಿ ಭಾರತ ಮಹತ್ವದ ಔಷಧವಾಗಿರುವ ಒಂದು ಲಕ್ಷ ಪ್ಯಾರಾಸಿಟಮೋಲ್ ಮಾತ್ರೆ ಹಾಗೂ 5 ಲಕ್ಷದಷ್ಟು ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಅರಿಯಾನಾ ಏರ್ ಲೈನ್ಸ್ ಮೂಲಕ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಟ್ಟಿದೆ. ಇದಕ್ಕೂ ಮುನ್ನ ಭಾರತ ಆಹಾರ ಭದ್ರತೆಗಾಗಿ ಗೋಧಿಯನ್ನು ಹಡಗಿನ ಮೂಲಕ ಕಳುಹಿಸಿತ್ತು.  ಭಾರತಕ್ಕೆ ಹೃದಯಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದ್ದಾರೆ.

ಕೋವಿಡ್ 19 ವೈರಸ್ ವಿರುದ್ಧ ಹೋರಾಡುವ ವೈದ್ಯ ಸಿಬ್ಬಂದಿಗಳಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ತುಂಬಾ ಉಪಯುಕ್ತ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯವ್ಯಕ್ತಪಡಿಸಿದ ಮೇಲೆ ಹಲವು ದೇಶಗಳು ಈ ಮಾತ್ರೆಗಾಗಿ ಬೇಡಿಕೆ ಇಟ್ಟಿದ್ದವು. ಇಡೀ ಜಗತ್ತಿನಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ಪಾದನೆಯಲ್ಲಿ ಭಾರತ ನಂ 1 ಆಗಿತ್ತು. ಅಲ್ಲದೇ ಅಫ್ಘಾನಿಸ್ತಾನ ಸೇರಿದಂತೆ ವಿಶ್ವದ 55 ದೇಶಗಳು ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಾಗಿ ಬೇಡಿಕೆ ಇಟ್ಟಿದ್ದವು.

ಕೋವಿಡ್ 19 ವೈರಸ್ ಗೆ ಈಗಾಗಲೇ ಅಫ್ಘಾನಿಸ್ತಾನದಲ್ಲಿ 30 ಮಂದಿ ಸಾವನ್ನಪ್ಪಿದ್ದು, 906 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ. ಮತ್ತೊಂದೆಡೆ ಭಾರತ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಬಹರೈನ್, ಯುಎಇ ಮತ್ತು ಒಮಾನ್ ದೇಶಕ್ಕೆ ಕಳುಹಿಸಲು ಸಿದ್ದತೆ ನಡೆಸಿದೆ. ಪ್ಯಾರಾಸಿಟಮೋಲ್ ಮಾತ್ರೆಯನ್ನು ಕುವೈಟ್ ಗೆ ಕಳುಹಿಸಿದೆ. ಕೇಂದ್ರ ಸರ್ಕಾರ ಕುವೈಟ್ ಗೆ ವಿಶೇಷ ತಂಡವನ್ನು ಕಳುಹಿಸಿರುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next