Advertisement

ಜಾಹೀರಾತು ಬೈಲಾ ಸರ್ಕಾರದ ಅಂಗಳಕ್ಕೆ

01:15 PM Sep 16, 2017 | Team Udayavani |

ಮೈಸೂರು: ಪಾರಂಪರಿಕ ನಗರಿ ಮೈಸೂರಿನಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತುಗಳ ನಿಷೇಧ, ನಿಯಂತ್ರಣ ಹಾಗೂ ಕ್ರಮಬದ್ಧತೆ ತರುವ ನಿಟ್ಟಿನಲ್ಲಿ ರಚಿಸಲಾಗಿರುವ ಜಾಹೀರಾತು ಉಪವಿಧಿ(ಬೈಲಾ)ಗೆ ಅನುಮೋದನೆ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೌನ್ಸಿಲ್‌ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಮೈಸೂರು ಮಹಾನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ಮೇಯರ್‌ ಎಂ.ಜೆ.ರವಿಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್‌ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಕರ್ನಾಟಕ ಮುನಿಸಿಪಲ್‌ ಕಾರ್ಪೊàರೇಷನ್‌ ಕಾಯ್ದೆ 1976ರ ಸೆಕ್ಷನ್‌ 423(24)ರ ಅಡಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತುಗಳ ನಿಷೇಧ,

ನಿಯಂತ್ರಣ ಹಾಗೂ ಕ್ರಮಬದ್ಧತೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಬೈಲಾವನ್ನು ಮಂಡಿಸಲಾಯಿತು. ಈ ಬಗ್ಗೆ ನಡೆದ ಸುದೀರ್ಘ‌ ಚರ್ಚೆಯಲ್ಲಿ ಪಾಲಿಕೆ ಸದಸ್ಯರು ಪರ-ವಿರೋಧದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಮೊದಲಿಗೆ ಮಾತನಾಡಿದ ಪಾಲಿಕೆ ಸದಸ್ಯ ಆರ್‌.ನಾಗರಾಜು, ಜಾಹೀರಾತುಗಳಿಂದ ಬರುವ 5-6 ಕೋಟಿ ರೂ.ಗಳ ಆದಾಯದಿಂದ ನಗರದ ಅಭಿವೃದ್ಧಿ ಮಾಡಲು ಮುಂದಾಗುವುದು ನಾಚಿಕೆಗೇಡಿನ ಸಂಗತಿ.

ಈ ಹಿಂದೆ ನಗರದಲ್ಲಿ ಜಾಹೀರಾತುಗಳನ್ನು ಅಳವಡಿಸುವುದರಿಂದ ಅಪಘಾತಗಳ ಪ್ರಮಾಣ ಹೆಚ್ಚಲಿದೆ ಹಾಗೂ ನಗರದ ಸೌಂದರ್ಯ ಹಾಳಾಗಲಿದೆ ಎಂಬ ಕಾರಣದಿಂದ ಜಾಹೀರಾತು ಫ‌ಲಕಗಳನ್ನು ಅಳವಡಿಸುವುದು ಬೇಡವೆಂದು ಕೌನ್ಸಿಲ್‌ನಲ್ಲಿ ತೀರ್ಮಾನಿಸಲಾಗಿದ್ದು, ಹೀಗಾಗಿ ಇದಕ್ಕೆ ಅವಕಾಶ ನೀಡುವುದು ಬೇಡವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಸಾಥ್‌ ನೀಡಿದ ಮತ್ತೂಬ್ಬ ಸದಸ್ಯ ಜಗದೀಶ್‌, ಜಾಹೀರಾತುಗಳನ್ನು ಅಳವಡಿಸುವುದರಿಂದ ನಗರದ ಪಾರಂಪರಿಕತೆಗೆ ಧಕ್ಕೆಯಾಗಲಿಬಾರದು ಎಂಬ ಅಭಿಪ್ರಾಯ ಮಂಡಿಸಿದರು.

ಸದಸ್ಯ ಮ.ವಿ.ರಾಂಪ್ರಸಾದ್‌, ಜಾಹೀರಾತು ಅಳವಡಿಕೆಗೆ ಅವಕಾಶ ನೀಡದ ಕಾರಣ ಇತ್ತೀಚಿನ ದಿನಗಳಲ್ಲಿ ಪಾಲಿಕೆಗೆ ಬರುವ ಆದಾಯಗಳು ತಪ್ಪುತ್ತಿದ್ದು, ಈ ಆದಾಯ ಬೇರೆಯವರ ಪಾಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಅವಕಾಶ ನೀಡಬೇಕೆಂದು ಹೇಳಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಶಿವಕುಮಾರ್‌, ನಗರದ ಸೌಂದರ್ಯ, ಪಾರಂಪರಿಕತೆಗೆ ಧಕ್ಕೆಯಾಗಲಿದೆ ಎಂಬ ಕಾರಣದಿಂದ ಜಾಹೀರಾತು ಉಪವಿಧಿ ರದ್ದುಪಡಿಸಲಾಗಿದೆ ಎಂದು ಹೇಳಿದರು. ಫ್ಲೆಕ್ಸ್‌ ಹಾಗೂ ಜಾಹೀರಾತು ಪಲಕಗಳ ನಡುವೆ ಸಾಕಷ್ಟು ವ್ಯತ್ಯಾಸವಿರುವುದರಿಂದ ಬೈಲಾಗೆ ಒಪ್ಪಿಗೆ ನೀಡಬೇಕಿದ್ದು ಇದರಿಂದ ಪಾಲಿಕೆ ಆದಾಯ ಸಹ ಹೆಚ್ಚಲಿದೆ ಎಂದು ಸದಸ್ಯ ಗಿರೀಶ್‌ ಪ್ರಸಾದ್‌ ತಿಳಿಸಿದರು.

Advertisement

ಆರ್ಥಿಕ ಸ್ಥಿತಿ ಅರಿತುಕೊಳ್ಳಿ: ಕಾಂಗ್ರೆಸ್‌ ಸದಸ್ಯ ಅಯ್ಯೂಬ್‌ಖಾನ್‌, ನಗರ ಪಾಲಿಕೆಯನ್ನು ನಡೆಸಲು ಕೇವಲ ಮುಖ್ಯಮಂತ್ರಿಗಳು ನೀಡುವ ಅನುದಾನವನ್ನು ಅವಲಂಬಿಸಲು ಸಾಧ್ಯವಿಲ್ಲ. ಅಲ್ಲದೆ ಜಾಹೀರಾತು ಬೇಡವೆಂದರೆ ದೊಡ್ಡ ಮಾಲ್‌ಗ‌ಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಆದಾಯ ಪಡೆಯಲಾಗುತ್ತಿದೆ. ಹೀಗಾದರೆ ನಗರ ಪಾಲಿಕೆ ನಿರ್ವಹಣೆಗೆ ಆದಾಯದ ಮೂಲವೇನು? ಎಂದು ಪ್ರಶ್ನಿಸಿದ ಅವರು, ಸರ್ಕಾರದ ಅನೇಕ ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಜಾಹೀರಾತುಗಳ ಮೂಲಕವೇ ಜನರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಜಾಹೀರಾತಿನಿಂದ ಆದಾಯಬೇಕಿಲ್ಲ: ಜೆಡಿಎಸ್‌ ಸದಸ್ಯ ಕೆಂಪಣ್ಣ, ಈ ಹಿಂದೆ ನಗರದಲ್ಲಿ ಫ್ಲೆಕ್ಸ್‌ ಹಾಗೂ ಹೋಲ್ಡಿಂಗ್ಸ್‌ಗಳನ್ನು ಅಳವಡಿಸಬಾರದೆಂದು ಕೌನ್ಸಿಲ್‌ನಲ್ಲಿ ನಿರ್ಧರಿಸಲಾಗಿದ್ದು, ಹೀಗಾಗಿ ಮತ್ತೆ ಜಾಹೀರಾತು ತರಬೇಕೆ. ಹೀಗಾಗಿ ಜಾಹೀರಾತು ಸಂಬಂಧ ರಚಿಸಿರುವ ಬೈಲಾಗೆ ತಮ್ಮ ವಿರೋಧವಿದೆ ಎಂದು ಹೇಳಿದರು.

ಸರ್ಕಾರಕ್ಕೆ ಕಳುಹಿಸೋಣ: ಹಿರಿಯ ಸದಸ್ಯ ಎಚ್‌.ಎನ್‌.ಶ್ರೀಕಂಠಯ್ಯ ಮಾತನಾಡಿ,  ಬೈಲಾ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸೋಣ. ಆದರೆ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಸಲುವಾಗಿ 15 ಅಂಶಗಳಿಗೆ ಶುಲ್ಕ ಸಂಗ್ರಹಕ್ಕೆ ಸರ್ಕಾರದಿಂದ ಅವಕಾಶ ನೀಡಲಾಯಿತು. ಹೀಗಾಗಿ ಈ ವಿಷಯಕ್ಕೂ ಸರ್ಕಾರದಿಂದ ಒಪ್ಪಿಗೆ ದೊರೆತಿದ್ದೇ ಆದಲ್ಲಿ, ಪಾಲಿಕೆ ಆದಾಯ ಬರುವುದನ್ನು ತಪ್ಪಿಸಲು ಯಾವುದೇ ಸದಸ್ಯರಿಗೂ ಅವಕಾಶವಿಲ್ಲ ಎಂದು ತಿಳಿಸಿದರು. 

ಸರ್ಕಾರಕ್ಕೆ ಕಳುಹಿಸಲಾಗುವುದು: ಬೈಲಾಗೆ ಸದಸ್ಯರಿಂದ ಕೇಳಿಬಂದ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮಾತನಾಡಿದ ಮೇಯರ್‌ ಎಂ.ಜೆ.ರವಿಕುಮಾರ್‌, ಬೈಲಾಗೆ ಅಗತ್ಯವಿರುವ ತಿದ್ದುಪಡಿ ಹಾಗೂ ಪರಿಶೀಲನೆ ಮಾಡುವ ಬಗ್ಗೆ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಉಪ ಮೇಯರ್‌ ರತ್ನಾಲಕ್ಷ್ಮಣ್‌ ಇದ್ದರು.

ಸರ್ಕಾರಿ ಅಥವಾ ಖಾಸಗಿ ಜಾಗದಲ್ಲಿ ಜನರಿಗೆ ಕಾಣುವಂತೆ ಹಾಕಲಾಗುವ ಜಾಹೀರಾತುಗಳಿಗೆ ತೆರಿಗೆ ಸಂಗ್ರಹಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಆದರೆ ಜಾಹೀರಾತುಗಳ ನಿಷೇಧ, ನಿಯಂತ್ರಣ ಹಾಗೂ ಕ್ರಮಬದ್ಧತೆ ತರುವ ನಿಟ್ಟಿನಲ್ಲಿ ರಚಿಸಿರುವ ಬೈಲಾದಲ್ಲಿ ಸುಪ್ರೀಂಕೋರ್ಟ್‌ನ ಆದೇಶದಂತೆ ಯಾವುದೇ ಜಾಹೀರಾತು ಅಳವಡಿಸುವ ವೇಳೆ ವಾಹನ ಸವಾರರಿಗೆ ತೊಂದರೆಯಾಗಬಾರದು ಎಂಬ ನಿಯಮಗಳನ್ನು ಅಳವಡಿಸಲಾಗಿದೆ.
-ಜಿ.ಜಗದೀಶ್‌, ಪಾಲಿಕೆ ಆಯುಕ್ತ 

Advertisement

Udayavani is now on Telegram. Click here to join our channel and stay updated with the latest news.

Next