Advertisement

ಆದಾಯ ಕ್ರೋಢೀಕರಣಕ್ಕೆ ಆದ್ಯತೆ ನೀಡಲು ಸಲಹೆ

01:46 PM Feb 13, 2021 | Team Udayavani |

ದೊಡ್ಡಬಳ್ಳಾಪುರ: ನಗರದಲ್ಲಿ ತುರ್ತಾಗಿ ಆಗಬೇಕಿರುವ ವಿದ್ಯುತ್‌ ಚಿತಾಗಾರ, ಮಳೆ ನೀರು ಸಂಗ್ರಹಣೆ, ಒಳಚರಂಡಿ ನೀರಿನ ಶುದ್ಧೀಕರಣ, ಕಸಾಯಿಖಾನೆ ಸ್ಥಳಾಂತರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎನ್ನುವ ಅಭಿಪ್ರಾಯ, ನಗರದ ಡಾ.ರಾಜ್‌ಕುಮಾರ್‌ ಕಲಾಮಂದಿರದಲ್ಲಿ ನಗರಸಭೆ ಪೌರಾಯುಕ್ತ ರಮೇಶ್‌ ಎಸ್‌.ಸುಣಗಾರ್‌ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್‌ ಪೂರ್ವ ಸಾರ್ವಜನಿಕ ಸಮಾಲೋಚನೆ ಸಭೆಯಲ್ಲಿ ಕೇಳಿ ಬಂದವು.

Advertisement

ನಗರಸಭೆಗೆ ಆದಾಯ ತರುವ ಪ್ರಮುಖ ಮೂಲಗಳಾದ ವಾಣಿಜ್ಯ ಉದ್ಯಮ, ಪರವಾನಗಿ, ಆಸ್ತಿ ತೆರಿಗೆ, ಜಾಹೀರಾತು ಶುಲ್ಕಗಳ ಸಂಗ್ರಹದ ಕಡೆಗೆ ಆದ್ಯತೆ ನೀಡಿಬೇಕು ಎಂಬ ಅಭಿಪ್ರಾಯ ವ್ಯಕ್ತವಾದವು. ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ನಗರಸಭೆ ಮಾಜಿ ಸದಸ್ಯರು ಮಾತನಾಡಿ, ನಗರಸಭೆಯಲ್ಲಿ ಸ್ವತ್ಛತೆ ವಾಹನಗಳ ನಿರ್ವಹಣೆ, ಬಿಡಾಡಿ ರಾಸುಗಳ, ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಇವುಗಳ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಕೆಲಸ ಮಾಡಬೇಕು. ಉದ್ದಿಮೆ ತೆರಿಗೆ ಕಡ್ಡಾಯಗೊಳಿಸಬೇಕು. ನಗರಸಭೆ ಸ್ವತ್ತು ಉಳಿಸಿಕೊಳ್ಳಲು ನಗರಸಭೆ ಜಾಗಗಳಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುವ ಮೂಲಕ ಆದಾಯ ಬರಲಿದೆ ಎಂದು ಸಲಹೆ ನೀಡಿದರು.

ಹೊಸ ಮಾರುಕಟ್ಟೆ ಸಂಕೀರ್ಣ ಪೂರ್ಣಗೊಳಿಸಿ: ನಗರದ ಪ್ರಮುಖ ವೃತ್ತಗಳಲ್ಲಿ ಸಿಸಿಟೀವಿ ಅಳವಡಿಕೆ, ನಾಗರಕೆರೆ ಅಭಿವೃದ್ಧಿ, ಉದ್ಯಾನವನ ಅಭಿವೃದ್ಧಿಗೆ ಹಣ ಮೀಸಲಿಡಬೇಕು. ಹೊಸ ಮಾರುಕಟ್ಟೆ ಸಂಕೀರ್ಣ ಪೂರ್ಣಗೊಳಿಸಬೇಕು. ನೀರು ಶುದ್ಧೀಕರಣಕ್ಕೆ ಯಾಂತ್ರಿಕ ವಿಧಾನ ಅಳವಡಿಸಬೇಕು. ಕೊಂಗಾಡಿಯಪ್ಪ ಅವರ ಹೆಸರಿನಲ್ಲಿ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ, ಕ್ರೀಡಾ ಹಾಗೂ ಸಾಂಸ್ಕೃತಿಕಕಾರ್ಯಕ್ರಮಗಳಿಗೆ ಅನುದಾನ, ಪ್ರಮುಖ ವೃತ್ತಗಳಲ್ಲಿ ಅಂಬೇಡ್ಕರ್‌, ಕೊಂಗಾಡಿಯಪ್ಪ ಮೊದಲಾದ ಮಹನೀಯರ ಪುತ್ಥಳಿ ಸ್ಥಾಪನೆ ಮಾಡಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬಂದವು.

ಉಳಿತಾಯದ ಬಜೆಟ್‌: ನಗರಸಭೆ ಮುಖ್ಯ ಲೆಕ್ಕಾಧಿಕಾರಿ ನಂದೀಶ್‌ ಬಜೆಟ್‌ ವಿವರ ಮಂಡಿಸಿ, ನಗರಸಭೆ ಪ್ರಸಕ್ತ ಸಾಲಿನ ಪರಿಷ್ಕೃತ ಅಂದಾಜು ಆಯವ್ಯಯದಲ್ಲಿ ಆದಾಯ 44.47 ಕೋಟಿ ರೂ ನಿರೀಕ್ಷಿಸಲಾಗಿದ್ದು, ಇದರಲ್ಲಿ ಖರ್ಚು 30.89 ಕೋಟಿ ರೂ.ಗಳಾಗಿದೆ. 13.58 ಕೋಟಿ ರೂ. ಉಳಿತಾಯ ನಿರೀಕ್ಷಿಸಲಾಗಿದೆ ಎಂದರು. ಹಿಂದಿನ ಸಾಲಿನ ವಾಸ್ತವಿಕ ಲೆಕ್ಕದಲ್ಲಿ ಆದಾಯ 40.89 ಕೋಟಿ ರೂ. ಇದರಲ್ಲಿ ಖರ್ಚು 23.01 ಕೋಟಿ ರೂ.ಗಳಾಗಿದೆ. 17.87 ಕೋಟಿ ರೂ. ಉಳಿತಾಯವಾಗಿದೆ. 2020ರ ಡಿಸೆಂಬರ್‌ಅಂತ್ಯದವರೆಗೆ 34.05 ಕೋಟಿ ರೂ. ಕ್ರೋಢೀಕರಣವಾಗಿದ್ದು, ಇದರಲ್ಲಿ ಖರ್ಚಾಗಿರುವುದು 17.01 ಕೋಟಿ ರೂ. ಆಗಿದೆ. ಡಿಸೆಂಬರ್‌ ಅಂತ್ಯಕ್ಕೆ ಉಳಿಕೆ 17.03 ಕೋಟಿ ರೂ. ಆಗಿದೆ ಎಂದು ತಿಳಿಸಿದರು.

ಪೌರಾಯುಕ್ತ ರಮೇಶ್‌ ಎಸ್‌.ಸುಣಗಾರ್‌ ಮಾತನಾಡಿ, ಸಾರ್ವಜನಿಕರ ಸಲಹೆ ಸೂಚನೆ ಪರಿಗಣಿಸಿ ಆದಷ್ಟು ಅನುಷ್ಠಾನಕ್ಕೆ ತರಲು ಕ್ರಮ ವಹಿಸಲಾಗುವುದು. ತೆರಿಗೆ ಸಂಗ್ರಹಕ್ಕೆ ನಿರ್ವಾಹಕರನ್ನು ನೇಮಿಸಿಕೊಂಡಿದ್ದು, 2 ತಿಂಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಕಸ ನಿರ್ವಹಣೆ, ನೈರ್ಮಲ್ಯಕ್ಕೆ ಒತ್ತು ನೀಡಲಾಗುವುದು. ಬಜೆಟ್‌ ನಲ್ಲಿ ವ್ಯಕ್ತವಾದ ಸಲಹೆಗಳನ್ನು ಡೀಸಿಯೊಂದಿಗೆ ಚರ್ಚಿಸಲಾಗುವುದು ಎಂದರು.

Advertisement

ನಗರಸಭೆ ಎಇಇ ಶೇಖ್‌ ಫಿರೋಜ್‌ ಸೇರಿದಂತೆ ನಗರಸಭೆ ವಿವಿಧ ವಿಭಾಗದ ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಮಾಜಿ ನಗರಸಭಾ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next