ಬೆಂಗಳೂರು: ನಿರಂತರ ಸಾಹಿತ್ಯ ಕೃಷಿ ಮಾಡುತ್ತಿರುವ ಸಾಹಿತಿಗಳು ಕಿರುತೆರೆ ಹಾಗೂ ಸಿನಿಮಾರಂಗದಂತಹ ಬಣ್ಣದ ಲೋಕ ಪ್ರವೇಶ ಮಾಡುತ್ತಾ ಹೋದರೆ, ಕೃತಿ ರಚನೆ ಮಾಡುವವರು ಯಾರು ಎಂದು ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್. ನಿಸಾರ್ ಅಹ್ಮದ್ ಕಳವಳ ವ್ಯಕ್ತಪಡಿಸಿದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಶನಿವಾರ ಮೈಸೂರಿನ ತುಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಹೊರತಂದ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಅವರ ಗಾನಯಾನ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಆವರು, ಸಾಹಿತಿಗಳು ಕಿರುತೆರೆ ಹಾಗೂ ಸಿನಿಮಾ ಲೋಕ ಪ್ರವೇಶ ಮಾಡುವುದರಿಂದ ಗಟ್ಟಿ ಸಾಹಿತ್ಯಕ್ಕೆ ತೊಡಕಾಗುವ ಸಾಧ್ಯತೆ ಇದೆ. ಪ್ರಸಕ್ತ ದಿನಗಳಲ್ಲಿ ಸಾಹಿತಿಗಳು ಚಲನಚಿತ್ರ ರಂಗದೆಡೆಗೆ ಸಾಗುತ್ತಿದ್ದಾರೆ ಎಂದು ಹೇಳಿದರು.
ಗಟ್ಟಿ ಸಾಹಿತ್ಯ: ಜನಪ್ರಿಯ ಸಿನಿಮಾ ಸಂಗೀತದಲ್ಲಿ ಸಾಹಿತ್ಯಕ್ಕೆ ಅಷ್ಟೊಂದು ಮಹತ್ವವಿಲ್ಲ. ಹೀಗಾಗಿ ಸಾಹಿತಿಗಳು ಸಿನಿಮಾಕ್ಕೆ ಬೇಕಾದ ರಚನೆ ಸಿದ್ಧಪಡಿಸುವಾಗ ಲಯ ಕಳೆದುಕೊಳ್ಳುವ ಸಾಧ್ಯತೆ ಇದೆ. ದೊಡ್ಡರಂಗೇಗೌಡರಂತಹ ಸಾಹಿತಿಗಳು ಪರಿಸರವನ್ನು ಆಧಾರವಾಗಿಟ್ಟುಕೊಂಡು ಗಟ್ಟಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ ಎಂದು ಶ್ಲಾ ಸಿದರು.
ಗಾನಯಾನ ಕವನ ಸಂಕಲನದಲ್ಲಿ ಬರುವ ಗೋವಿನ ಕವಿತೆ ರಾಜಕೀಯ ಪಕ್ಷವೊಂದರ ಪ್ರಣಾಳಿಕೆಯಂತಿದೆ ಎಂದು ಕೆ.ಎಸ್.ನಿಸಾರ್ ಅಹ್ಮದ್ ಅವರು ವಿಮರ್ಶಿಸಿರುವುದಕ್ಕೆ ವೇದಿಕೆಯಲ್ಲೇ ಸ್ಪಷ್ಟನೆ ನೀಡಿದ ಸಾಹಿತಿ ದೊಡ್ಡರಂಗೇಗೌಡರು, ನಾನು ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವನು, ದೇಶದ ಪ್ರತಿಯೊಬ್ಬರ ರೈತನಿಗೂ ಗೋವಿಗೂ ಅವಿನಾಭಾವ ಸಂಬಂಧ ಇದೆ. ಕೊಟ್ಟಿಗೆಯಲ್ಲಿ ಗೋವಿನ ಸೆಗಣಿ, ಗಂಜಲನ್ನು ತಿಪ್ಪೆಗೆ ಹಾಕಿರುವ ನೆನಪು ಇನ್ನೂ ಮಾಸಿಲ್ಲ. ಬಿಜೆಪಿ ಸೇರುವ ಮೊದಲೇ ಗೋವಿನ ಬಗ್ಗೆ ಅನೇಕ ಕವಿತೆ ರಚಿಸಿದ್ದೇನೆ ಎಂದರು.
ಬುಗುರಿಯಂತ ಕವಿತೆ: ಮಕ್ಕಳು ಬುಗುರಿ ಸಿದ್ಧಪಡಿಸಿ, ನಾಜೂಕಿನಿಂದ ಮೊಳೆ ಹೊಡೆಯುವುದು ಎಷ್ಟು ಕಷ್ಟವೋ, ಕವಿ ರಚಿಸಿದ ಕವಿತೆಗೆ ಶೀರ್ಷಿಕೆ ನೀಡುವುದು ಅಷ್ಟೇ ಕಷ್ಟ. ಬುಗುರಿ ತಯಾರಿಸಿ, ಮೊಳೆ ಹೊಡೆದು, ಕೈ ಮೇಲೆ ತಿರುಗಿಸಿಕೊಂಡು ಆನಂದ ಪಟ್ಟಂತೆ ಕವಿಯೂ ಕೂಡ ಕವಿತೆ ರಚಿಸಿ, ಶೀರ್ಷಿಕೆ ನೀಡಿ ಆನಂದಿಸುತ್ತಾನೆ .ಆದರೆ, ಒಳ್ಳೆಯ ವಿಷಯವನ್ನು ಒಪ್ಪಿಕೊಳ್ಳದಂತಹ ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಕವಿ ದೊಡ್ಡರಂಗೇಗೌಡ ಹೇಳಿದರು.
ಕವಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಕಸಾಪ ಅಧ್ಯಕ್ಷ ಡಾ. ಮನುಬಳಿಗಾರ್, ಚಲನಚಿತ್ರ ಕಲಾವಿದ ಸುಚೇಂದ್ರ ಪ್ರಸಾದ್, ಮೈಸೂರಿನ ತುಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪ್ರಕಾಶಕ ಟಿ.ಎಸ್. ಛಾಯಾಪತಿ ಇತರರು ಹಾಜರಿದ್ದರು.