Advertisement

ಅಫಜಲಪುರ: ಮಳೆ ಕೊರತೆಯಲ್ಲೂ ಬಿತ್ತನೆಗೆ ಸಿದ್ಧತೆ

10:00 AM Jun 15, 2019 | Naveen |

ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ:
ಕಳೆದ ವರ್ಷ ಮಳೆ ಕೊರತೆಯಾಗಿ ಬಿತ್ತಿದ ಬೆಳೆಗಳೆಲ್ಲ ನಾಶವಾಗಿ ಸಾಕಷ್ಟು ಹಾನಿಯಾಗಿತ್ತು. ಬೆಳೆ ಹಾನಿಯಿಂದ ರೈತಾಪಿ ವರ್ಗದವರು ಸಾಲ ಮಾಡಿಕೊಂಡು ಹೈರಾಣಾಗಿದ್ದರು. ಆದರೆ ಈ ಬಾರಿಯ ಮುಂಗಾರು ಹಂಗಾಮಿನ ಬಿತ್ತನೆಗೆ ಮಳೆ ಕೊರತೆಯಲ್ಲು ಭೂಮಿ ಹದಗೊಳಿಸುತ್ತಿದ್ದಾರೆ. ಈ ಬಾರಿಯಾದರೂ ಉತ್ತಮ ಮಳೆಯಾಗಿ ರೈತರ ಕಷ್ಟ ನಿವಾರಣೆಯಾಗುತ್ತದೆಯೋ ಅಥವಾ ಮತ್ತೂಮ್ಮೆ ಭೀಕರ ಬರಗಾಲ ಆವರಿಸಿ ಜನ ಜಾನುವಾರುಗಳಿಗೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಾ ನೋಡಬೇಕು.

Advertisement

99,850 ಹೆಕ್ಟೇರ್‌ ಬಿತ್ತನೆ ಗುರಿ: ತಾಲೂಕಿನ ಒಟ್ಟು ಭೌಗೋಳಿಕ ಕ್ಷೇತ್ರ 13,0478 ಲಕ್ಷ ಹೆಕ್ಟೇರ್‌ ಇದೆ. 11,0590 ಹೆಕ್ಟೇರ್‌ ಸಾಗುವಳಿ ಕ್ಷೇತ್ರ ಇದೆ. ಈ ಪೈಕಿ ಈ ಬಾರಿ 99,850 ಹೆಕ್ಟೇರ್‌ ಬಿತ್ತನೆ ಕ್ಷೇತ್ರವಿದೆ. 2315 ಹೆಕ್ಟೇರ್‌ ಪ್ರದೇಶದಲ್ಲಿ ಏಕದಳ, 73,835 ಹೆಕ್ಟೇರ್‌ ದ್ವಿದಳ, 2490 ಹೆಕ್ಟೇರ್‌ ಎಣ್ಣೆಕಾಳು, 21,210 ಹೆಕ್ಟೇರ್‌ ವಾಣಿಜ್ಯ ಬೆಳೆಗಳ ಕ್ಷೇತ್ರವಾಗಿದೆ. ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಮಳೆಗಳು ಬಾರದ ಹಿನ್ನೆಲೆ ಎಲ್ಲ ಬೆಳೆಗಳು ಶೇ. 80ರಷ್ಟು ಹಾಳಾಗಿ ರೈತರಿಗೆ ಭಾರಿ ಆಘಾತವಾಗಿತ್ತು. ಅಲ್ಲದೆ ಜನ ಸಾಮಾನ್ಯರ ಬದುಕಿಗೆ ಭಾರಿ ಪೆಟ್ಟು ಬಿದ್ದಿತ್ತು.

ವಾಡಿಕೆಗಿಂತ ಕಡಿಮೆ ಮಳೆ: ಈ ಸಾಲಿನ ಜನವರಿಯಿಂದ ಜೂನ್‌ 12 ರ ವರೆಗೆ 160.5 ಮಿಮಿ ಮಳೆಯಾಗಬೇಕಾಗಿತ್ತು. ಆದರೆ ಕೇವಲ 44.03 ಮಿಮೀ ಮಳೆಯಾಗಿದೆ. ಹೀಗಾಗಿ ಸುಮಾರು 116.15 ಮಿಮೀ ಮಳೆ ಕೊರತೆಯಾಗಿದೆ. 2018-19ರ ಜನವರಿಯಿಂದ ಡಿಸೆಂಬರ್‌ ವರೆಗೆ 667.3 ಮಿಮೀ ಮಳೆಯಾಗಬೇಕಾಗಿತ್ತು. ಆದರೆ 469.8 ಮಿಮೀ ಮಾತ್ರ ಮಳೆಯಾಗಿ 107.5 ಮಿಮೀ ಮಳೆ ಕೊರತೆಯಾಗಿತ್ತು.

ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆಗಳು ಕೈ ಕೊಟ್ಟಿದ್ದರಿಂದ ರೈತರು ಬಹಳಷ್ಟು ಸಂಕಷ್ಟ ಅನುಭವಿಸುವಂತಾಗಿತ್ತು. ಕುಡಿಯುವ ನೀರು, ಮೇವಿಲ್ಲದೆ ಜನ ಜಾನುವಾರುಗಳು ಸಂಕಷ್ಟ ಅನುಭವಿಸುವಂತಾಗಿತ್ತು. ಆದರೆ ಈ ಬಾರಿಯಾದರೂ ಉತ್ತಮ ಮಳೆಯಾಗಿ ಉತ್ತಮ ಬೆಳೆಯಾಗಲಿ ಎಂದು ರೈತರು ಮುಗಿಲ ಕಡೆ ಮುಖ ಮಾಡಿ ದೇವರಲ್ಲಿ ಮೊರೆ ಇಡುತ್ತಿದ್ದಾರೆ.

ಕಳೆದ ವರ್ಷ ಬೆಳೆಯಲ್ಲಿ ಬಹುತೇಕ ನಾಶವಾಗಿ ರೈತರಿಗೆ ಬಹಳಷ್ಟು ಹಾನಿಯುಂಟಾಗಿತ್ತು. ಅದರಲ್ಲೂ ವಾಣಿಜ್ಯ ಬೆಳೆಗಳಾದ ಕಬ್ಬು ಬೆಳೆ ಸಂಪೂರ್ಣ ಹಾಳಾಗಿ ಹೋಗಿತ್ತು. ಕಳೆದ ವರ್ಷ 17,955 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಹಾಳಾಗಿತ್ತು. 2018-19ರಲ್ಲಿ 7113 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿತ್ತು. ಈ ಪೈಕಿ 6401 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾಳಾಗಿತ್ತು. ಹೀಗಾಗಿ ಈ ವರ್ಷ ಕಬ್ಬು ಮತ್ತು ಹತ್ತಿ ಬಿತ್ತನೆ ಕ್ಷೇತ್ರ ತೀರಾ ಕಡಿಮೆಯಾಗಿದೆ. ಒಟ್ಟಾರೆಯಾಗಿ ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಮಳೆಗಳು ಬಾರದೆ ಎಲ್ಲ ಬೆಳೆಗಳು ನಾಶವಾಗಿದ್ದವು. ಈ ವರ್ಷವಾದರೂ ಉತ್ತಮ ಮಳೆಯಾಗಿ ಒಳ್ಳೆಯ ಫಸಲು ಬಂದು ರೈತರ ಬದುಕು ಹಸನಾಗುತ್ತಾ ಕಾದು ನೋಡಬೇಕಾಗಿದೆ.

Advertisement

ಹ್ವಾದ್‌ ವರ್ಷ ಮಳೆಯಾಗಿಲ್ಲ. ಬೆಳೆ ಹಾಳಾಗಿ ನಮ್ಮ ಹೊಟ್ಟೆ, ಬಟ್ಟೆಗೆ ಕಷ್ಟ ಬಂದಿತ್ತು. ಮೇವು ಸಿಗದೇ ದನ ಕರುಗಳೆಲ್ಲವನ್ನೂ ಮಾರಿದೇವು. ಈಗ ಮತ್‌ ಬಿತ್ತುಣಕಿ ಬಂದಾವ. ದನ ಕರಗೋಳಿಲ್ದೆ ಭಾಳ ಕಷ್ಟ ಬಂದಾದ. ಹೆಚ್ಚಿಗಿ ಬಾಡಗಿ ಕೊಟ್ಟು ಟ್ರ್ಯಾಕ್ಟರ್‌ ಬಿತ್ತನೆ ಮಾಡಬೇಕಾದರ ಮತ್ತೆ ನಾವು ಸಾಲ ಮಾಡಬೇಕು. ಸಾಲ ಮಾಡ್ತೀವಿ ಛೋಲೊ ಮಳಿ ಬಂದ್ರ ಅದೇ ದೊಡ್ಡ ಉಪಕಾರ ಆಗ್ತದ್ರಿ ಎನ್ನುತ್ತಾರೆ ರೈತರಾದ ಸದ್ದಾಂ ನಾಕೇದಾರ, ವಿಠ್ಠಲ ಕುಡಕಿ, ಭೀಮಾ ಕುಡಕಿ, ರಮೇಶ ಕೆ. ಮಠ.

ಮುಂಗಾರು ನಿರೀಕ್ಷೆಯಷ್ಟು ಬಂದಿಲ್ಲ. ಆದರೂ ಚಿಂತೆಗೀಡಾಗಬೇಕಾಗಿಲ್ಲ. ಮಳೆಯಾಗುವ ಲಕ್ಷಣ ಇವೆ. ಹೀಗಾಗಿ ಮುಂಗಾರು ಬಿತ್ತನೆಗೆ ರೈತರು ಭೂಮಿ ಹದಗೊಳಿಸಿಕೊಳ್ಳಬೇಕು. ತಾಲೂಕಿನ
ಅತನೂರ, ಕರ್ಜಗಿ ಹಾಗೂ ಅಫಜಲಪುರ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರೈತರು ಆನ್‌ಲೈನ್‌ ಅರ್ಜಿ ಸಲ್ಲಿಸಿ
ರಿಯಾಯಿತಿ ದರದಲ್ಲಿ ಬೀಜ ಪಡೆಯಬಹುದು ಎಂದು ಕೃಷಿ ಅಧಿಕಾರಿ ಮಹಮದ್‌ ಖಾಸಿಂ, ತಾಂತ್ರಿಕ ಅಧಿಕಾರಿ ಸರ್ದಾರಭಾಷಾ ನದಾಫ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next