Advertisement

ಮುಂದುವರಿದ ಐಟಿ ದಾಳಿ

12:45 AM Apr 12, 2019 | Sriram |

ಬೆಂಗಳೂರು: ರಾಜ್ಯದಲ್ಲಿ 17ನೇ ಲೋಕಸಭೆ ಚುನಾವಣಾ ಪ್ರಚಾರ ರಂಗೇರುತ್ತಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮ್ಮ ದಾಳಿ ಮುಂದುವರಿಸಿದ್ದಾರೆ.

Advertisement

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಮತ್ತು ಅವರ ಆಪ್ತರು ಹಾಗೂ ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್‌. ಪುಟ್ಟರಾಜು ಅವರ ಪುತ್ರನಿಗೆ ಸೇರಿದ ಮೈಸೂರಿನ ಅಪಾರ್ಟ್‌ಮೆಂಟ್‌ ಮೇಲೆ ಗುರುವಾರ ಐಟಿ ಹಾಗೂ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.

ಮುಂಜಾನೆ ಆರು ಗಂಟೆಯಿಂದಲೇ ಸುಮಾರು 80ಕ್ಕೂ ಹೆಚ್ಚು ಅಧಿಕಾರಿಗಳು, ಡಿಕನ್ಸನ್‌ ರಸ್ತೆಯಲ್ಲಿರುವ ರಿಜ್ವಾನ್‌ ಅರ್ಷದ್‌ ಅವರ ಚುನಾವಣಾ ಪ್ರಚಾರದ ಕಚೇರಿ ಹಾಗೂ ಅವರ ಆಪ್ತವಲಯದ ಉದ್ಯಮಿಗಳಾದ ಅಮಾನುಲ್ಲಾ ಖಾನ್‌, ಕಮಲ್‌ ಪಾಷಾ ಹಾಗೂ ನಯೀಜ್‌ ಖಾನ್‌ ಎಂಬುವರ ಮನೆ ಮತ್ತು ಕಚೇರಿಗಳು ಸೇರಿ ಸುಮಾರು 20ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ, ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಈ ಕುರಿತು ಐಟಿ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲ.

ಮತ್ತೂಂದೆಡೆ ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರ ಸಂಬಂಧಿಕರ ಮೇಲೆ ದಾಳಿ ಮುಂದುವರಿಸಿರುವ ಐಟಿ ಅಧಿಕಾರಿಗಳು ಗುರುವಾರ ಮುಂಜಾನೆ ಪುಟ್ಟರಾಜು ಅವರ ಪುತ್ರ ಶಿವರಾಜ್‌ ಅವರಿಗೆ ಸೇರಿದ ಮೈಸೂರಿನ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದ್ದಾರೆ.

ಮೈಸೂರಿನ ಯಾದವಗಿರಿಯ ಸಂಕಲ್ಪ ಅಪಾರ್ಟ್‌ಮೆಂಟ್‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಮಧ್ಯಾಹ್ನದವರೆಗೆ ಶೋಧ ನಡೆಸಿದ್ದು, ಏ.25ರಂದು ಮಧ್ಯಾಹ್ನ ಮೈಸೂರು ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಚಿವ ಸಿ.ಎಸ್‌.ಪುಟ್ಟರಾಜು ಮತ್ತು ಅವರ ಪುತ್ರನಿಗೆ ನೋಟಿಸ್‌ ಜಾರಿ ಮಾಡಿದ್ದಾರೆ ಎಂದು ಹೇಳಲಾಗಿದೆ.

Advertisement

ತೆರಿಗೆ ದಾಳಿ ನಡೆದಿರುವುದನ್ನುಖಚಿತಪಡಿಸಿರುವ ಸಚಿವ ಸಿ.ಎಸ್‌.ಪುಟ್ಟರಾಜು ಅವರ ಪುತ್ರ ಶಿವರಾಜ್‌, ದಾಳಿ ವೇಳೆ ಮನೆಯಲ್ಲಿ ನಾವುಗಳು ಇರಲಿಲ್ಲ. ಅಡುಗೆಯವರು ಮಾತ್ರ ಇದ್ದರು. ನಾವು ಬರುವಷ್ಟರಲ್ಲಿ ಅಧಿಕಾರಿಗಳು ವಾಪಸ್‌ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರ ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆರಾಜಕೀಯ ಪ್ರೇರಿತ ಐಟಿ ದಾಳಿಯಾಗಿರುವುದು ಖಂಡನೀಯ. ನ್ಯಾಯಯುತವಾಗಿ ಚುನಾವಣೆ ಎದುರಿಸಲಾಗದ ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ವಿರೋಧಿಗಳ ಆತ್ಮಸ್ಥೈರ್ಯ ಕುಗ್ಗಿಸಲು ಹೊರಟಿದೆ.
– ಸಿದ್ದರಾಮಯ್ಯ, ಕಾಂಗ್ರೆಸ್‌
ಶಾಸಕಾಂಗ ಪಕ್ಷದ ನಾಯಕ.

Advertisement

Udayavani is now on Telegram. Click here to join our channel and stay updated with the latest news.

Next