Advertisement

ಕ್ರಾಂತಿಕಾರಿಗಳ ಆಶಯ ಈಡೇರಿಸಲು ಸಲಹೆ

04:32 PM Sep 29, 2020 | Suhan S |

ವಿಜಯಪುರ: ಬ್ರಿಟೀಷರ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಕ್ರಾಂತಿಕಾರಿಗಳ ಕೊಡುಗೆ ಅನನ್ಯ. ಕೇವಲ ಸ್ವಾತಂತ್ರ್ಯ ಸಿಕ್ಕರೆ ಸಾಲದು ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ದುಡಿಯುವ ಕೈಗಳಿಗೆ ಅಧಿ ಕರ ಸಿಗಬೇಕು ಎಂಬ ಮಹೋನ್ನತ ಕನಸು ಕಂಡಿದ್ದ ಕ್ರಾಂತಿಕಾರಿಗಳ ಆಶಯ ಈಡೇರಿಸುವ ಹೊಣೆ ಇಂದಿನ ಯುವ ಜನಾಂಗದ ಮೇಲಿದೆ ಎಂದು ಎಐಡಿವೈಒ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ ಅಭಿಪ್ರಾಯಪಟ್ಟರು.

Advertisement

ಸೋಮವಾರ ನಗರದ ಹುತಾತ್ಮರ ವೃತ್ತದಲ್ಲಿ ಎಐಡಿವೈಒ ಹಮ್ಮಿಕೊಂಡಿದ್ದ ಮಹಾನ್‌ ಕ್ರಾಂತಿಕಾರಿ ಭಗತ್‌ಸಿಂಗ್‌ ಅವರ 113ನೇ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಗತ್‌ಸಿಂಗ್‌ ಅವರ ಜೀವನ ಹಾಗೂ ವಿಚಾರಗಳು ಇಂದಿನ ಯುವ ಸಮುದಾಯದ ಎದೆಯಲ್ಲಿ ಅನ್ಯಾಯದ ವಿರುದ್ಧ, ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರೇರಣೆ ನೀಡಲಿ ಎಂದು ಆಶಿಸಿದರು.

ಭಾರತ ಸ್ವಾಂತತ್ರ್ಯ ಸಂಗ್ರಾಮದಲ್ಲಿ ಪ್ರಧಾನವಾಗಿ ಪರಸ್ಪರ ತದ್ವಿರುದ್ಧವಾದ ಎರಡು ವಿಚಾರಧಾರೆಗಳು ಪ್ರಮುಖ ಪಾತ್ರ ವಹಿಸಿದ್ದವು. ಸಾಮ್ರಾಜ್ಯ ಶಾಹಿ ಬ್ರಿಟಿಷ್‌ ವ್ಯವಸ್ಥೆ ವಿರುದ್ಧ ರಾಜಿರಹಿತ ಹೋರಾಟದ ನಿಲುವಿನ ಕ್ರಾಂತಿಕಾರಿ ಭಗತ್‌ಸಿಂಗ್‌ ಅವರಂಥ ಅಗ್ರಮಾನ್ಯ ನಾಯಕರ ಒಂದು ವ್ಯವಸ್ಥೆ ಹೋರಾಟದಲ್ಲಿ ನಿರತವಾಗಿತ್ತು. ಬ್ರಿಟಿಷ್‌ ಆಡಳಿತದೊಂದಿಗೆ ರಾಜಿ-ಸಂಧಾನದ ಮೂಲಕ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳುವ ಮತ್ತೂಂದು ವ್ಯವಸ್ಥೆ ಗಾಂಧಿಧೀಜಿ ನೇತೃತ್ವದಲ್ಲಿ ಶಾಂತಿ ಮಂತ್ರ ಪಠಿಸುತ್ತಿತ್ತು ಎಂದು ವಿಶ್ಲೇಷಿಸಿದರು.

ಬ್ರಿಟಿಷರ ನಂತರ ಅವರ ಜಾಗದಲ್ಲಿ ಭಾರತೀಯ ಬಂಡವಾಳ ಶಾಹಿ ಆಡಳಿತ ವ್ಯವಸ್ಥೆ ದೇಶದ ರೈತರು, ಕಾರ್ಮಿಕರನ್ನು ಶೋಷಿಸುವ ಸ್ವಾತಂತ್ರ್ಯ ನಮಗೆ ಬೇಕಿಲ್ಲ. ಇಂಥ ವ್ಯವಸ್ಥೆ ರೂಪಿಸುವಲ್ಲಿ ಶಾಂತಿ ಮಂತ್ರ ಜಪಿಸಿದರೆ ಸಾಲದು, ಕ್ರಾಂತಿಕಾರಿ ಹೋರಾಟಕ್ಕೆ ಧುಮುಕಲೇಬೇಕು ಎಂದು ಕ್ರಾಂತಿಕಾರಿ ನಾಯಕರು ನಂಬಿದ್ದರು. ಪರಿಣಾಮವೇ ಹಿಂದುಸ್ತಾನ ಸೋಷಲಿಸ್ಟ್‌ ರಿಪಬ್ಲಿಕನ್‌ ಅಸೋಶಿಯೇಶನ್‌ ಪಕ್ಷ ಸ್ಥಾಪಿಸಿ ಬ್ರಿಟಿಷರ ವಿರುದ್ಧ ರಾಜಿರಹಿತ ಹೋರಾಟಕ್ಕೆ ಮುಂದಾದರು.

ಬ್ರಿಟಿಷ್‌ ವ್ಯವಸ್ಥೆ ಮೋಸದಿಂದ ಬಂಧಿಸಿದಾಗಲೂ ಕ್ರಾಂತಿಕಾರಿ ಭಗತ್‌ ಸಿಂಗ್‌ ನೇತೃತ್ವದಲ್ಲಿ ಬ್ರಿಟಿಷ್‌ ಆಡಳಿತದ ನ್ಯಾಯಾಲಯದಲ್ಲಿ ಕ್ರಾಂತಿಕಾರಿ ಹೋರಾಟದ ಅಗತ್ಯವನ್ನು ಪ್ರತಿಪಾದಿಸಿದರು. ಇದರಿಂದ ಅಧೀರವಾದ ಬ್ರಿಟಿಷ್‌ ಆಡಳಿತ ಅಖಂಡ ಭಾರತದಲ್ಲಿ ಕ್ರಾಂತಿಕಾರಿಗಳ ಶಕ್ತಿ ಕುಂದಿಸಲು ಹುನ್ನಾರ ನಡೆಸಿತು ಎಂದು ಹೇಳಿದರು.

Advertisement

ಕ್ರಾಂತಿಕಾರರ ಹೋರಾಟ ಹತ್ತಿಕ್ಕಲು ಬ್ರಿಟಿಷ್‌ ಸರ್ಕಾರ ಕ್ರಾಂತಿಕಾರಿ ನಾಯಕರಾಗಿದ್ದ ಭಗತ್‌ಸಿಂಗ್‌, ಸುಖದೇವ್‌ ಹಾಗೂ ರಾಜಗುರು ಅವರಿಗೆ ಮರಣ ದಂಡನೆ ಶಿಕ್ಷೆ ವಿ ಧಿಸಿತ್ತು. ಗಲ್ಲು ಶಿಕ್ಷೆ ವಿಧಿ ಸಿದರೂ ಚಿಂತಿತರಾಗದ ಕ್ರಾಂತಿಕಾರಿಗಳು, ಬ್ರಿಟಿಷರು ಪ್ರಾಣ ಭಿಕ್ಷೆ ನೀಡಲು ಮುಂದಿಟ್ಟಿದ್ದ ಕ್ಷಮೆಯಾಚನೆ ಅವಕಾಶವನ್ನು ಧಿಕ್ಕರಿಸಿ ನಗುತ್ತಲೇ ನೇಣು ಕುಣಿಕೆಗೆ ಕೊರಳೊಡ್ಡಿದ್ದರು ಎಂದು ಹುತಾತ್ಮ ಕ್ರಾಂತಿವೀರರ ಹೋರಾಟಗಳನ್ನು ವಿವರಿಸಿದರು.

ಎಐಡಿವೈಒ ಸಂಘಟನೆಯ ಭರತಕುಮಾರ ಮಾತನಾಡಿ, ಭಗತ್‌ಸಿಂಗ್‌ ಹಾಗೂ ಗಾಂಧಿಧೀಜಿ ಅವರ ಮಧ್ಯದ ವೈರುಧ್ಯ ಕೇವಲ ವೈಚಾರಿಕವಾದದ್ದೇ ಹೊರತು ವೈಯಕ್ತಿಕವಾಗಿರಲಿಲ್ಲ. ಭಗತ್‌ಸಿಂಗ್‌ರ ಕನಸಿನ ಭಾರತಕ್ಕಾಗಿ ನಾವು ಹೋರಾಡುವ ಮೂಲಕ ನಾವು ಕ್ರಾಂತಿಕಾರಿಗಳ ನೈಜ ಉತ್ತರಾಧಿಕಾರಿಗಳಾಗಬೇಕು ಎಂದರು. ಹನುಮಂತ ಅಜ್ಜ, ನೀಲು ಪಾಟೀಲ, ಗುರು ಬಸರಕೋಡ, ಅಶೋಕ, ಸುರೇಶ, ದೀಪಕ್‌ ಸೇರಿದಂತೆ ಇತರರು ಭಾಗವಹಿಸಿದ್ದರು. ರಾಹುಲ್‌ ಕ್ರಾಂತಿಗೀತೆ ಹಾಡಿದರು.

ಎಐಡಿಎಸ್‌ಒ: ಸ್ವಾತಂತ್ರ್ಯ ಹುತಾತ್ಮ ಹೋರಾಟಗಾರ ಭಗತ್‌ಸಿಂಗ್‌ ಅವರ 113ನೇ ಜನ್ಮೋತ್ಸವದ ನಿಮಿತ್ಯ ಎಐಡಿಎಸ್‌ಒ ಸಂಘಟನೆ ಮನೆ ಮನೆಯಲ್ಲಿ ಭಗತ್‌ಸಿಂಗ್‌ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಗರದ ನವಬಾಗ ಎಐಡಿಎಸ್‌ಒ ಕಚೇರಿಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುರೇಖಾ ಕಡಪಟ್ಟಿ ನೇತೃತ್ವದಲ್ಲಿ ಭಗತ್‌ ಸಿಂಗ್‌ ಜನ್ಮೋತ್ಸವ ಆಚರಿಸಲಾಯಿತು. ದುಂಡೇಶ ಬಿರಾದಾರ, ಮುಸ್ತಾಫ್‌ ಪಾರ್ತನಳ್ಳಿ, ಸೈಯ್ಯದ ಮೆಹುಮೂಜ ಖಾಜಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿದರು

Advertisement

Udayavani is now on Telegram. Click here to join our channel and stay updated with the latest news.

Next