Advertisement

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

11:51 PM May 17, 2024 | Team Udayavani |

ಬೆಂಗಳೂರು ರೈತರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬ್ಯಾಂಕ್‌ಗಳಿಗೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಿ.

Advertisement

ಬ್ಯಾಂಕ್‌ಗಳು ಒಪ್ಪದಿದ್ದರೆ ಸರಕಾರ ರೈತರ ಸಾಲ ಮನ್ನಾ ಮಾಡಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕರ್ನಾಟಕದ ರೈತರಿಗಾಗಿ 3, 454 ಕೋಟಿ ರೂ. ಬರ ಪರಿಹಾರವನ್ನು ಬಿಡುಗಡೆಗೊಳಿಸಿದೆ. ಆದರೆ ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ತನ್ನ ಪಾಲಿನ ಹಣವನ್ನು ನೀಡಿಲ್ಲ. ಕೇಂದ್ರ ಸರಕಾರ ನೀಡಿದ ಹಣವನ್ನು ಕೂಡ ರೈತರಿಗೆ ಸರಿಯಾಗಿ ತಲುಪಿಸಿಲ್ಲ. ಈ ಪರಿಹಾರದ ಹಣವನ್ನು ಹಳೆ ಬಾಕಿಗಳಿಗೆ ಬ್ಯಾಂಕುಗಳು ಜಮೆ ಮಾಡುತ್ತಿದ್ದರೂ ರಾಜ್ಯ ಸರಕಾರ ತತ್‌ಕ್ಷಣದ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದೆ ಎಂದು ಆರೋಪಿಸಿದ್ದಾರೆ.

ಈಗ ಪಿಂಚಣಿ, ನರೇಗಾ ಹಣವೂ ರೈತರ ಕೈ ಸೇರುವಂತೆ ನೋಡಿಕೊಳ್ಳಲು ಸರಕಾರ ವಿಫ‌ಲವಾಗಿದೆ. ಈ ಮೂಲಕ ಅನ್ನದಾತರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕೂಡಲೇ ಬ್ಯಾಂಕ್‌ ಅಧಿಕಾರಿಗಳ ಸಭೆ ಕರೆದು ರೈತರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚನೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕು. ಬ್ಯಾಂಕ್‌ಗಳು ಒಪ್ಪದಿದ್ದರೆ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದಿನ ಬಿಜೆಪಿ ಸರಕಾರ ಪ್ರವಾಹ ವಿಕೋಪದಿಂದ ಹಾನಿಗೊಳಗಾದ ವರಿಗೆ ದುಪ್ಪಟ್ಟು ಪರಿಹಾರ ನೀಡಿತ್ತು. ಕೇಂದ್ರ ಸರಕಾರದ ಜತೆಗೆ ರಾಜ್ಯದ ಪಾಲನ್ನೂ ನೀಡಲಾಗಿತ್ತು. ಈಗ ದಿವಾಳಿ ಆಗಿ ಖಾಲಿ ಖಜಾನೆಯಲ್ಲಿ ಚಿಲ್ಲರೆ ಎಷ್ಟು ಉಳಿದಿದೆ ಎಂದು ಎಣಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತರ ಸಂಕಷ್ಟಕ್ಕೂ ಮಿಡಿಯದೆ ಸುಮ್ಮನಿದ್ದಾರೆ ಎಂದು ಟೀಕಿಸಿದ್ದಾರೆ.

Advertisement

ಸಹಾಯಧನ ಘೋಷಿಸಿ
ಕಳೆದ ವರ್ಷ ಹಿಂಗಾರು, ಮುಂಗಾರು ಎರಡೂ ಕೈ ಕೊಟ್ಟಿದ್ದರಿಂದ ಈ ವರ್ಷ ರೈತರ ಬಳಿ ಬಿತ್ತನೆ ಬೀಜ, ರಸಗೊಬ್ಬರ ಕೊಳ್ಳಲು, ಉಳುಮೆ ಮಾಡಲೂ ಸಹ ಹಣವಿಲ್ಲದ ಪರಿಸ್ಥಿತಿ ಇದೆ. ಆದ್ದರಿಂದ ಈ ಕೂಡಲೇ ಪ್ರತಿ ಎಕ್ರೆಗೆ 5,000 ರೂ.ಯಂತೆ ರೈತರಿಗೆ ವಿಶೇಷ ಸಹಾಯಧನ ಘೋಷಿಸಬೇಕು. ಇಲ್ಲವಾದಲ್ಲಿ ಈ ಬಾರಿಯೂ ಕೃಷಿ ಬೆಳೆಗಳು ಕೈ ಕೊಟ್ಟು ಆಹಾರ ಪದಾರ್ಥಗಳ ಕೊರತೆಯಿಂದ ಹಣದುಬ್ಬರ ಉಂಟಾಗಿ ತೀವ್ರ ಬೆಲೆ ಏರಿಕೆ ಆಗುವುದು ನಿಶ್ಚಿತ. ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನಾಡಿನ ಕೃಷಿ ಚಟುವಟಿಕೆಯನ್ನು ಉಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಾಲಕ್ಕೆ ಕಡಿತ ಮಾಡಿಕೊಂಡಿಲ್ಲ: ಶಿವಾನಂದ ಪಾಟೀಲ್‌
ಬೆಂಗಳೂರು: ರೈತರಿಗೆ ನೀಡಿದ ಬರ ಪರಿಹಾರ ಹಣವನ್ನು ಬ್ಯಾಂಕ್‌ಗಳು ಸಾಲದ ಭಾಗವಾಗಿ ಕಡಿತ ಮಾಡಿಕೊಳ್ಳಲು ಅವಕಾಶ ಇಲ್ಲ. ಅಂತಹ ಘಟನೆಗಳೂ ನಡೆದಿಲ್ಲ ಎಂದು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಅಡಿ ನೀಡಲಾದ ಹಣ ಬ್ಯಾಂಕ್‌ಗಳ ಸಾಲ ಮರುಪಾವತಿ ರೂಪದಲ್ಲಿ ಕಡಿತ ಆಗುತ್ತಿಲ್ಲ. ಆ ರೀತಿ ಮಾಡಬಾರದು ಅಂತ ಸೂಚನೆ ನೀಡಲಾಗಿದೆ. ಅಂತಹ ಘಟನೆಗಳು ಎಲ್ಲಿಯೂ ಆಗಿಲ್ಲ. ಒಂದು ವೇಳೆ ನಡೆದಿದ್ದರೂ ಅದನ್ನು ಮರುಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

ಈ ಸಂಬಂಧ ಸರಕಾರದ ಆದೇಶವೇ ಇದೆ. ಸ್ವತಃ ಮುಖ್ಯಮಂತ್ರಿ ಕೂಡ ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ¨ªಾರೆ. ಈ ರೀತಿಯ ಮಾಹಿತಿ ಬಿಜೆಪಿಗರಲ್ಲಿ ಇದ್ದರೆ ಸರಕಾರಕ್ಕೆ ಕೊಡಲಿ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next