Advertisement

ಅಸ್ತವ್ಯಸ್ತ ಮನೆಯನ್ನು ಸುಂದರವಾಗಿಸಲು ಸಲಹೆ

09:40 PM Oct 04, 2019 | Team Udayavani |

ಮನೆ ಎಂದ ಮೇಲೆ ಹಲವು ವಸ್ತುಗಳು ಇರುವುದು ಸರ್ವೇ ಸಾಮಾನ್ಯ. ಆ ವಸ್ತುಗಳಲ್ಲಿ ಬೇಕಾಗಿರುವುದು, ನಿತ್ಯದ ಬಳಕೆಗೆ ಬೇಡವಾಗಿರವುದು, ತಿಂಗಳಿಗೊಮ್ಮೆ, ವರುಷಕ್ಕೆ ಹೊರ ತೆಗೆಯುವ ವಸ್ತುಗಳು ಹೀಗೆ ಅನೇಕ ವಿಧಗಳಿರುತ್ತವೆ. ಅವುಗಳು ಮನೆಯನ್ನು ಅಸ್ತವ್ಯಸ್ತಗೊಳಿಸುತ್ತವೆ. ಇಂತಹ ವಸ್ತುಗಳನ್ನು ಶುಚಿಯಾಗಿರಿಸುವುದು ತಲೆನೋವಿನ ವಿಷಯ. ಮನೆಯನ್ನು ಸ್ವತ್ಛಗೊಳಿಸುವುದೆಂದರೆ ಮುಟ್ಟಿದರೆ ಮುನಿಯುವ ಮುಳ್ಳಿನಂತೆ.

Advertisement

ಇದಕ್ಕೆ ಪರ್ಯಾಯವಾಗಿ ಅನೇಕ ಜನರು ಇಂದು ಕನಿಷ್ಠ ಜೀವನ ಕಲ್ಪನೆಯನ್ನು ಇಷ್ಟಪಡುತ್ತಿದ್ದಾರೆ. ತಮ್ಮ ಪ್ರತಿದಿನದ ಅಗತ್ಯಗಳಿಗೆ ಸಾಕಾಗುವಷ್ಟು ವಸ್ತುಗಳನ್ನು ಮಾತ್ರ ಕಣ್ಮುಂದೆ ಕಾಣುವಂತೆ ಇಡುವುದು. ವಸ್ತುಗಳ ನಿರ್ವಹಣೆ ಕಡಿಮೆಗೊಳಿಸಲು ಹಾಗೂ ಅಸ್ತವ್ಯಸ್ತವಿಲ್ಲದ, ಗೊಂದಲಗಳಿಲ್ಲದ ಮನೆಗಾಗಿ ಎಲ್ಲರೂ ಈ ಕನಿಷ್ಠ ಜೀವನ ಕಲ್ಪನೆಗೆ ಮೊರೆ ಹೋಗುತ್ತಿದ್ದಾರೆ.

ಇದೀಗ ಈ ಹೊಸ ಕಲ್ಪನೆಗೆ ಪೂರಕವಾಗುವಂತೆ ಮನೆ ಅಸ್ತವ್ಯಸ್ತವಿಲ್ಲದಂತೆ ಮಾಡುವುದು ಹೇಗೆ ಎಂಬುದು ಪ್ರಶ್ನೆ. ಅದಕ್ಕೆ ಇಲ್ಲಿದೆ ಕೆಲವೊಂದು ಸಲಹೆಗಳು

ವಸ್ತುಗಳನ್ನು ವಿಂಗಡಿಸಿ
ಕೋಣೆಯಲ್ಲಿರುವ ಅನಗತ್ಯ ವಸ್ತುಗಳನ್ನು ತೆರೆವುಗೊಳಿಸುವ ವೇಳೆ ಅವುಗಳನ್ನು ಏನು ಮಾಡಲಿದ್ದೀರಿ ಎಂಬುವುದರ ಆಧಾರದ ಮೇಲೆ 4 ವಿಭಿನ್ನ ಚೀಲಗಳನ್ನು ಆಯ್ಕೆ ಮಾಡಿಕೊಳ್ಳಿ. ಇದರನ್ವಯ ಮರುಬಳಕೆ/ಅಪ್‌ಸೆçಕಲ್‌, ದುರಸ್ತಿಯ ಅಗತ್ಯವಿರುವ ವಸ್ತುಗಳು, ಕಸದ ಬುಟ್ಟಿಗೆ ಹಾಗೂ ದಾನ ಮಾಡುವ ವಸ್ತುಗಳನ್ನಾಗಿ ವಿಂಗಡಿಸಿ. ಈಗ ಸ್ವತ್ಛತಾ ಕಾರ್ಯಕ್ಕೆ ಒಂದು ಸ್ವರೂಪ ಬರುವುದು. ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ಬೇರೆಯದ್ದಾಗಿ, ದಾನ ಮಾಡುವ ವಸ್ತುಗಳನ್ನು ಬೇರೆಯದ್ದಾಗಿ ಇಟ್ಟಾಗ ಯಾವುದೇ ಗೊಂದಲಗಳಾಗುವ ಪ್ರಮೇಯ ಇರುವುದಿಲ್ಲ.

ಒಂದೇ ದಿನದ ಕೆಲಸವಲ್ಲ
ಅಸ್ತವ್ಯಸ್ತ ಮನೆಯಲ್ಲಿ ಶುಚಿಗೊಳಿಸುವುದು ಒಂದು ದಿನದ ಕೆಲಸವಲ್ಲ. ಒಂದೇ ದಿನದಲ್ಲಿ ಈ ಕೆಲಸ ಮಾಡಿ ಮುಗಿಸುತ್ತೇನೆಂದರೆ ಸಂಜೆಯ ವೇಳೆ ಹೈರಾಣಾವಾಗಿ ಹೋಗುವುದರಲ್ಲಿ ಸಂಶಯವಿಲ್ಲ. ಒಂದು ವೇಳೆ ಈ ಪ್ರಯತ್ನ ಮಾಡಿದ್ದೇ ಆದಲ್ಲಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುತ್ತೀರಿ. ಹಂತ ಹಂತವಾಗಿ ಮನೆಯ ಈ ಕೆಲಸವನ್ನು ಮಾಡುವುದು ಒಳಿತು. ಆಗ ಯಾವುದೇ ಗೊಂದಲ, ಆತಂಕಗಳಿಲ್ಲದೇ ಮನೆಯನ್ನು ಸುಂದರಗೊಳಿಸಬಹುದು. ಒಂದು ಕೋಣೆ ಅಥವಾ ಕೋಣೆಯ ಮೂಲೆಯಲ್ಲಿರುವ ಅನಗತ್ಯ ವಸ್ತುಗಳನ್ನು ತೆರವುಗೊಳಿಸುತ್ತ ಬಂದರೆ ನಿಮ್ಮ ಕೆಲಸ ಸುಗಮವಾಗುವುದು. ಒಂದೇ ದಿನದಲ್ಲಿ ಬೇಕು ಬೇಡದ ವಸ್ತುಗಳು ಯಾವುದೆಂದು ನಿರ್ಧರಿಸುವುದು ಕಷ್ಟ. ಹೀಗಾಗಿ ಒಂದು ಕೋಣೆ ಮೂಲೆಯಿಂದ ಆರಂಭಿಸಿ. ಇದಕ್ಕಾಗಿ ದೈನಂದಿನ ಎಲ್ಲ ಕೆಲಸಗಳನ್ನು ಬೇಗನೆ ಮುಗಿಸಿ ಸಮಯ ಮೀಸಲಿಡಿ. ಕೋಣೆಯಲ್ಲಿ ಕೂತು ಅಲ್ಲಿನ ವಸ್ತುಗಳನ್ನು ಹರಡಿ. ಯಾವುದು ಬೇಕು, ಯಾವುದು ಬೇಡ ಎಂಬ ಆಯ್ಕೆ ಮಾಡಿಕೊಂಡು ನಿಧಾನಕ್ಕೆ ನಿಮ್ಮ ಸ್ವತ್ಛತಾ ಕಾರ್ಯ ಆರಂಭಿಸಿ.

Advertisement

ಮಾಡುವುದೇನು?
ಹೀಗೆ ವಿಂಗಡಿಸಿದ ವಸ್ತುಗಳನ್ನು ಏನು ಮಾಡುವುದು ಎಂಬ ಯೋಚನೆ ಬಂದಾಗ ಶೇ.80ರಷ್ಟು ಬಳಕೆ ಮಾಡದ ವಸ್ತುಗಳನ್ನು ಕಸಕ್ಕೆ ಹಾಕಿ ಬಿಡಿ. ದುರಸ್ತಿಗೆ ಯೋಗ್ಯವಾದ ವಸ್ತುಗಳನ್ನು ಒಂದು ಬಾಕ್ಸ್‌ನಲ್ಲಿ ಹಾಕಿ ದುರಸ್ತಿ ಮಾಡಿಸಿ ಬಳಕೆಗೆ ಯೋಗ್ಯವಾಗುವಂತೆ ಮಾಡಿ ಮನೆಯ ಸ್ಟೋರ್‌ ರೂಮಿನಲ್ಲಿರಿಸಿ. ದಾನ ಮಾಡುವ ವಸ್ತುಗಳನ್ನು ಕೂಡ ಶುಚಿಗೊಳಿಸಿ, ಸುಂದರಗೊಳಿಸಿ ಯಾರಿಗೆ ಅವುಗಳ ಅಗತ್ಯವಿರುವವರಿಗೆ ನೀಡಿ. ಇದರಿಂದ ಉಪಯೋಗವಿಲ್ಲದ ವಸ್ತುಗಳು ಮನೆಯ ಹೊರಹೋದಂತಾಗುತ್ತದೆ.

-  ಆರ್‌.ಕೆ

Advertisement

Udayavani is now on Telegram. Click here to join our channel and stay updated with the latest news.

Next