ಕಾಬೂಲ್ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದ ಬಳಿಕ ಜನ ಜೀವನದಲ್ಲಿ ಭಾರಿ ಸಂಕಷ್ಟದಲ್ಲಿದ್ದು, ಪಾಡು ಹೇಳತೀರದಾಗಿದೆ. ಇದಕ್ಕೆ ಸಾಕ್ಷಿಯಾಗಿ ಟಿವಿ ನಿರೂಪಕನಾಗಿ ಕೆಲಸ ಮಾಡುತ್ತಿದ್ದ ಪತ್ರಕರ್ತನೊಬ್ಬ ಗತಿಯಿಲ್ಲದೆ ಬೀದಿ ಬದಿ ತಿಂಡಿ ವ್ಯಾಪಾರ ಮಾಡಬೇಕಾಗಿದೆ. ಈ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಮೂಸಾ ಮೊಹಮ್ಮದಿ ಎಂಬ ಪತ್ರಕರ್ತ ಪಾದಚಾರಿ ಮಾರ್ಗದಲ್ಲಿ ಆಹಾರ ಮಾರಾಟ ಮಾಡುತ್ತಿರುವುದು ವೈರಲ್ ಆಗಿದ್ದು, ಆಫ್ಘಾನಿಸ್ತಾನದ ಪತ್ರಿಕೋದ್ಯಮದ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಸಹ ಪತ್ರಕರ್ತ ಮತ್ತು ಕಾರ್ಯಕರ್ತ ನಿಲೋಫರ್ ಅಯೂಬಿ ಅವರು ಪೋಸ್ಟ್ ಮಾಡಿದ ಫೋಟೋ, ಅವರು ನ್ಯೂಸ್ ರೀಡರ್ ಆಗಿ ಕ್ಯಾಮರಾದ ಮುಂದೆ ಕಾಣಿಸಿಕೊಂಡ ದಿನಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ.
‘ನನ್ನ ಕುಟುಂಬಕ್ಕೆ ನೆರವಾಗುವ ಸಲುವಾಗಿ ಸಾಧ್ಯವಾಗುವ ಯಾವುದೇ ಕೆಲಸವನ್ನು ಮಾಡಬೇಕು, ನನಗೆ ಬೇರೆ ಆಯ್ಕೆಯಿಲ್ಲ” ಎಂದು ಮೂಸಾ ಮೊಹಮ್ಮದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಈ ವಿಚಾರ ಭಾರಿ ಸುದ್ದಿಯಾಗುತ್ತಿದ್ದಂತೆ ತಾಲಿಬಾನ್‌ನ ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಮೊಹಮ್ಮದಿಗೆ ಕೆಲಸ ಕೊಡಿಸುವುದಾಗಿ ಟ್ವೀಟ್ ಮಾಡಿದ್ದು, ಯಾವ ಕೆಲಸ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿಲ್ಲ.