ಬೆಳಗಾವಿ: ಜಿಲ್ಲಾ ಪಂಚಾಯತ್ ಸಿಇಒ ರಾಮಚಂದ್ರನ್ ಆರ್. ಅವರು ಹುಕ್ಕೇರಿ ತಾಲೂಕಿನ ಹರಗಾಪುರ ಗಡ ಗ್ರಾಮದ ಹತ್ತಿರ ಇರುವ ಕೆರೆ ನಿರ್ಮಾಣದ ಕಾಮಗಾರಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದರು. ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಾಣವಾದ ಇಂಗು ಕೆರೆ ಸುಮಾರು 1.32 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡ ಕೆರೆ ಕಾಮಗಾರಿ ಪರಿಶೀಲಿಸಿ ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಿದ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆರೆ ನಿರ್ಮಾಣದಿಂದಾಗಿ ಸುತ್ತಮುತ್ತಲಿನ ಸುಮಾರು 100 ಕೊಳವೆ ಬಾವಿಗಳಿಗೆ ಮತ್ತು 30 ತೆರೆದ ಬಾವಿಗಳಿಗೆ ಅಂತರ್ಜಲ ಹೆಚ್ಚಿಸುವುದರಿಂದ ಉತ್ತಮ ಬೆಳೆ ಬೆಳೆಯಲು ರೈತರಿಗೆ ಅನುಕೂಲವಾಗಿದೆ ಎಂದು ಮಾಹಿತಿ ನೀಡಿದರು. ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಗಂಡು ಮಕ್ಕಳ ಶಾಲೆಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಶಿಕ್ಷಣ ಇಲಾಖೆಯ ಸಂಯೋಜನೆಯ ಅನುದಾನದಡಿ ನಿರ್ಮಿಸಿದ ಶೌಚಾಲಯ ವೀಕ್ಷಿಸಿದರು.
ಬಾಂದಾರ ನಿರ್ಮಾಣ ಕಾಮಗಾರಿ ಪರಿಶೀಲನೆ: ಜಿಲ್ಲಾ ಪಂಚಾಯತ್ ಸಿಇಒ ರಾಮಚಂದ್ರನ್ ಆರ್. ಅವರು ಹುಕ್ಕೇರಿ ತಾಲೂಕಿನ ಮೋದಗಾ ಗ್ರಾಮಕ್ಕೆ ಭೇಟಿ ನೀಡಿದರು. ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿ (ನಬಾರ್ಡ್)-22ರ ಯೋಜನೆಯಡಿ ನಿರ್ಮಿಸಿದ ಬಾಂದಾರ ಕಾಮಗಾರಿ ಪರಿಶೀಲಿಸಿದರು. ಕಾಮಗಾರಿಯ ಅಂದಾಜು ಮೊತ್ತ 1.50 ಕೋಟಿ ರೂ. ಉದ್ದ 65 ಮೀಟರ್ ಅಗಲ 4.5 ಮೀಟರ್ ಹೊಂದಿದ್ದು, 7 ಅಡಿ ಎತ್ತರ ನೀರು ತಡೆ ಹಿಡಿಯುವ ಸಾಮರ್ಥ್ಯ ಹೊಂದಿದೆ.
ಕಾಮಗಾರಿಯಿಂದಾಗಿ ಸುತ್ತಮುತ್ತಲಿನ ಜನರಿಗೆ ಓಡಾಡಲು ಮತ್ತು ವಾಹನಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗುವುದು. ಅಲ್ಲದೇ ನೀರು ಸಂಗ್ರಹಣೆ ಮಾಡುವುದರೊಂದಿಗೆ ಅಂತರ್ಜಲ ಹೆಚ್ಚಿಸಿ ನೀರಿನ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಅನುದಾನದಡಿ ಸುಮಾರು 50 ಲಕ್ಷ ರೂ.ಗಳಲ್ಲಿ ನಿರ್ಮಿಸಿದ ತೂಗು ಸೇತುವೆಗೆ ಭೇಟಿ ನೀಡಿದರು. ಇದು 60 ಮೀಟರ್ ಉದ್ದದ ಸೇತುವೆ ಇದ್ದು, ಮೋದಗಾ ಗ್ರಾಮದಿಂದ ಮರಣಹೊಳ ಗ್ರಾಮಕ್ಕೆ ನಡೆದುಕೊಂಡು ಮತ್ತು ಒಂದು ದ್ವಿಚಕ್ರವಾಹನ ಸಹ ತೆಗೆದುಕೊಂಡು ಹೋಗಲು ಸಂಪರ್ಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹುಕ್ಕೇರಿಯ ಸಹಾಯಕ ಇಂಜಿನಿಯರ್ ಅಜಿತ್ ಪಾಟೀಲ, ಜಿಪಂ ಐಇಸಿ ಪ್ರಮೋದ ಗೋಡೆಕರ, ಪರ್ವತಗೌಡ ಪಾಟೀಲ ಇತರರು ಇದ್ದರು.