ಮುಂಬೈ: ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದ್ದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಐವರು ಸದಸ್ಯರಿಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿರುವುದಕ್ಕೆ ಸಾಕ್ಷ್ಯವೊಂದನ್ನು ತನಿಖಾ ಅಧಿಕಾರಿಗಳು ಹುಡುಕಿದ್ದಾರೆ. “ಈ ಐವರು ಇದ್ದ ವಾಟ್ಸ್‌ಆ್ಯಪ್ ಗುಂಪಿನ ಅಡ್ಮಿನ್ ಪಾಕಿಸ್ತಾನ ಮೂಲದವನು.
175 ಜನರಿರುವ ಗುಂಪಿನಲ್ಲಿ ಅರಬ್ ಸಂಯುಕ್ತ ಸಂಸ್ಥಾನ, ಅಫ್ಘಾನಿಸ್ತಾನದವರೂ ಇದ್ದಾರೆ’ ಎಂದು ಉಗ್ರ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳ, ಮಹಾರಾಷ್ಟ್ರ ಎಟಿಎಸ್ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಮಾಲೇಗಾಂವ್, ಕೊಲ್ಹಾಪುರ, ಭೀಡ್ ಮತ್ತು ಪುಣೆಯಿಂದ ಐವರು ಪಿಎಫ್ಐ ಸದಸ್ಯರನ್ನು ಬಂಧಿಸಿದ್ದರು. ಅವರ ಮೊಬೈಲ್‌ಗಳು, ಲ್ಯಾಪ್‌ಟಾಪ್, ಕಂಪ್ಯೂಟರ್, ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿತ್ತು. ಅದರಲ್ಲಿ ಅವರುಗಳಿದ್ದ ವಾಟ್ಸ್‌ಆ್ಯಪ್ ಗುಂಪು ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಉತ್ತೇಜಿಸುತ್ತಿದ್ದ ಗುಂಪಾಗಿತ್ತು ಎನ್ನುವ ಅಂಶ ಹೊರಬಿದ್ದಿದೆ.
ಗುಂಪಿನಲ್ಲಿದ್ದ 175 ಮಂದಿಯ ಪೈಕಿ ಬಹುತೇಕರು ಬೇರೆ ಬೇರೆ ದೇಶಗಳಿಗೆ ಪ್ರಯಾಣ ಬೆಳೆಸಿದವರಾಗಿದ್ದಾರೆ. ಅವರಲ್ಲಿ ಹಲವರಿಗೆ ವಿದೇಶಗಳಿಂದ ಹಣ ವರ್ಗಾವಣೆಯೂ ಆಗಿದ್ದು, ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಾಟ್ಸ್‌ಆ್ಯಪ್ ಗುಂಪಿನ ಅಡ್ಮಿನ್ ಅನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸದಸ್ಯರುಗಳು ನಿಷೇಧಿತ ಸಂಘಟನೆಯಾಗಿರುವ “ಸಿಮಿ’ ರೀತಿಯಲ್ಲೇ ಕೆಲಸ ಮಾಡುತ್ತಿದ್ದರು ಎಂದೂ ತನಿಖೆಯಿಂದ ಗೊತ್ತಾಗಿದೆ.
Related Articles
ಈ ಬಗ್ಗೆ ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಪ್ರತಿಕ್ರಿಯೆ ಸಲ್ಲಿಸಿದ್ದು, “ಬಂಧಿತರಲ್ಲಿ ಓರ್ವ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹಾಗಾಗಿ ಆತ ವಿದೇಶಗಳಿಗೆ ಪ್ರಯಾಣ ಮಾಡಿದ್ದಾನೆ. ಇನ್ನೋರ್ವ ಮೌಲಾನಾ ಆಗಿರುವುದರಿಂದ ಬೇರೆ ಬೇರೆ ದೇಶಗಳಿಗೆ ಯಾತ್ರೆ ಮಾಡಿದ್ದಾನೆ’ ಎಂದು ಸಮರ್ಥಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸಂಘಟನೆಯ ಮೇಲೆ ನಿಷೇಧ ಹೇರಿತ್ತು.