ಹುಮನಾಬಾದ: ಗ್ರಾಮೀಣ ಭಾಗದ ಜನರು ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳು ಕುರಿತು ತಿಳಿದುಕೊಂಡು ಅವುಗಳ ಲಾಭ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಹೇಳಿದರು.
ಸಿತಾಳಗೇರಾ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಸ್ಥರು ಬಿಸಿಎಂ ವಸತಿ ನಿಲಯ, ಶಾಲಾ ಕೊಠಡಿಗಳು, ವಿದ್ಯುತ್ ಸಮಸ್ಯೆ, 110 ಕೆವಿ ವಿದ್ಯುತ್ ಘಟಕ ಸ್ಥಾಪನೆ, ಶಾಲಾ ಮಕ್ಕಳಿಗೆ ಕುಡಿಯುವ ನೀರು ಘಟಕದ ಮನವಿ ಸಲ್ಲಿಸಲಾಗಿದೆ. ಈ ಪೈಕಿ ಈಗಾಗಲೇ ಶಾಲೆಯ ಕೊಠಡಿ ನಿರ್ಮಾಣಕ್ಕೆ ಅನುದಾನ ಕಲ್ಪಿಸಲಾಗಿದೆ. ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ ಎಂಎಲ್‌ಸಿ ಅನುದಾನ ನೀಡುವುದಾಗಿ ತಿಳಿಸಿದ ಅವರು, ಪಾಟೀಲ ಪರಿವಾರದಲ್ಲಿ ಇಬ್ಬರು ಎಂಎಲ್ಸಿ, ಒಬ್ಬರು ಶಾಸಕರಿದ್ದು, ಕ್ಷೇತ್ರದ ಜನರ ಸೇವೆಗೆ ದಿನದ 24 ಗಂಟೆಗಳ ಅಣಿಯಾಗುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ವಿವಿಧ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆಗಳ ಅರ್ಜಿ ಸಲ್ಲಿಸಿದರು. ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಿಗೆ ಒಟ್ಟಾರೆ 95 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 77 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. 18 ಅರ್ಜಿಗಳ ವಿಲೇವಾರಿ ಬಾಕಿ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಪಂ ಇಒ ಮುರಗೆಪ್ಪ, ಗ್ರೇಡ್-2 ತಹಶೀಲ್ದಾರ್ ಜಯಶ್ರೀ ಜಿ.ಟಿ, ಮಾಜಿ ಬಿಎಸ್‌ಎಸ್ ಕೆ ಅಧ್ಯಕ್ಷ ಸಂಜಯ್ ಖೇಣಿ, ಕೃಷಿ ಅಧಿಕಾರಿ ಗೌತಮ, ಡಾ| ಗೋವಿಂದ್, ಸಿಡಿಪಿಒ ಹಿರೇಮಠ, ಪಿಡಿಒ ಸವಿತಾ, ವಿಜಯಕುಮಾರ ಸಿತಾಳಗೇರಾ, ಕಸ್ತೂರಬಾಯಿ, ಸುಗಂಧ, ವಿಠಲ ಕಲ್ಯಾಣಿ ಅನೇಕರು ಇದ್ದರು.