ಯಾದಗಿರಿ: ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳಲ್ಲಿ ಎಲ್ಲ ರೀತಿಯ ಔಷಧಿಗಳು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಸಿಗುತ್ತವೆ. ಬಡ ಸಾರ್ವಜನಿಕರು ಇದರ ಲಾಭ ಪಡೆಯಬೇಕು ಎಂದು ನಗರದ ಜನೌಷಧಿ ಮಳಿಗೆ ವ್ಯವಸ್ಥಾಪಕ ಭೀಮಣ್ಣಗೌಡ ಬಿರಾದಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಕಡೆ ಜನೌಷಧಿಯಲ್ಲಿ ಔಷಧ ಕೊರತೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಇದು ಸರಿಯಲ್ಲ. ಎಲ್ಲ ರೀತಿಯ ಔಷಧಿಗಳು ಲಭ್ಯ ಇವೆ. ಈ ಮಳಿಗೆಗಳು ನಡೆಸುವ ಮಾಲಕರಿಗಾಗಲಿ ಸರ್ಕಾರಕ್ಕೆ ಆಗಲಿ ಲಾಭವಿಲ್ಲ. ಬದಲಿಗೆ ಬಡ ಜನತೆಗೆ ಅತ್ಯಂತ ಕಡಿಮೆ ಬೆಲೆಗೆ ಜೀವ ರಕ್ಷಕ ಔಷಧಿಗಳು ಲಭ್ಯ ಆಗುತ್ತಿರುವುದರಿಂದ ಜನತೆಗೆ ಲಾಭವಿದೆ.
ಆದರೆ ಜನೌಷಧಿ ಮಳಿಗೆಗಳ ಕುರಿತು ಸರಿಯಾದ ಪ್ರಚಾರ ಸಿಗದೇ ಇರುವುದರಿಂದ ಮತ್ತು ಸಂಬಂಧಪಟ್ಟ ಆರೋಗ್ಯ
ಇಲಾಖೆ ನಿರ್ಲಕ್ಷ್ಯದಿಂದ ಜನತೆಗೆ ಇದರ ಲಾಭ ಪಡೆಯಲು ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಈ ಜನೌಷಧಿ ಕೇಂದ್ರಗಳ ಕುರಿತು ಆರೋಗ್ಯ ಇಲಾಖೆ ವಿಶೇಷ ಕಾಳಜಿ ವಹಿಸಬೇಕಿತ್ತು. ಆದರೆ ಇದುವರೆಗೆ ಆರೋಗ್ಯ ಇಲಾಖೆ ರಾಜ್ಯದಲ್ಲಿ ಇಂತಹ ಕಾರ್ಯಕ್ಕೆ ಕೈ ಜೋಡಿಸುವ ಬದಲಿಗೆ ನಿದ್ರೆಯಲ್ಲಿದೆ ಎಂದು ಟೀಕಿಸಿದರು.
ಸುಪ್ರಿಂಕೋರ್ಟ್ ಸಹ ಔಷಧಿಯ ಮೂಲ ಹೆಸರನ್ನು ಸ್ಪಷ್ಟವಾಗಿ ಬರೆಯಬೇಕು ಎಂದು ನಿರ್ದೇಶಿಸಿದೆ. ಇದರಿಂದ
ಜನರು ಕಡಿಮೆ ಬೆಲೆಯಲ್ಲಿ ಜನೌಷಧಿ ಕೇಂದ್ರಗಳಲ್ಲಿ ಅಗತ್ಯ ಔಷಧಿ ಪಡೆಯಲು ಸಹಕಾರಿ ಆಗುತ್ತದೆ ಎಂದ ಅವರು, ವೈದ್ಯರು ಸಹ ಮಾನವೀಯ ದೃಷ್ಟಿಕೋನದಿಂದ ಬೆಂಬಲಿಸಬೇಕಿದೆ ಎಂದರು.
ಉದಾಹರಣೆಯಾಗಿ ಏಡ್ಸ್ ರೋಗದ ಔಷಧ ಮಾರುಕಟ್ಟೆಯಲ್ಲಿ 3 ಸಾವಿರಕ್ಕೂ ಮಿಕ್ಕಿ ಇದ್ದರೇ ಅದೇ ಗುಣಮಟ್ಟದ ಜನೌಷಧಿ ಕೇವಲ 425 ರೂಪಾಯಿಗೆ ಲಭ್ಯ ಆಗುತ್ತದೆ. ಇದರಿಂದ ಗರಿಷ್ಟ ಪ್ರಮಾಣದಲ್ಲಿ ಉಳಿತಾಯವಾಗಿ ಬಡ ಜನತೆಗೆ ಲಾಭ ಆಗುತ್ತದೆ ಎಂದರು. ಈ ಸಂದರ್ಭದಲ್ಲಿ ಚೆನ್ನಪ್ಪಗೌಡ ಮೋಸಂಬಿ, ಶೇಖರ ವಿಶ್ವಕರ್ಮ, ಬನ್ನಪ್ಪ ಕಾಳೆಬೆಳಗುಂದಿ ಇದ್ದರು.