Advertisement

ಬಹುತ್ವದ ಭಾರತ ಉಳಿಸಲು ಮುಂದಾಗಿ

03:03 PM Dec 14, 2018 | |

ದಾವಣಗೆರೆ: ಭಾರತವೆಂದರೆ ಬಹುತ್ವ. ಬಹುಜನರ ಹಿತಕ್ಕಾಗಿ ನಾವು ಬಹುತ್ವದ ಭಾರತವನ್ನು ಉಳಿಸಬೇಕಿದೆ ಎಂದು ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್‌.ಎಚ್‌. ಅರುಣ್‌ ಕುಮಾರ್‌ ಮನವಿ ಮಾಡಿದ್ದಾರೆ.

Advertisement

ಗುರುವಾರ, ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಗತಿಪರ, ನಾಗರಿಕ ಹಕ್ಕು ಮತ್ತು ಮಾನವ ಹಕ್ಕು ಸಂಘಟನೆಗಳ ಸಂಯುಕ್ತಾಶ್ರಯಲ್ಲಿ ಹಮ್ಮಿಕೊಂಡಿದ್ದ ಬಹುತ್ವದ ಭಾರತಕ್ಕಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿ ಜನಜಾಗೃತಿ ಆಂದೋಲನದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಹಿತ ಜನಸಾಮಾನ್ಯರ ಕೈಯಲ್ಲಿದೆ. ದೊಡ್ಡ ವ್ಯಾಪಾರಿ ಸಂಸ್ಥೆಯಿಂದ ಮತ್ತು ಅವರ ಜೊತೆಗಾರರಾದ ನಾಯಕರಿಂದ ಬದಲಾವಣೆ, ಸಂವಿಧಾನ ರಕ್ಷಣೆ, ಭಾರತದ ಜನಸಾಮಾನ್ಯರ ಕಲ್ಯಾಣ ನಿರೀಕ್ಷೆ ಮಾಡುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜನ ಸಾಮಾನ್ಯರಾದ ನಾವೇ ಸಂವಿಧಾನ ರಕ್ಷಿಸಬೇಕು. ಸಂವಿಧಾನವನ್ನು ನಾವೆಲ್ಲರೂ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಂಡರೆ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಹಾಗೂ ಸವಾಲುಗಳನ್ನು ಎದುರಿಸಬಹುದು ಎಂದು ತಿಳಿಸಿದರು.

ಸಂವಿಧಾನ, ರಾಷ್ಟ ಧ್ವಜ, ರಾಷ್ಟ್ರಗೀತೆ ಗೌರವಿಸುವ ಮೂಲಕ ದೇಶದ ಸಾರ್ವಭೌಮತ್ವ, ಏಕತೆ, ಭಾತೃತ್ವವನ್ನ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಆ ಮೂಲಕ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು. ಸ್ಲಂ ಜನಾದೊಂಲನ ಕರ್ನಾಟಕದ ಜಿಲ್ಲಾ ಸಂಚಾಲಕಿ ರೇಣುಕಾ ಯಲ್ಲಮ್ಮ ಮಾತನಾಡಿ,
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ, ಜನಜಾಗೃತಿ ಆಂದೋಲನ ಹಾಗೂ ಜಾಥಾವನ್ನು ವಿವಿಧ ಸಂಘಟನೆಗಳ ಅಡಿಯಲ್ಲಿ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ. ಜನಸಾಮಾನ್ಯರಿಗೆ ಸಂವಿಧಾನ ನೀಡಿದ ಹಕ್ಕುಗಳು, ಕರ್ತವ್ಯಗಳ ಕುರಿತು ಜನಜಾಗೃತಿ ಮೂಡಿಸಲಾಗುವುದು ಅಲ್ಲದೇ ಸಮಾವೇಶ ನಡೆಸಲಾಗುವುದು ಎಂದರು.

ಪೀಪಲ್ಸ್‌ ಲಾಯರ್‌ ಗಿಲ್ಡ್‌ ಅಧ್ಯಕ್ಷ ಅನೀಷ್‌ ಪಾಷ ಮಾತನಾಡಿ, ಮಾನವೀಯತೆಯ ವಿಶಾಲ ನೆಲೆಯಲ್ಲಿ ರಚಿಸಲ್ಪಟ್ಟ ಸಂವಿಧಾನವನ್ನು ಅನುಸರಿಸಿಕೊಂಡು ಬಾಳುವುದು ಈ ಕಾಲಘಟ್ಟದ ಬಹುದೊಡ್ಡ ಧರ್ಮ. ಸಂವಿಧಾನ ಅರಿತು ಅದರ ಆಶಯದಂತೆ ನಡೆಯುವ ಮೂಲಕ ನಾವೆಲ್ಲರೂ ನೈಜ ಭಾರತೀಯರಾಗಬೇಕು ಎಂದು ತಿಳಿಸಿದರು.

Advertisement

ದಲಿತ ಸಂಘಟನೆಗಳ ಒಕ್ಕೂಟದ ಸಿ.ಬಸವರಾಜ್‌ ಮಾತನಾಡಿ, ಸಂವಿಧಾನ ಆರ್ಥಿಕ, ಸಾಮಾಜಿಕ ನ್ಯಾಯವನ್ನ ಪ್ರತಿಪಾದಿಸಿದೆ. ಈಗ ಭಾರತದಲ್ಲಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಭಾವನಾತ್ಮಕ ವಿಚಾರದ ಮೂಲಕ ಜನತೆ ದಾರಿ ತಪ್ಪಿಸಲಾಗುತ್ತಿದೆ ಎಂದು ದೂರಿದರು.

ಸ್ಲಂ ಜನಾದೋಂಲನ ಸಂಘಟನೆಯ ಎಂ.ಶಬ್ಬೀರ್‌ಸಾಬ್‌, ದೇವೇಂದ್ರಪ್ಪ, ಮಂಜುನಾಥ್‌ ಯರಗುಂಟೆ, ಎಸ್‌. ಮರಿಯಪ್ಪ, ಸಾವಿತ್ರಿ ಬಾ ಫುಲೆ ಸಂಘಟನೆಯ ಸಾವಿತ್ರಮ್ಮ, ರಿಯಾನ್‌ ಬಾನು, ಮುಬಾರಕ್‌, ದಲಿತ ಸಂಘರ್ಷ ಸಮಿತಿಯ ಮಲ್ಲೇಶ್‌ ಎನ್‌.ಕುಕ್ಕವಾಡ, ರಾಜ್ಯ ರೈತ ಸಂಘದ ಅರುಣ್‌ಕುಮಾರ್‌ ಕುರುಡಿ,
ಸಫಾಯಿ ಕರ್ಮಚಾರಿ ಸಂಘಟನೆಯ ಡಿ.ಎಸ್‌. ಬಾಬಣ್ಣ, ಮ್ಯಾನ್ಯುಯಲ್‌ ಸ್ಕಾವೆಂಜರ್ಸ್‌ ಸಂಘಟನೆಯ ಹುಚ್ಚೆಂಗಪ್ಪ, ಎಚ್‌. ಮೂರ್ತಿ, ಜೈ ಹಿಂದ್‌ ಯೂತ್‌ ಆರ್ಗನೈಸೇಷನ್‌ನ ರಸೂಲ್‌ ಸಾಬ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next