ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಜಾರಿ ಮಾಡಲಾದ ಎರಡು ದಿನಗಳ ವಾರಾಂತ್ಯ ಕರ್ಫ್ಯೂಗೆ ರವಿವಾರವೂ ಉತ್ತಮ ಸ್ಪಂದನೆ ದೊರೆಯಿತು. ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಲಾಗಿದ್ದರೆ, ವಾಣಿಜ್ಯ ಚಟುವಟಿಕೆಗಳು ಬೆಳಗ್ಗೆಯಿಂದಲೇ ಸ್ಥಗಿತವಾಗಿದ್ದವು. ಸೋಮವಾರದಿಂದ ಆ.16ರ ವರೆಗೆ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂಗೆ ಜಾರಿ ಇರಲಿದೆ.
ರವಿವಾರ ರಜೆ ದಿನವೂ ಆಗಿದ್ದರಿಂದ ವಾಹನ ಸಂಚಾರ ಕಡಿಮೆ ಇತ್ತು. ಅಗತ್ಯ ವಸ್ತುಗಳ ಅನುಮತಿ ಇದ್ದಿದ್ದರಿಂದ ನಗರದ ಸೂಪರ್ ಮಾರ್ಕೆಟ್, ಕಿರಣಾ ಬಜಾರ್, ಶಹಾಬಜಾರ್, ಪೊಲೀಸ್ ಚೌಕ್, ಗಂಜ್ ಪ್ರದೇಶ, ಕಣ್ಣಿ ಮಾರ್ಕೆಟ್, ರಾಮಮಂದಿರ ವೃತ್ತದಲ್ಲಿ ಮಧ್ಯಾಹ್ನದ ವರೆಗೆ ಜನರು ಸೇರಿದ್ದರು.
ಭೀಮನ ಅಮಾವಾಸ್ಯೆ ಮತ್ತು ಶ್ರಾವಣ ಆರಂಭ ಹಿನ್ನೆಲೆಯಲ್ಲಿ ಜನರು ಪೂಜಾ ಸಾಮಗ್ರಿ, ಹೂವು, ಹಣ್ಣು, ಬಾಳೆ ದಿಂಡು ಹಾಗೂ ತರಕಾರಿ ಖರೀದಿಯಲ್ಲಿ ತೊಡಗಿದ್ದರು. ಮಧ್ಯಾಹ್ನದ ನಂತರ ವ್ಯಾಪಾರ ಬಂದ್ ಆಗುತ್ತದೆ ಎನ್ನುವ ಕಾರಣಕ್ಕೆ ಬೆಳಗ್ಗೆಯೇ ಮಾರುಕಟ್ಟೆಗಳಿಗೆ ಹೆಚ್ಚಿನ ಜನರು ಬಂದಿದ್ದರು.
ಮಧ್ಯಾಹ್ನದ ವರೆಗೆ ರಸ್ತೆ ಬದಿ ವ್ಯಾಪಾರವೂ ಜೋರಾಗಿ ನಡೆಯಿತು. ಮಧ್ಯಾಹ್ನ 2 ಗಂಟೆಯಾಗುತ್ತಿದ್ದಂತೆ ಪೊಲೀಸರು ಅಗತ್ಯ ವಸ್ತುಗಳ ವ್ಯಾಪಾರವನ್ನು ಸ್ಥಗಿತಗೊಳಿಸಿದರು. ಸೈರನ್ ವಾಹನ ಸಮೇತ ಬಂದ ಪೊಲೀಸರು ಎಲ್ಲೆಡೆ ಸಂಚರಿಸಿ, ತರಕಾರಿ ಮಾರುಕಟ್ಟೆ ಮತ್ತು ದಿನಸಿ ಅಂಗಡಿಗಳನ್ನು ಬಂದ್ ಮಾಡಿಸಿದರು. ರಸ್ತೆ ಬದಿ ಹೂವು, ಹಣ್ಣು ತರಕಾರಿ ಮಾರುವವರು ಮತ್ತು ತಳ್ಳುಗಾಡಿಗಳನ್ನು ಪೊಲೀಸರು ಲಾಠಿ ಹಿಡಿದು ತೆರವುಗೊಳಿಸಿದರು.
ಅಲ್ಲದೇ, ಡಿಸಿಪಿ ಅಡೂರ ಶ್ರೀನಿವಾಸಲು ಹಾಗೂ ಹಿರಿಯ ಪೊಲೀಸರು ಗಸ್ತು ತಿರುಗಿದರು. ಅನಗತ್ಯವಾಗಿ ರಸ್ತೆಗಿಳಿದ ಕಾರು, ಬೈಕ್‌ಗಳನ್ನು ತಡೆದು ಸವಾರರ ವಿಚಾರಣೆ ನಡೆಸಿ, ಮಾಸ್ಕ್ ಧರಿಸದೇ ಇರುವವರಿಗೆ ದಂಡ ಹಾಕಿದರು. ಹೀಗಾಗಿ ಸಂಜೆ ವೇಳೆಗೆ ಬಹುತೇಕ ನಗರ ಸ್ತಬ್ಧಗೊಂಡಿತ್ತು. ರೈಲು ನಿಲ್ದಾಣ, ಬಸ್ ನಿಲ್ದಾಣ, ಕೋರ್ಟ್ ರಸ್ತೆ, ಹಳೆ ಜೇವರ್ಗಿ ರಸ್ತೆ, ಹೊಸ ಜೇವರ್ಗಿ ರಸ್ತೆ, ಶಹಾಬಜಾರ್, ಕೋಟೆ ರಸ್ತೆ, ಎಂಎಸ್‌ಕೆ ಮಿಲ್ ರಸ್ತೆಯಲ್ಲಿ ಎಲ್ಲ ಮಳಿಗೆಗಳು ಮುಚ್ಚಿದ್ದವು. ಪೆಟ್ರೋಲ್ ಬಂಕ್, ಔಷಧಿ ಮಳಿಗೆಗಳು, ಹಾಲು ಮಾರಾಟ ಎಂದಿನಂತೆ ಕಾರ್ಯನಿರ್ವಹಿಸಿದವು.
ಅಪ್ಪನ ಗುಡಿ ಗೇಟ್‌ನಲ್ಲೇ ಪೂಜೆ
ರವಿವಾರ ಕರ್ಫ್ಯೂ ಹಿನ್ನೆಲೆಯಲ್ಲಿ ದೇವಸ್ಥಾನಗಳು, ಪ್ರಾರ್ಥನಾ ಮಂದಿರಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧವಿತ್ತು. ಶ್ರಾವಣ ಮಾಸ ಮತ್ತು ಅಮಾವಾಸ್ಯೆ ಕಾರಣ ನಗರದ ಪ್ರಸಿದ್ಧ ಶರಣಬಸವೇಶ್ವರ ದೇವಾಲಯದ ಗೇಟ್‌ನಲ್ಲಿ ಅನೇಕ ಭಕ್ತರು ಪೂಜೆ ಸಲ್ಲಿಸದರು. ಸರತಿಯಾಗಿ ಬಂದ ಭಕ್ತರು ದೇವಾಲಯದ ಗೇಟ್‌ಗೆ ತೆಂಗಿನ ಕಾಯಿ ಒಡೆದು, ಹೂವು ಅರ್ಪಿಸಿದರು.