Advertisement
ಗುರುವಾರ ಕಾಂಗ್ರೆಸ್ ತನ್ನ ಎರಡನೇ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ ಕಲಬುರಗಿ ದಕ್ಷಿಣಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಹಾಗೂ ಅಫಜಲಪುರಕ್ಕೆ ಹಾಲಿ ಶಾಸಕ ಎಂ.ವೈ.ಪಾಟೀಲ್ ಅವರಿಗೆ ಮಣೆ ಹಾಕಲಾಗಿದೆ.
Related Articles
Advertisement
ಕಳೆದ 2018ರ ಚುನಾವಣೆಯಲ್ಲಿ ಐದು ಸಾವಿರ ಮತಗಳ ಅಂತರದಿಂದ ಪರಾಭವಗೊಂಡ ನಂತರ ಕಳೆದ ಐದು ವರ್ಷಗಳುದ್ದಕ್ಕೂ ಕ್ಷೇತ್ರದಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಿರುವುದನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿದೆ ಎಂದು ಅದರಲ್ಲೂ ಬಿಜೆಪಿ ವಶದಲ್ಲಿರುವ ಕಲಬುರಗಿ ದಕ್ಷಿಣ ಕಾಂಗ್ರೆಸ್ ಬಾವುಟ ಹಾರಿಸಲು ಸೂಕ್ತ ಅಭ್ಯರ್ಥಿ ಅಲ್ಲಮಪ್ರಭು ಎಂಬುದನ್ನು ಅವಲೋಕಿಸಿ ಟಿಕೆಟ್ ನೀಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಮಗನ ಬದಲು ತಂದೆಗೆ ಮಣೆ: ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಅವರಿಗೆ ಈಗ 80 ವರ್ಷ. ವಯಸ್ಸಿನ ಕಾರಣ ತಾವು ಸ್ಪರ್ಧಿಸುವುದಿಲ್ಲ. ಹೀಗಾಗಿ ಮಗನಾಗಿರುವ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣಕುಮಾರ ಪಾಟೀಲ್ ಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದರು.
ಇದರ ನಡುವೆ ಮತ್ತೊಬ್ಬ ಮಗ ಡಾ. ಸಂಜು ಪಾಟೀಲ್ ಟಿಕೆಟ್ ಗೆ ಅರ್ಜಿ ಹಾಕಿದ್ದರು. ಹೀಗಾಗಿ ಟಿಕೆಟ್ ಗೊಂದಲ ಗೂಡಾಗಿತ್ತು. ಅದಲ್ಲದೇ ಅರುಣ ಪಾಟೀಲ್ ಗೆ ಟಿಕೆಟ್ ನೀಡುವ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಆದರೆ ಎಂ.ವೈ ಪಾಟೀಲ್ ರಿಗೆ ಮತ್ತೆ ಟಿಕೆಟ್ ನೀಡಿದರೆ ಪಕ್ಷ ಗೆಲ್ಲುತ್ತದೆ ಎಂಬುದನ್ನು ಅರಿತು ಮಣೆ ಹಾಕಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನೊಂದು ಕ್ಷೇತ್ರ ಬಾಕಿ: ಜಿಲ್ಲೆಯ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರಕ್ಕೆ ಮಾತ್ರ ಟಿಕೆಟ್ ಘೋಷಣೆ ಮಾಡಿಲ್ಲ. ಮಾಜಿ ಸಚಿವ ರೇವು ನಾಯಕ ಬೆಳಮಗಿ ಈಚೆಗೆ ಕಾಂಗ್ರೆಸ್ ಸೇರಿದ್ದು, ಇವರ ಹಾಗೂ ಮಾಜಿ ಸಚಿವ ಜಿ. ರಾಮಕೃಷ್ಣ ಮಗ ವಿಜಯಕುಮಾರ ರಾಮಕೃಷ್ಣ ನಡುವೆ ಪೈಪೋಟಿ ಏರ್ಪಟ್ಟಿದೆ. ಈಗಾಗಿ ಕೊನೆ ಘಳಿಗೆವರೆಗೂ ಕಾದು ನೋಡಲು ಮುಂದಾಗಲಾಗಿದೆ.