ಬೆಂಗಳೂರು: ಒಎಲ್‌ಎಕ್ಸ್‌ನಲ್ಲಿ ಕಡಿಮೆ ಬೆಲೆಗೆ ದುಬಾರಿ ಮೌಲ್ಯದ ಕ್ಯಾಮೆರಾ ಹಾಗೂ ದ್ವಿಚಕ್ರ ವಾಹನ ಮಾರಾಟ ಮಾಡುವುದಾಗಿ ಜಾಹೀರಾತು ನೀಡಿ ಗ್ರಾಹಕರಿಂದ ಪೇಟಿಎಂ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ನಕಲಿ ಸೇನಾ ಕಮಾಂಡರ್ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಎಚ್ಎಎಲ್‌ನ ವಿಮಾನಪುರ ನಿವಾಸಿ ಪ್ರಶಾಂತ್ ಕುಮಾರ್ ಎಂಬವರು ದೂರು ನೀಡಿದ್ದು, ಸೈಬರ್ ಕ್ರೈಂ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಶಾಂತ್ ಕುಮಾರ್ ಎಚ್ಎಎಲ್ ಉದ್ಯೋಗಿಯಾಗಿದ್ದು, ಒಎಲ್‌ಎಕ್ಸ್‌ನಲ್ಲಿ ದ್ವಿಚಕ್ರ ವಾಹನಕ್ಕಾಗಿ ಶೋಧ ನಡೆಸುತ್ತಿದ್ದರು. ಇದೇ ವೇಳೆ ಆರೋಪಿ ಒಎಲ್‌ಎಕ್ಸ್‌ನಲ್ಲಿ ತನ್ನ ಹೆಸರನ್ನು ವಿಕಾಸ್, ಸೇನಾ ಕಮಾಂಡರ್ ಎಂದು ಪರಿಚಯಿಸಿಕೊಂಡಿದ್ದ.
ಹಣ ಜಮೆ: ‘ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಲಿಟರಿ ಕರ್ತವ್ಯ ನಿಮಿತ್ತ ಬೇರೆಡೆ ಹೋಗುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ತಮ್ಮ ಹೋಂಡಾ ಡಿಯೋ ದ್ವಿಚಕ್ರ ವಾಹನವನ್ನು 36,600 ರೂ.ಗೆ ಮಾರಾಟ ಮಾಡುವುದಾಗಿ,’ ಜಾಹೀರಾತು ಪ್ರಕಟಿಸಿದ್ದ. ಈ ಜಾಹೀರಾತನ್ನು ಗಮನಿಸಿದ್ದ ಪ್ರಶಾಂತ್ ಆರೋಪಿಯನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ ಪೇಟಿಎಂ ಮೂಲಕ ತನ್ನ ಖಾತೆಗೆ ಹಣ ಜಮೆ ಮಾಡುವಂತೆ ಸೂಚಿಸಿದ್ದಾನೆ.
ಈತನ ಮಾತು ನಂಬಿದ ಪ್ರಶಾಂತ್ ಒಂದೇ ಕಂತಿನಲ್ಲಿ 30 ಸಾವಿರ ರೂ. ಹಣ ಆರೋಪಿಯ ಖಾತೆಗೆ ಜಮೆ ಮಾಡಿದ್ದಾರೆ. ಆರೋಪಿ ವಾಹನದ ನಕಲಿ ದಾಖಲೆಯನ್ನು ಕೊರಿಯರ್ ಮೂಲಕ ಪ್ರಶಾಂತ್‌ಗೆ ಕಳುಹಿಸಿದ್ದಾನೆ. ನಂತರ ದ್ವಿಚಕ್ರ ವಾಹನ ಖರೀದಿಸುವ ಸಲುವಾಗಿ ಪ್ರಶಾಂತ್ ಮತ್ತೆ ಆರೋಪಿಗೆ ಕರೆ ಮಾಡಿದರೆ, ಆತ ಸಂಪರ್ಕಕ್ಕೆ ಸಿಕ್ಕಿಲ್ಲ.
ಪ್ರಕರಣ ದಾಖಲು: ಅನುಮಾನಗೊಂಡ ಆರೋಪಿ ಒಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುವುದಾಗಿ ಹೇಳಿದ ದ್ವಿಚಕ್ರ ವಾಹನದ ನಂಬರ್ ಪರಿಶೀಲಿಸಿದಾಗ ಆ ವಾಹನ ಸಾಕಮ್ಮ ಎಂಬುವವರ ಹೆಸರಿನಲ್ಲಿತ್ತು. ಕೂಡಲೇ ವಾಹನದ ಮಾಲೀಕರನ್ನು ಸಂಪರ್ಕಿಸಿದಾಗ ಆರೋಪಿ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೋಸ ಹೋಗಿರುವುದು ತಿಳಿದ ಪ್ರಶಾಂತ್ ಕೂಡಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ ಒಎಲ್‌ಎಕ್ಸ್‌ನಲ್ಲಿ ಬೇರೆ ವ್ಯಕ್ತಿಗಳ ಬೈಕ್, ಬೆಲೆಬಾಳುವ ಕ್ಯಾಮೆರಾ ಸೇರಿ ಹಲವು ವಸ್ತುಗಳ ಜಾಹೀರಾತು ನೀಡಿ ವಂಚಿಸಿರುವ ಸಾಧ್ಯತೆಗಳಿವೆ ಎಂದು ಸೈಬರ್ ಕ್ರೈಂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕ್ಯಾಮೆರಾ ತೋರಿಸಿ ಮೋಸ
ಒಂದೂವರೆ ಲಕ್ಷ ರೂ. ಮೌಲ್ಯದ ಡಿಎಸ್‌ಎಲ್‌ಆರ್ ಕ್ಯಾಮೆರಾವನ್ನು 20 ಸಾವಿರ ರೂ.ಗೆ ಮಾರಾಟ ಮಾಡುವುದಾಗಿ ಆರೋಪಿ ಜಾಹೀರಾತು ಹಾಕಿದ್ದ. ಇದನ್ನು ಗಮನಿಸಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಆತನ ಖಾತೆಗೆ 20 ಸಾವಿರ ರೂ. ಹಣ ವರ್ಗಾವಣೆ ಮಾಡಿ ವಂಚನೆಗೊಳಗಾಗಿದ್ದರು. ಇದೀಗ ಆ ಉದ್ಯೋ ಗಿಯೂ ದೂರು ನೀಡಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.