ಹೊಸದಿಲ್ಲಿ: ಯಾವುದೇ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಜಾಹೀರಾತು ನೀಡುವಂಥ ಸೆಲೆಬ್ರಿಟಿಗಳು, ಸೋಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಇನ್ನು ಮುಂದೆ ಆ ನಿರ್ಧಿಷ್ಟ ಕಂಪೆನಿ, ಸೇವೆ ಅಥವಾ ಬ್ರ್ಯಾಂಡ್‌ನಿಂದ ತಾವು ಪಡೆಯುತ್ತಿರುವ “ಅನುಕೂಲತೆ ಅಥವಾ ಸಂಭಾವನೆ ಅಥವಾ ಉಡುಗೊರೆಗಳ’ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಬೇಕು.
ಇಂಥದ್ದೊಂದು ಮಾರ್ಗಸೂಚಿಯನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹೊರಡಿಸಿದೆ. ಇದು ಗ್ರಾಹಕರ ಹಕ್ಕುಗಳಿಗೆ ಸಂಬಂಧಿಸಿದ ವಿಚಾರ. ಅವರು ಯಾವುದೇ ವಸ್ತುವನ್ನು ಖರೀದಿಸಲು ನಿರ್ಧರಿಸುವ ಮುನ್ನ ಇಂಥ ಎಲ್ಲ ಮಾಹಿತಿಗಳನ್ನು ಅರಿತು ಕೊಂಡಿರಬೇಕಾಗುತ್ತದೆ.
ಹೀಗಾಗಿ, ತಾವು ನೀಡುವ ಜಾಹೀರಾತಿಗೆ ಪ್ರತಿಯಾಗಿ ತಮಗೆ ಆ ಕಂಪೆನಿಗಳು ನೀಡು ವ ಉಡುಗೊರೆ, ಪ್ರವಾಸ ಸೌಲಭ್ಯ, ಹೊಟೇಲ್ ವಾಸ್ತವ್ಯ, ಪ್ರಶಸ್ತಿಗಳು ಅಥವಾ ಆ ಕಂಪೆನಿಗಳೊಂದಿಗೆ ಇರುವ ಕೌಟುಂಬಿಕ ಸಂಬಂಧಗಳನ್ನೂ ಅವರು ಬಹಿರಂಗಪಡಿಸಬೇಕು. ಈ ನಿಯಮ ಉಲ್ಲಂಘಿಸಿದರೆ 50 ಲಕ್ಷ ರೂ.ವರೆಗೆ ದಂಡ ವಿಧಿಸುವುದಾಗಿಯೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.