Advertisement

ರೈತರಿಗೆ ಸಲಹೆ

12:50 PM May 11, 2020 | mahesh |

ಲಾಭದ ರೂಪದಲ್ಲಿ ಕೆಲವೇ ಸಾವಿರ ರೂಪಾಯಿ ಸಿಕ್ಕರೂ ಸಾಕು, ಅದರಿಂದ ಏನಾದರೂ ವಸ್ತುವನ್ನು ಖರೀದಿಸುವುದು, ಆ ಮೂಲಕ ಒಂದು ಉತ್ಪನ್ನದ ಬೇಡಿಕೆ ಹೆಚ್ಚಲು ಕಾರಣನಾಗುವುದು ರೈತಾಪಿ ಜನರ ವಿಶೇಷ ಗುಣ. ರೈತರ ಬೆಳೆಗೆ ಬೆಲೆಯೇ ಸಿಕ್ಕದೇಹೋದರೆ? ಆಗ ಮಾರುಕಟ್ಟೆ ಕಂಡುಕೊಳ್ಳಲು ಏನು ಮಾಡಬೇಕೆಂದರೆ…

Advertisement

ಕೋವಿಡ್ ಕಾರಣದಿಂದ ಲಾಕ್‌ಡೌನ್‌ ಶುರು ಆಯಿತಲ್ಲ; ಅದರ ಪರಿಣಾಮವಾಗಿ ಅಂಗಡಿಗಳು ಬಾಗಿಲೆಳೆದುಕೊಂಡವು. ಸಂತೆಗಳು ರದ್ದಾದವು. ಮಾರ್ಕೆಟ್‌ ಎಂಬ ಗಿಜಿಗಿಜಿ ತಾಣ, ಖಾಲಿ ಅಂಗಳವಾಗಿ ಬದಲಾಯಿತು. ಇದರಿಂದ ದೊಡ್ಡ ಹೊಡೆತ ಬಿದ್ದದ್ದು ರೈತ ಸಮುದಾಯಕ್ಕೆ. ತೆಂಗು, ಬಾಳೆ, ನಿಂಬೆ, ಸೀಬೆ, ಕೋಸು, ಈರುಳ್ಳಿ, ಟೊಮೆಟೊ, ಬೂದುಗುಂಬಳ,
ಆಲೂಗಡ್ಡೆ, ಕಲ್ಲಂಗಡಿ, ಮಾವು, ಸೊಪ್ಪು, ತರಕಾರಿ -ಇವೆಲ್ಲಾ, ರೈತರಿಗೆ ಆದಾಯದ ಮೂಲವಾಗಿರುವ ಬೆಳೆಗಳು. ಇಂಥ ಬೆಳೆಗಳಿಂದ, ತನ್ನ ಆರ್ಥಿಕ ಮಟ್ಟವನ್ನು ಸ್ವಲ್ಪ ಸುಧಾರಿಸಿಕೊಳ್ಳುವ ಆಸೆ ಎಲ್ಲ ರೈತರಿಗೂ ಇರುತ್ತದೆ.

ಹತ್ತಿರದ ಸಂತೆಗಳಲ್ಲಿ, ಕೃಷಿ ಮಾರುಕಟ್ಟೆಗಳಲ್ಲಿ ತನ್ನ ಉತ್ಪನ್ನಕ್ಕೆ ಬೆಲೆ ಸಿಗುತ್ತದೆ ಎಂಬ ಆಸೆ- ಭರವಸೆ ಎಲ್ಲಾ ರೈತರಿಗೂ ಇರುತ್ತದೆ. ಆದರೆ, ಹೆಚ್ಚಿನ ಸಂದರ್ಭದಲ್ಲಿ ಇದು ನಿಜವಾಗುವುದೇ ಇಲ್ಲ. ಒಂದೋ, ಉತ್ಪಾದನೆ ಚೆನ್ನಾಗಿ ಬಂದಾಗ ಆ ಬೆಳೆಗೆ ಬೆಲೆ ಬಿದ್ದುಹೋಗುತ್ತದೆ. ಇಲ್ಲವಾದರೆ ದಿಢೀರ್‌ ಮಳೆಯ ಕಾರಣಕ್ಕೆ ಬೆಳೆಯೆಲ್ಲಾ ಜಮೀನಿನಲ್ಲೇ ಉಳಿದುಹೋಗುತ್ತದೆ. ಇದರಿಂದ ಹತಾಶರಾದ ರೈತರು, ಬೆಳೆಯನ್ನು ರಸ್ತೆಗೆ ಚೆಲ್ಲುವ, ನಷ್ಟವಾಯಿತೆಂದು  ಮನನೊಂದು ಆತ್ಮಹತ್ಯೆಗೆ ಶರಣಾಗುವ ಸಂದರ್ಭಗಳನ್ನು ದಿನವೂ ನೋಡುತ್ತಲೇ ಇದ್ದೇವೆ. ಬೆಲೆ ಕುಸಿತ, ಸಾಗಾಟಕ್ಕೆ ತೊಂದರೆ, ಮಧ್ಯವರ್ತಿಗಳ ಹಾವಳಿ ಎಂದೆಲ್ಲಾ ಯೋಚಿಸುತ್ತಾ ಕೂರುವ ಬದಲು, ಒಂದಷ್ಟು ಪರ್ಯಾಯ ಮಾರ್ಗಗಳ ಕುರಿತು ಯೋಚಿಸಿದರೆ, ಉತ್ಪನ್ನಗಳಿಗೆ
ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಿದೆ. ಈಚೆಗೆ ಯುವತಿಯೊಬ್ಬಳು ವಿಡಿಯೋ ಮೂಲಕ ತಮ್ಮ ಸಮಸ್ಯೆ ಹೇಳಿಕೊಂಡು, ಅದು ಮುಖ್ಯಮಂತ್ರಿಗಳ ಗಮನಕ್ಕೂ ಬಂದು, ಆ ಬೆಳೆಗೆ ಸೂಕ್ತ ದರ ಸಿಕ್ಕಿದ್ದು ಒಂದು ಉದಾಹರಣೆ.

ತೀರ್ಥಹಳ್ಳಿಯ ಯುವ ಉದ್ಯಮಿ ಕುಂಟವಳ್ಳಿ ವಿಶ್ವನಾಥ್‌, ಸ್ಥಳೀಯವಾಗಿಯೇ ಆಗ್ರಾ ಪೇಠ ತಯಾರಿಸಿ, ಬೂದುಗುಂಬಳ ಬೆಳೆದ ರೈತರ ಕೈ ಹಿಡಿದಿದ್ದು ಇನ್ನೊಂದು ಉದಾಹರಣೆ. ಇದರ ಜೊತೆಗೆ, ರೈತರು ಹೇಗೆಲ್ಲಾ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳಬಹುದು ಗೊತ್ತಾ?

– ತರಕಾರಿ ಬೆಳೆಯುವವರು, ಬಹುಬೆಲೆಗಳ ಮೂಲಕ ಬೆಳೆ ವೈವಿಧ್ಯತೆ ಕಾಪಾಡಿಕೊಳ್ಳಬೇಕು.
– ಸಾವಯವ ಪದ್ಧತಿಯಲ್ಲಿ ಬೆಳೆದರೆ ಬೇಡಿಕೆ ಜಾಸ್ತಿ ಇರುತ್ತದೆ. ಸಾಧ್ಯವಾದಷ್ಟೂ, ಹತ್ತು ಕಿ.ಮೀ. ವ್ಯಾಪ್ತಿಯೊಳಗೇ ಮಾರುಕಟ್ಟೆ ಕಂಡುಕೊಳ್ಳಬೇಕು. ಇದರಿಂದ, ಸಾಗಾಟದ ವೆಚ್ಚ ಬಹಳ ಕಮ್ಮಿ ಆಗುತ್ತದೆ.
– ಮಧ್ಯವರ್ತಿಗಳನ್ನು ಅವಲಂಬಿಸುವ ಬದಲು, ಸಾಮಾಜಿಕ ಜಾಲತಾಣಗಳ ಮೂಲಕ ಮಾರ್ಕೆಟ್‌ ಕಂಡುಕೊಳ್ಳಬೇಕು.
– ಮಾವು ಬೆಳೆಗಾರರು, 5/10 ಕೆ.ಜಿ.ಯ ಪ್ಯಾಕ್‌ ಮಾಡಿ, ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರ ಹಾಕಿದರೆ, ಗ್ರಾಹಕರು ಸಿಕ್ಕೇ ಸಿಗುತ್ತಾರೆ. ಹಣ್ಣನ್ನು ಪೋಸ್ಟ್/ ಕೊರಿಯರ್‌ ಮೂಲಕ ಕಳಿಸಬಹುದು.
– ಕೆಲವೊಂದು ಮನೆ, ಏರಿಯಾ, ಅಪಾರ್ಟ್‌ಮೆಂಟ್‌ ಗಳಿಗೆ ವರ್ತನೆ ಮೂಲಕ (ವರ್ತನೆ ಅಂದರೆ, ಮನೆಗಳಿಗೆ ದಿನವೂ ಹಾಲು ಕೊಡಲು/ ಸೊಪ್ಪು ಮಾರಾಟ ಮಾಡಲು ಹೋಗುತ್ತಾರಲ್ಲ, ಹಾಗೆ) ಮಾರುಕಟ್ಟೆ ಕಂಡುಕೊಳ್ಳಬಹುದು.
– ಹೋಟೆಲ್/ ಅಪಾರ್ಟ್‌ಮೆಂಟ್‌ಗೆ ವರ್ಷವಿಡೀ ಉತ್ಪನ್ನ ಪೂರೈಸುವ ಒಪ್ಪಂದ ಮಾಡಿಕೊಂಡರೆ, ಬೇಡಿಕೆ ತಾನಾಗಿ ಇರುತ್ತದೆ.
– ಯಾವುದೇ ಬೆಳೆಯಾಗಿರಲಿ, ಅದರ ಮೌಲ್ಯವರ್ಧನೆ ಬಗ್ಗೆ ತಿಳಿದಿರಬೇಕು. ಟೊಮೊಟೊಗೆ ಬೆಲೆ ಬಿತ್ತೆಂದು ಗಾಬರಿಯಾಗುವ ಬದಲು, ಅದರಿಂದ ಉಪ್ಪಿನಕಾಯಿ, ಜಾಮ್, ಟೊಮೇಟೊ ಪುಡಿ ಮಾಡುವುದು ಗೊತ್ತಿದ್ದರೆ, ಕಷ್ಟದಿಂದ ಪಾರಾಗಲು ಸಾಧ್ಯವಿದೆ.
– ರೈತರು ಸಂಘಟಿತರಾಗಿ ಸ್ಥಳೀಯ ರೈತ ಮಾರುಕಟ್ಟೆ ಕಟ್ಟಿಕೊಂಡರೆ, ರೈತ-ಗ್ರಾಹಕರ ನಡುವೆ ಸ್ನೇಹ ಏರ್ಪಟ್ಟು, ಮಾರ್ಕೆಟ್‌ ಸೃಷ್ಟಿಯಾಗುತ್ತದೆ.
– ರೈತ ಉತ್ಪಾದಕರ ಸಂಘ ಕಟ್ಟಿಕೊಂಡರೆ, ಅದರ ಮೂಲಕ ಬೇಡಿಕೆ ಇರುವಲ್ಲಿಗೆ ಸರಕು ಕಳಿಸಲು ಅನುಕೂಲವಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next