Advertisement

ಮುಂದುವರಿದ ಫ್ಲೆಕ್ಸ್‌, ಬ್ಯಾನರ್‌ಗಳ ತೆರವು

11:51 AM Aug 03, 2018 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌ ಹಾಗೂ ಬಂಟಿಂಗ್ಸ್‌ ತೆರವು ಕಾರ್ಯಾಚರಣೆ ಮುಂದುವರಿಸಿರುವ ಪಾಲಿಕೆಯ ಅಧಿಕಾರಿಗಳು ಗುರುವಾರ 8 ಸಾವಿರಕ್ಕೂ ಹೆಚ್ಚಿನ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸಿದ್ದು, ಕಾರ್ಯಾಚರಣೆ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಪ್ರಕರಣಗಳು ನಡೆದಿವೆ. 

Advertisement

ಹೈಕೋರ್ಟ್‌ ಸೂಚನೆ ಮೇರೆಗೆ ಬುಧವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ ಪಾಲಿಕೆಯ ಅಧಿಕಾರಿಗಳು 10 ಸಾವಿರಕ್ಕೂ ಹೆಚ್ಚಿನ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸಿದ್ದರು. ಗುರುವಾರವೂ ಈ ಪ್ರಕ್ರಿಯೆ ಮುಂದುವರಿಯಿತಾದರೂ ಪೂರ್ಣ ಪ್ರಮಾಣದಲ್ಲಿ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳದ ಕಾರಣ ಹಲವಾರು ಭಾಗಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. 

ಬುಧವಾರ ನಗರದಲ್ಲಿ ತೆರವುಗೊಳಿಸಿದ ಫ್ಲೆಕ್ಸ್‌, ಬ್ಯಾನರ್‌ಗಳ ಮಾಹಿತಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದ ಬಿಬಿಎಂಪಿ ಆಯುಕ್ತರು, ಗುರುವಾರ ಸಂಪೂರ್ಣವಾಗಿ ನಗರವನ್ನು ಫ್ಲೆಕ್ಸ್‌, ಬ್ಯಾನರ್‌ ಮುಕ್ತಗೊಳಿಸುವುದಾಗಿ ತಿಳಿಸಿದ್ದರು. ಆದರೆ, ಗುರುವಾರ ನಿರೀಕ್ಷಿತ ಪ್ರಮಾಣದಲ್ಲಿ ತೆರವು ಕಾರ್ಯಾಚರಣೆ ನಡೆಯದ ಹಿನ್ನೆಲೆಯಲ್ಲಿ ಹಲವಾರು ಕಡೆಗಳಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿದ್ದ ದೃಶ್ಯಗಳು ಕಂಡುಬಂದವು. 

ಈ ಮಧ್ಯೆ ಮಹದೇವಪುರ ವಲಯದಲ್ಲಿ ಫ್ಲೆಕ್ಸ್‌ ತೆರವು ಕಾರ್ಯಾಚರಣೆ ನಡೆಸುವ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ರಾಜಕೀಯ ಮುಖಂಡರ ಬೆಂಬಲಿಗರು ಹಲ್ಲೆ ನಡೆಸಿರುವುದು ವರದಿಯಾಗಿದೆ. ಪರಿಣಾಮ ಕಾರ್ಯಾಚರಣೆ ನಡೆಸಲು ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಭಯಗೊಳ್ಳುವಂತಾಗಿದೆ. 

ಎರಡು ಕಡೆ ಹಲ್ಲೆ: ಮಹದೇವಪುರ ವಲಯದಲ್ಲಿಯೇ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಎರಡು ಕಡೆಗಳಲ್ಲಿ ಹಲ್ಲೆ ನಡೆದಿದ್ದು, ಕೆಲ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗುರುವಾರ ವಲಯದಲ್ಲಿ ಫ್ಲೆಕ್ಸ್‌, ಬ್ಯಾನರ್‌ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬೆದರಿಕೆ ಹಾಕಿ ಕಾರ್ಯಚರಣೆ ಅಡ್ಡಿಪಡಿಸಿರುವ ಕಿಡಿಗೇಡಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ.

Advertisement

ಇದರಿಂದಾಗಿ ಎಚ್‌ಎಎಲ್‌ ವಾರ್ಡ್‌ ಸಹಾಯಕ ಕಂದಾಯ ಅಧಿಕಾರಿ ಭಟ್ಟಾಚಾರ್ಯ ಹಾಗೂ ಕೆಲ ಸಿಬ್ಬಂದಿಗೆ ಗಾಯಗಳಾಗಿವೆ. ಅದೇ ರೀತಿ ಕೆ.ಆರ್‌.ಪುರದ ಪೈ ಬಡಾವಣೆಯಲ್ಲಿ ಶಾಸಕ ಬೈರತಿ ಬಸವರಾಜು ಅವರಿಗೆ ಶುಭ ಕೋರುವ ಬ್ಯಾನರ್‌ಗಳನ್ನು ತೆರವುಗೊಳಿಸುವ ವೇಳೆಯೂ ಶಾಸಕರ ಬೆಂಬಲಿಗರು ಎಂದು ಹೇಳಿಕೊಂಡ ಕಿಡಿಗೇಡಿಗಳು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದು, ಅಧಿಕಾರಿಗಳು ಈ ಕುರಿತು ದೂರು ನೀಡಲು ಮುಂದಾಗಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸಲಾಗಿದೆ. ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಹಾಗೂ ಕಾರ್ಯಾಚರಣೆ ವೇಳೆ ಅಗತ್ಯ ರಕ್ಷಣೆ ನೀಡುವಂತೆ ನಗರ ಪೊಲೀಸ್‌ ಆಯುಕ್ತರನ್ನು ಕೋರಲಾಗಿದೆ. 
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತರು

ಬುಧವಾರ, ಗುರುವಾರ ನಡೆಸಿದ ಕಾರ್ಯಾಚರಣೆ ವಿವರ 
ವಲಯ    ತೆರವುಗೊಳಿಸಿದ ಫ್ಲೆಕ್ಸ್‌, ಬ್ಯಾನರ್‌ ಸಂಖ್ಯೆ 

-ಆರ್‌.ಆರ್‌.ನಗರ    3,468
-ಪಶ್ಚಿಮ     1442
-ಪೂರ್ವ    4834
-ಮಹದೇವಪುರ    2854
-ಯಲಹಂಕ    150702 08 2018 22:09:16
-ಬೊಮ್ಮನಹಳ್ಳಿ    1812
-ದಕ್ಷಿಣ    1657
-ದಾಸರಹಳ್ಳಿ    1,097
-ಒಟ್ಟು    18,671

Advertisement

Udayavani is now on Telegram. Click here to join our channel and stay updated with the latest news.

Next