Advertisement

ಮಾತಿನಲ್ಲೇ ರೈತರಿಗೆ ನೀರು ಕುಡಿಸಿದ ಸಲಹಾ ಸಮಿತಿ

02:55 PM Nov 11, 2018 | |

ಆಲಮಟ್ಟಿ: ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿದಿರುವ ಪರಿಣಾಮ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ತುಂಬಿದ್ದರೂ ನವೆಂಬರ್‌ ತಿಂಗಳಲ್ಲಿ ನೀರಿನ ಸಂಗ್ರಹಮಟ್ಟ ಕುಸಿಯಲು ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಒತ್ತಾಯಿಸಿದರೂ ಯಾವುದೇ ಸ್ಪಷ್ಟತೆಯಿಲ್ಲದೇ ನೀರು ಹರಿಸುವ ಬಗ್ಗೆ ಮಾತ್ರ ನಿರ್ಣಯ ಕೈಗೊಳ್ಳಲಾಯಿತು.

Advertisement

ಶನಿವಾರ ಸ್ಥಳೀಯ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ನಡೆದ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮುಖ್ಯ ಅಭಿಯಂತರ ಕೃಷ್ಣೇಗೌಡ ಮಾತನಾಡಿ, ಎರಡೂ ಜಲಾಶಯಗಳಲ್ಲಿರುವ ನೀರಿನ ಲಭ್ಯತೆ ಹಾಗೂ ಅವುಗಳ ಬಳಕೆ ಬಗ್ಗೆ ತಿಳಿಸಿದ್ದರಿಂದ ಸಭೆಯಲ್ಲಿದ್ದ ಶಾಸಕರುಗಳು ತಮ್ಮ ಕ್ಷೇತ್ರಗಳಲ್ಲಿರುವ ಕಾಲುವೆಗಳನ್ನು ನಂಬಿದ ರೈತರ ಹಿತಕಾಪಾಡುವ ಕುರಿತು ಸಭೆಯಲ್ಲಿ ಚರ್ಚಿಸಿದರು.

ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮಾತನಾಡಿ, ಎರಡೂ ಜಲಾಶಯಗಳ ನಿರ್ಮಾಣಕ್ಕೆ ಅವಳಿ ಜಿಲ್ಲೆಯ ನೂರಾರು
ಗ್ರಾಮಗಳು, ಲಕ್ಷಾಂತರ ಎಕರೆ ಜಮೀನು ಕಳೆದುಕೊಂಡು ಲಕ್ಷಾಂತರ ಕುಟುಂಬಗಳು ಸಂತ್ರಸ್ತರಾಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಅವಳಿ ಜಿಲ್ಲೆಯ ರೈತರಿಗೆ ತಲುಪಿಲ್ಲವಾದರೂ ಹಿಂಗಾರು ಹಂಗಾಮಿಗಾದರೂ ಪ್ರಥಮ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಮಾತನಾಡಿದ ಸಮಿತಿ ಅಧ್ಯಕ್ಷ ಶಿವಾನಂದ ಪಾಟೀಲ, ಜಲಾಶಯಗಳಲ್ಲಿ 2016-17ಸಾಲಿಗಿಂತ ಜಲಾಶಯಗಳಲ್ಲಿ ನೀರಿನ ಸಂಗ್ರಹಮಟ್ಟ ಕಡಿಮೆಯಿದೆ. ಇದರಿಂದ ನೀರಿನ ಲಭ್ಯತೆ ಗಮನಿಸಿ ನೀರು ಕೇಳಿ ಎಂದಾಗ ಆಕ್ರೋಶಗೊಂಡ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ,  2015ರಲ್ಲಿ ರಾಜ್ಯದಲ್ಲಿಯೂ ಮಳೆಯಾಗಿರಲಿಲ್ಲ ಮತ್ತು ಕೃಷ್ಣಾ ಜಲಾನಯನ ಪ್ರದೇಶದಲ್ಲಿಯೂ ಸಮರ್ಪಕವಾಗಿ ಮಳೆಯಾಗದಿರುವುದರಿಂದ ಜಲಚರಗಳ ಸಾವಿಗೆ ಕಾರಣವಾಗಿತ್ತು.

ಆದರೆ ಈ ಬಾರಿ ಜಲಾಶಯವೂ ಸಂಪೂರ್ಣ ತುಂಬಿದಾಗ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರಿಂದ ನಾರಾಯಣಪುರ
ಜಲಾಶಯಕ್ಕೆ ನೀರು ಬಿಡಲಾಗಿತ್ತು. ಜಲಾಶಯ ತುಂಬಿದಾಗಲೂ ಸಂತ್ರಸ್ತ ಜಿಲ್ಲೆಗಳ ರೈತರಿಗೆ ನೀರಿಲ್ಲವೆಂದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು.

Advertisement

ಶಾಸಕರಾದ ಶಿವನಗೌಡ ನಾಯಕ, ಬಸವರಾಜ ಪಾಟೀಲ ಇಟಗಿ, ರಾಜುಗೌಡ ನಾಯಕ ಮಾತನಾಡಿ, ಜಲಾಶಯದಲ್ಲಿ ನೀರಿನ ಸಂಗ್ರಹಮಟ್ಟ ಕಡಿಮೆಯಿದ್ದರೂ ಕೂಡ ಕೃಷಿ ಇಲಾಖೆಯಿಂದ ಬೀಜವನ್ನು ಏಕೆ ವಿತರಿಸಿದರು? ಬೀಜ ವಿತರಿಸಿದ್ದರ ಪರಿಣಾಮ ರೈತರು ಶೇಂಗಾ ಹಾಗೂ ಮೆಣಸಿನಕಾಯಿಯನ್ನು ಬಿತ್ತನೆ ಮಾಡಿದ್ದಾರೆ. ಆದ್ದರಿಂದ ಆ ಬೆಳೆಗಳ ಫಸಲು ಬರುವವರೆಗೆ ಕಾಲುವೆಗಳಿಗೆ ನೀರು ಬಿಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಮಾತನಾಡಿ, ನಾನು ಮೂರು ಅವಧಿಗೆ ಕೃ.ಮೇ.ಯೋ. ನೀರಾವರಿ ಸಲಹಾ ಸಮಿತಿ ಅಧ್ಯಕ್ಷನಾಗಿದ್ದ ವೇಳೆಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹಮಟ್ಟ ಕಡಿಮೆಯಿದ್ದಾಗಲೂ ಇಷ್ಟೊಂದು ಪ್ರಮಾಣದಲ್ಲಿ ಕುಸಿತವಾಗಿರಲಿಲ್ಲ. ಕಳೆದ ಬಾರಿ ಇದೇ ದಿನ 119 ಟಿಎಂಸಿ ನೀರಿನ ಸಂಗ್ರಹವಿತ್ತು.  ಆದರೆ ಈ ಬಾರಿ 54 ಟಿಎಮ್‌ಸಿ ನೀರು ಕಡಿಮೆಯಾಗಲು ಹೇಗೆ ಸಾಧ್ಯ? ಯೋಜನೆಗೆ 3 ಲಕ್ಷ ಎಕರೆ ಜಮೀನು 171 ಹಳ್ಳಿಗಳು ನೀರಿನಲ್ಲಿ ಮುಳುಗಿ ತ್ಯಾಗ ಮಾಡಿದರೂ ನವೆಂಬರ್‌ ಆರಂಭದಲ್ಲಿಯೇ ಇಷ್ಟೊಂದು ನೀರು ಎಲ್ಲಿಗೆ ಹೋಯಿತು ಎಂದು ಮುಖ್ಯ ಅಭಿಯಂತರ ಕೃಷ್ಣೇಗೌಡರನ್ನು ಪ್ರಶ್ನಿಸಿದ ಅವರು, ಜೂನ್‌ ಅಂತ್ಯದವರೆಗೂ ಕೃಷ್ಣೆಯನ್ನು ನಂಬಿದ ಜನರ ಗತಿಯೇನು? 2015ರಲ್ಲಿ ಜಲಾಶಯ ತುಂಬಿರದಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ನೀರು ಕಡಿಮೆಯಾಗಿರಲಿಲ್ಲ, ಜನರಿಗೆ ನಾವೇನು ಉತ್ತರ ಕೊಡಬೇಕು? ಈ ಹಿಂದೆ ಮಳೆಯಾಗದಿದ್ದಾಗ ನಮ್ಮ ಜನರು ಬೇರೆ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದರು ಆದರೆ ಈಗ ಇಲ್ಲಿಯೇ ಬೃಹತ್‌ ಜಲಾಶಯ ನಿರ್ಮಿಸಿಕೊಂಡರೂ ಜಲಾಶಯ ಖಾಲಿಯಾಕಾಗುತ್ತಿದೆ ಎಂದು ಸಾಲಾಗಿ ಪ್ರಶ್ನೆಗಳ ಸುರಿಮಳೆಗರೆದರು.

ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಕಾಲುವೆಗಳ ಕೊನೆಯಂಚಿನ ರೈತರ ಜಮೀನಿಗೆ ನೀರು ತಲುಪುತ್ತಿಲ್ಲ ಎಂದರು. ಮಾಜಿಸಚಿವ ಎಸ್‌.ಆರ್‌. ಪಾಟೀಲ ಮಾತನಾಡಿ, ನೀರಾವರಿ ನಿಯಮದಂತೆ ಪ್ರಥಮ ಆದ್ಯತೆಯಾಗಿ ಕಾಲುವೆ ಜಾಲಗಳ ಕೊನೆಯಂಚಿನ ರೈತರಿಗೆ ನೀರು ತಲುಪಿಸಿದ ನಂತರ ಉಳಿದವರಿಗೆ ನೀರುಣಿಸಬೇಕಾಗುತ್ತದೆ. ನೀರು ನಿರ್ವಹಣೆಯಲ್ಲಿ ಅಧಿಕಾರಿಗಳ ವೈಫಲ್ಯಕ್ಕೆ ಅಧಿಕಾರಿಗಳೇ ಹೊಣೆ. ಅಧಿಕಾರಿಗಳಿಗೆ ಭದ್ರತೆ ಅವಶ್ಯಕತೆಯಿದ್ದರೆ ಪೊಲೀಸರ ಸಹಾಯ ಪಡೆದು ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕರುಗಳಾದ ರಾಜುಗೌಡ ನಾಯಕ,  ವನಗೌಡ ನಾಯಕ, ದೊಡ್ಡನಗೌಡ ಪಾಟೀಲ, ಸುನೀಲಗೌಡ ಪಾಟೀಲ, ಆನಂದ ನ್ಯಾಮಗೌಡ, ದೇವಾನಂದ ಚವ್ಹಾಣ, ಹನುಮಂತ ನಿರಾಣಿ, ಮುರುಗೇಶ ನಿರಾಣಿ, ವೆಂಕಟರೆಡ್ಡಿ ಮುದ್ನಾಳ, ಬಿ.ಬಿ. ನಾಯಕ, ಬಿ.ಎಸ್‌. ಹೂಲಗೇರಿ, ಸೋಮನಗೌಡ ಪಾಟೀಲ (ಸಾಸನೂರ), ಸಚಿವ ಎಂ.ಸಿ. ಮನಗೂಳಿ, ವ್ಯವಸ್ಥಾಪಕ ನಿರ್ದೇಶಕ ವಿ.ಶಂಕರ ಸೇರಿದಂತೆ ಕೆಬಿಜೆಎನ್‌ಎಲ್‌ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next