Advertisement

ಜೀವನ ಮೌಲ್ಯ ಅಳವಡಿಸಿಕೊಳ್ಳಲು ಸಲಹೆ

05:53 PM May 09, 2022 | Team Udayavani |

ಯಲ್ಲಾಪುರ: ಎಲ್ಲ ವೇದ ಹಾಗೂ ಧರ್ಮಗಳು ಸಾಮಾಜಿಕ ಸಹಬಾಳ್ವೆಯ ವಿಷಯ ಸಾರಿವೆ. ಸತ್ಯ, ಪ್ರಾಮಾಣಿಕತೆ, ಪರೋಪಕಾರ, ರಾಷ್ಟ್ರಪ್ರೇಮ, ಸಾಮಾಜಿಕ ಕಳಕಳಿ ಮೊದಲಾದ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡವರು ಉತ್ತಮ ಪ್ರಜೆಯಾಗುತ್ತಾರೆ ಎಂದು ಕೇಂದ್ರ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಹಾಗೂ ದೆಹಲಿ ಸರ್ಕಾರದ ಮಾಹಿತಿ ಹಾಗೂ ತಂತ್ರಜ್ಞಾನ ವಿಭಾಗದ ನಿವೃತ್ತ ಸಲಹೆಗಾರರಾದ ಸಿ.ವಿ. ಗೋಪಿನಾಥ ಹೇಳಿದರು.

Advertisement

ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವದರ್ಶನ ಕರಿಯರ್‌ ಅಕಾಡೆಮಿ ಹಾಗೂ ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ)ದ ಪ್ರೇರಣಾ ತರಗತಿ ಉಪನ್ಯಾಸ ಮಾಲಿಕೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಪ್ರತಿ ಮಗುವೂ ತಾಯಿಯನ್ನು ಅನುಕರಣೆ ಮಾಡುತ್ತದೆ. ಹೀಗಾಗಿ ಮಕ್ಕಳಿಗೆ ಜೀವನದ ಮೌಲ್ಯಗಳನ್ನು ರೂಢಿಸುವ ಜವಾಬ್ದಾರಿ ಪೋಷಕರ ಮೇಲಿದೆ. ಪೋಷಕರು ರೂಢಿಸಿದ ಮೌಲ್ಯಗಳನ್ನು ಬೆಳೆಸುವ ಹಾಗೂ ತಪ್ಪುಗಳನ್ನು ತಿದ್ದುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.

ಸಮಾಜದ ಶ್ರೇಷ್ಠರು ಸಾಮಾಜಿಕ ಮೌಲ್ಯಗಳನ್ನು ಬಿತ್ತುತ್ತಾರೆ. ಮೌಲ್ಯಗಳು ಮನುಷ್ಯನಲ್ಲಿ ನಿಧಾನವಾಗಿ ಬೇರೂ ರುತ್ತವೆ. ಅಂತರಾಳದಲ್ಲಿ ಹುದುಗಿರುವ ಸಂಸ್ಕಾರ ಅನೇಕ ಮಜಲುಗಳಾಗಿ ಹೊರಬರುತ್ತದೆ. ಸಂಸ್ಕಾರದ ಮೌಲ್ಯ ಗಳನ್ನು ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದರು.

ಪಾಠ ಮಾಡುವ ಶಿಕ್ಷಕರು ಮಕ್ಕಳಿಗೆ ನೈಜ ಘಟನೆ ಆಧಾರಿತ ಭಾವನಾತ್ಮಕ ವಿಷಯಗಳ ಬಗ್ಗೆ ಹೆಚ್ಚು ತಿಳಿಸಬೇಕು. ಪ್ರತಿ ಮುಗುವಿಗೂ ಸತ್ಯ, ಪ್ರಾಮಾಣಿಕತೆ, ಪರೋಪಕಾರ, ರಾಷ್ಟ್ರಪ್ರೇಮ, ಸಾಮಾಜಿಕ ಕಳಕಳಿ, ಕಾನೂನು ಗೌರವಿಸುವ ಸಂಸ್ಕಾರಯುತ ಶಿಕ್ಷಣ ನೀಡಬೇಕು. ನಂಬಿಕೆ ಹಾಗೂ ಆತ್ಮ ವಿಶ್ವಾಸ ಹೆಚ್ಚಿಸುವ ವಿಷಯಗಳನ್ನು ಅವರಿಗೆ ತಿಳಿಸಬೇಕು. ಪ್ರತಿಯೊಬ್ಬರು ತಲುಪಬೇಕಾದ ಗುರಿಗಾಗಿ ನಿರಂತರ ಪ್ರಯತ್ನ ನಡೆಸಬೇಕು. ಗುರಿ ತಲುಪಿದ ನಂತರ ತಮ್ಮ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಡಬೇಕು ಎಂದರು.

Advertisement

ಶಿಕ್ಷಣ ಪ್ರೇಮಿ ನಾರಾಯಣ ಹೆಗಡೆ ಗಡಿಕೈ ಮಾತನಾಡಿ, ಗಣ್ಯ ವ್ಯಕ್ತಿಗಳ ಸ್ಫೂರ್ತಿದಾಯಕ ಮಾತುಗಳು ಸಾಧನೆಗೆ ಪ್ರೇರಣೆಯಾಗುತ್ತವೆ ಎಂದರು.

ಸಂಸ್ಥೆ ಕಾರ್ಯದರ್ಶಿ ನರಸಿಂಹ ಕೋಣೆಮನೆ ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಸೇವೆಗೆ ವಿಶ್ವದರ್ಶನ ಬದ್ಧವಾಗಿದೆ ಎಂದರು.

ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಹಾಗೂ ವಿವಿಧ ಅಂಗಸಂಸ್ಥೆಯ ಮುಖ್ಯಸ್ಥರು ಹಾಜರಿದ್ದರು. ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ|ಎಸ್‌.ಎಲ್‌. ಭಟ್ಟ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಶಿವಪ್ರಸಾದ ಭಟ್ಟ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next