Advertisement

ಪಲಿಮಾರು ಮಠದ ನೂತನ ಯತಿಗೆ ಅಷ್ಟಮಹಾಮಂತ್ರಗಳ ಉಪದೇಶ

11:33 PM May 11, 2019 | Sriram |

ಉಡುಪಿ: ಶ್ರೀ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನೇಮಕ ಗೊಳ್ಳುವ ಶೈಲೇಶ ಉಪಾಧ್ಯಾಯರು ಶುಕ್ರವಾರ ಸನ್ಯಾಸಾಶ್ರಮವನ್ನು ಶ್ರೀಕೃಷ್ಣಮಠದಲ್ಲಿ ಸ್ವೀಕರಿಸಿದ್ದು ಶನಿವಾರ ನಾರಾಯಣ ಅಷ್ಟಾಕ್ಷರ ಮಂತ್ರ, ವಾಸುದೇವ ದ್ವಾದಶಾಕ್ಷರ ಮಂತ್ರ, ವ್ಯಾಹೃತಿ ಮಹಾಮಂತ್ರ, ಪುರುಷಸೂಕ್ತ, ಬ್ರಹ್ಮಗಾಯತ್ರಿ ಮೊದಲಾದ ಅಷ್ಟ ಮಹಾಮಂತ್ರಗಳ ಉಪದೇಶವನ್ನು ಗುರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಶಿಷ್ಯರಿಗೆ ಉಪದೇಶಿಸಿದರು.

Advertisement

ಬೆಳಗ್ಗೆ ವಾಯುಸ್ತುತಿ ಪುರಶ್ಚರಣ ಹೋಮವನ್ನು ವೈದಿಕರು ನಡೆಸಿದರು. ಶುಕ್ರವಾರ ಸಂಜೆ ರಾಜಾಂಗಣದಲ್ಲಿ ಸಾರ್ವಜನಿಕ ಉಪನ್ಯಾಸ ನೀಡಿದ ನೂತನ ಯತಿಗಳು ಶನಿವಾರ ಸಂಜೆಯೂ ಗೋಷ್ಠಿಯಲ್ಲಿ ಪಾಲ್ಗೊಂಡರು.

ಶುಕ್ರವಾರ ವೇದ- ವೇದಾಂಗವಾದ ತರ್ಕ- ವೇದಾಂತ ವಿಷಯದಲ್ಲಿ ಮಾತ ನಾಡಿದರು. ‘ತರ್ಕ ಸಂಗ್ರಹ’ ಗ್ರಂಥದಲ್ಲಿ ಬರುವ ವಾಯು ದೇವರ ಲಕ್ಷಣದ ಬಗ್ಗೆ ಸಂಸ್ಕೃತದಲ್ಲಿ ನಿರರ್ಗಳವಾಗಿ ಅನುವಾದ ಮಾಡಿದರು.

ಇಂದು ವಿವಿಧ ಪಾರಾಯಣಗಳು
ರವಿವಾರ ಬೆಳಗ್ಗೆ ಎಂದಿನಂತೆ ಹಿರಿಯ ಸ್ವಾಮೀಜಿಯವರು ಮಹಾಪೂಜೆಯನ್ನು ಮುಗಿಸಿದ ಬಳಿಕ ಪಟ್ಟಾಭಿಷೇಕ ಕಾರ್ಯ ಕ್ರಮಗಳು ಆರಂಭವಾಗಲಿದೆ. 10 ಗಂಟೆಗೆ ಕೃಷ್ಣಮಠದ ಗರ್ಭಗುಡಿ ಹೊರಭಾಗ ಚತುರ್ವೇದ, ಶ್ರೀಮದ್ಭಾಗವತ, ಗೀತೆ, ರಾಮಾಯಣ ಮೊದಲಾದ ಗ್ರಂಥಗಳ ಪಾರಾಯಣ ನಡೆಯುವ ಜತೆಗೆ ಮಹಿಳೆಯರು ಶ್ರೀವಾದಿರಾಜಸ್ವಾಮಿಗಳು ಬರೆದ ಲಕ್ಷ್ಮೀ ಶೋಬಾನೆ ಪಠಿಸಲಿದ್ದಾರೆ.

ಪಟ್ಟಾಭಿಷೇಕ ಪ್ರಕ್ರಿಯೆ
ಮಧ್ಯಾಹ್ನ 12 ಗಂಟೆಗೆ ಪಲಿಮಾರು ಮಠದ ಉತ್ತರಾಧಿಕಾರಿಗಳಾಗಿ ನಿಯೋಜನೆಗೊಳಿಸುವ ಪ್ರಕ್ರಿಯೆ ಅಂಗವಾಗಿ ಹಿರಿಯ ಸ್ವಾಮೀಜಿಯವರು ಉಪಾಸನೆ ಮಾಡುವ ಕೃಷ್ಣ, ವೇದವ್ಯಾಸರ ವಿಗ್ರಹ ಮತ್ತು ವಿಶ್ವಂಭರ ಸಾಲಿಗ್ರಾಮವನ್ನು ಶಿಷ್ಯನ ತಲೆ ಮೇಲೆ ಹರಿವಾಣ ದಲ್ಲಿರಿಸಿ ಅಭಿಷೇಕವನ್ನು ಮಾಡುವರು. ಇದೇ ಸಂದರ್ಭ ನೂತನ ಯತಿಗಳಿಗೆ ಇರಿ ಸಿದ ಹೆಸರನ್ನು ಘೋಷಣೆ ಮಾಡುವರು.

Advertisement

ಸಾಮೂಹಿಕ ಮಂಗಲಾಷ್ಟಕ ಪಠನ
ಈ ಸಂದರ್ಭ ನೂತನ ಯತಿಗಳಿಗೆ ಮತ್ತು ದೇಶಕ್ಕೆ ಬರುವ ನೂತನ ಪ್ರಧಾನಮಂತ್ರಿಗಳಿಗೂ ಅಂದರೆ ರಾಷ್ಟ್ರಕ್ಕೂ ಒಳಿತಾಗಲೆಂದು ‘ಮಂಗಲ ಭಾರತ ನಿರ್ಮಾಣ’ ಕಲ್ಪನೆಯಡಿ ಶ್ರೀಪಲಿಮಾರು ಮಠದ ಆರನೆಯ ಯತಿ ಶ್ರೀರಾಜರಾಜೇಶ್ವರತೀರ್ಥರು ಬರೆದಿರುವ ‘ಮಂಗಲಾಷ್ಟಕ’ವನ್ನು ಸಾಮೂಹಿಕವಾಗಿ ಪಠಿಸುವ ಕಾರ್ಯಕ್ರಮವನ್ನು ಆಯೋ ಜಿಸಲಾಗಿದೆ. ಇತ್ತೀಚಿಗೆ ಪಲಿಮಾರು ಮಠದಿಂದ ಉಡುಪಿ ಸಹಿತ ವಿವಿಧೆಡೆ ನಡೆದ ಧಾರ್ಮಿಕ ಶಿಬಿರದಲ್ಲಿ ಪಾಲ್ಗೊಂಡ ಬಾಲಕರು ಮಂಗಲಾಷ್ಟಕವನ್ನು ಬೆಳಗ್ಗೆ 10ರಿಂದ 12 ಗಂಟೆವರೆಗೆ ಪಠಿಸಲಿದ್ದಾರೆ.

ಶ್ರೀಕೃಷ್ಣಮಠದ ಗರ್ಭಗುಡಿ ಹೊರ ಭಾಗದಲ್ಲಿ ಜಾಗ ಕಡಿಮೆ ಇರುವುದರಿಂದ ಇಲ್ಲಿ ನಡೆಯುವ ಪ್ರಕ್ರಿಯೆಯನ್ನು ಸಾರ್ವ ಜನಿಕರು ನೋಡಲು ಮಧ್ವ ಮಂಟಪ, ರಾಜಾಂಗಣದಲ್ಲಿ ಪರದೆಯ ಮೂಲಕ ನೇರ ಪ್ರಸಾರಕ್ಕೆ ಕ್ರಮ ವಹಿಸಲಾಗಿದೆ ಎಂದು ಕಾರ್ಯ ಕ್ರಮದ ಸಂಚಾಲಕ ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next