Advertisement

ತಾಂತ್ರಿಕ ಸೌಲಭ್ಯ ಬಳಸಿಕೊಳ್ಳಲು ಸಲಹೆ

01:03 PM Jan 08, 2018 | |

ವಿಜಯಪುರ: ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಆಧುನಿಕ ತಾಂತ್ರಿಕ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಸಲಹೆ ನೀಡಿದರು.

Advertisement

ಹಿಟ್ನಳ್ಳಿ ಕೃಷಿ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ರವಿವಾರ ಆಯೋಜಿಸಿದ್ದ ಕೃಷಿಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಅನುಕೂಲಕ್ಕಾಗಿ ಇಲ್ಲಿ ಎರಡು ದಿನ ಕೃಷಿಮೇಳ ಆಯೋಜಿಸಿದೆ. ರೈತರಿಗೆ ಬೆಳೆಯಲ್ಲಿ ಅವಶ್ಯಕವಿರುವ ತಾಂತ್ರಿಕ ಸೌಲಭ್ಯಗಳು ಮತ್ತು ಇತರೆ ಎಲ್ಲ ಮಾಹಿತಿಗಳನ್ನು ಕೃಷಿಮೇಳದಲ್ಲಿ ಲಭ್ಯವಾಗಿದ್ದು ರೈತರು ಇದರ ಸದುಪಯೋಗ
ಪಡೆದುಕೊಳ್ಳಬೇಕು. ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅಧುನಿಕ ತಾಂತ್ರಿಕ ಸೌಲಭ್ಯಗಳ ಸದುಪಯೋಗ ಪಡೆದು ಕೃಷಿ ಇಳುವರಿ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಈಶ್ವರಚಂದ ಹೊಸಮನಿ ಮಾತನಾಡಿ, ರೈತರ ಬದುಕು ಹಸನಾಗಿಸಲು ಕೃಷಿ ಸಂಶೋಧನಾ ಕೇಂದ್ರ ಹಲವು ರೀತಿಯಲ್ಲಿ ನೆರವಾಗುತ್ತಿದೆ. ಎರಡು ದಿನಗಳ ಕೃಷಿಮೇಳದಲ್ಲಿ ಒಕ್ಕಲುತನ ಸುಧಾರಣೆಗೆ ಸಂಬಂಧಪಟ್ಟ ಚಿಂತನ-ಮಂಥನ ನಡೆಯಲಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ| ಡಿ.ಪಿ. ಬಿರಾದಾರ ಮಾತನಾಡಿ, ಕೃಷಿಮೇಳದ ಅಂಗವಾಗಿ ರೈತರಿಗೆ ತಾಂತ್ರಿಕ ಸಲಹೆ ಮತ್ತು ಇತರೆ ಮಾಹಿತಿಗಾಗಿ 120ಕ್ಕೂ ಹೆಚ್ಚು ವಸ್ತು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಕೃಷಿ ಯಂತ್ರೋಪಕರಣ, ಕೃಷಿ ಸಲಹಾ ಕೇಂದ್ರ, ವಸ್ತು ಪ್ರದರ್ಶನ ಮಳಿಗೆಗಳು, ಫಲಪುಷ್ಪ ಪ್ರದರ್ಶನ ಸೇರಿದಂತೆ ಹಲವು ಮಾಹಿತಿ ಇಲ್ಲಿ ಲಭ್ಯವಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕೃಷಿ ಮೇಳದಲ್ಲಿ ಸಸ್ಯ ತಳಿ ಅಭಿವೃದ್ಧಿ ಶಾಸ್ತ್ರ, ಬೇಸಾಯ ಶಾಸ್ತ್ರ, ಮಣ್ಣು ವಿಜ್ಞಾನ, ತೋಟಗಾರಿಕೆ, ರೇಷ್ಮೆ ಕೃಷಿ, ಕೃಷಿ ಅರ್ಥಶಾಸ್ತ್ರ, ಕೃಷಿ ತಾಂತ್ರಿಕತೆ, ಆಹಾರ ವಿಜ್ಞಾನ ಮತ್ತು ಪೋಷಣೆ, ಸಸ್ಯರೋಗ ಶಾಸ್ತ್ರ ಸೇರಿದಂತೆ ಹಲವು ಮಾಹಿತಿಗಳು ಇಲ್ಲಿ ಲಭ್ಯವಿದ್ದು, ರೈತರು ಈ ಎಲ್ಲ ಮಾಹಿತಿಗಳ ಸದುಪಯೋಗ ಪಡೆದು ತಮ್ಮ ಕೃಷಿ ಚಟುವಟಿಕೆ ಸುಧಾರಣೆಗೆ ಅನುಕೂಲ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್‌. ಪಾಟೀಲ, ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಬಿ. ಸುಮಿತ್ರಾದೇವಿ, ಸುರೇಶ ಘೊಣಸಗಿ, ಕೃಷಿ ಮಹಾವಿದ್ಯಾಲಯದ ಡೀನ್‌ ಡಾ| ಎಂ.ಕೆ. ಬಿರಾದಾರ ಪಾಟೀಲ, ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ| ವಿ.ಐ. ಬೆಣಗಿ, ವಿಸ್ತರಣಾ ನಿರ್ದೇಶಕ ಡಾ| ಎಚ್‌.ಬಸಪ್ಪ ಸೇರಿದಂತೆ ಇತರ ಗಣ್ಯರು ಇದ್ದರು. ಇದೇ ಸಂದರ್ಭದಲ್ಲಿ ಕೃಷಿಗೆ ಸಂಬಂಧಪಟ್ಟ ವಿವಿಧ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next