Advertisement

ಗ್ಯಾಸ್‌ಲೈಟ್‌ನಲ್ಲಿ ನಡೆದಿತ್ತು ಪರ್ಯಾಯ ಮೆರವಣಿಗೆ!

12:17 AM Jan 18, 2020 | Sriram |

ಉಡುಪಿ: ಈಗ ಪರ್ಯಾಯೋತ್ಸವವೆಂದರೆ ಅದ್ದೂರಿ. ವಿದ್ಯುದ್ದೀಪಾಲಂಕಾರಗಳು ಕಣ್ಣು ಕೋರೈಸುತ್ತವೆ. ಊಟಕ್ಕೆ ಟೇಬಲ್‌, ಬಫೆ ವ್ಯವಸ್ಥೆ ಬಂದಿವೆ. 1950-60ರ ದಶಕಗಳಲ್ಲಿ ಇದಾವುದೂ ಇದ್ದಿರಲಿಲ್ಲ.

Advertisement

ಓಡ್ಲು ಹಂಚಿನ ಕಟ್ಟಡದಲ್ಲಿ ದರ್ಬಾರ್‌
ಪರ್ಯಾಯ ದರ್ಬಾರ್‌ ಸಭೆ ನಡೆಯುತ್ತಿದ್ದುದು ಈಗಿನ ಬಡಗುಮಾಳಿಗೆಯೊಳಗೆ. ಅದು ಓಡ್ಲು (ದಂಬೆ) ಹಂಚಿನಿಂದ ಕೂಡಿತ್ತು. 1952ರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ಪ್ರಥಮ ಪರ್ಯಾಯ ದರ್ಬಾರ್‌ ಸಭೆ ನಡೆದದ್ದು ಇಲ್ಲಿಯೇ. ಇವರ ಎರಡನೆಯ ಪರ್ಯಾಯ ದರ್ಬಾರ್‌ ಸಭೆ 1968ರಲ್ಲಿ ಈಗಿನ ರಾಜಾಂಗಣಕ್ಕೆ ವಿಸ್ತರಣೆಯಾಯಿತು. ಈ ನಡುವೆ ಬಡಗುಮಾಳಿಗೆ ಹೊರಗಿರುವ ವಸಂತ ಮಹಲ್‌ ಪ್ರದೇಶದಲ್ಲಿ ಕೆಲವು ಪರ್ಯಾಯದ ದರ್ಬಾರ್‌ ಸಭೆ ನಡೆದವು. 1968-69ರ ಅವಧಿಯಲ್ಲಿ ಪೇಜಾವರ ಶ್ರೀಗಳು ಬಡಗುಮಾಳಿಗೆಯಲ್ಲಿ ತಳಅಂತಸ್ತು ನಿರ್ಮಿಸಿದರೆ, ಅದಮಾರು ಮಠದ ಶ್ರೀ ವಿಬುಧೇಶತೀರ್ಥರು 1972-73ರ ಅವಧಿಯಲ್ಲಿ ಮೇಲ್ಭಾಗವನ್ನು ನಿರ್ಮಿಸಿದರು.

ಹೊಯಿಗೆ ಮೇಲೆ ಎಲೆ ಊಟ
1984-85ರವರೆಗೂ ರಾಜಾಂಗಣದ ಪ್ರದೇಶ ಖಾಲಿ ಇತ್ತು. ಇಲ್ಲಿ ಮಲ್ಪೆಯಿಂದ ಲೋಡ್‌ಗಟ್ಟಲೆ ಹೊಯಿಗೆಯನ್ನು ತಂದು ಹಾಕಿ ಅಲ್ಲಿ ಮಧ್ಯಾಹ್ನದ ಊಟ ನಡೆಯುತ್ತಿತ್ತು. ಹೊಯಿಗೆ ಮೇಲೆ ಎಲೆ ಹಾಕಿ ಕೆಳಭಾಗದಲ್ಲಿ ಹೊಯಿಗೆಯ ದಂಡೆ ಮಾಡಿ ಊಟ ಮಾಡಬೇಕಾಗುತ್ತಿತ್ತು. ಇದೇ ವ್ಯವಸ್ಥೆಯಲ್ಲಿ ಸಾವಿರಾರು ಜನರು ಆಗಲೂ ಊಟ ಮಾಡುತ್ತಿದ್ದರು. ಅಡುಗೆ ತಯಾರಿ ಈಗಿನ ಬಿರ್ಲಾ ಛತ್ರದ ಬಳಿ ನಡೆಯುತ್ತಿತ್ತು. ಇಂತಹ ಘಟನೆಗಳನ್ನು ಪೇಜಾವರ ಶ್ರೀಗಳ ಪೂರ್ವಾಶ್ರಮದ ಸಹೋದರ ರಘುರಾಮ ಆಚಾರ್ಯ, ವಿದ್ವಾಂಸ ಚಿಪ್ಪಗಿರಿ ನಾಗೇಂದ್ರಾಚಾರ್ಯ ಸ್ಮರಿಸಿಕೊಳ್ಳುತ್ತಾರೆ. 1972ರಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿದ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರೂ ರಾಜಾಂಗಣದಲ್ಲಿ ಹೊಯಿಗೆ ಮೇಲೆ ಊಟ ನಡೆಯುತ್ತಿದ್ದುದನ್ನು ಕಂಡಿದ್ದಾರೆ.

ಕಟ್ಟಡಗಳಿದ್ದಲ್ಲಿ ಗದ್ದೆ
ಈಗ ಗೀತಾ ಮಂದಿರ, ಕೃಷ್ಣಧಾಮ ಇರುವಲ್ಲಿ ಗದ್ದೆಗಳಿದ್ದವು. ರಾಜಾಂಗಣದಲ್ಲಿ 1984-85ರ ಪೇಜಾವರ ಶ್ರೀಗಳ ಮೂರನೆಯ ಪರ್ಯಾಯ ಕಾಲದಲ್ಲಿ ಮೇಲೆ ತಗಡಿನ ಮಾಡು, ಕೆಳಗೆ ಕಡಪ ಕಲ್ಲು ಬಂತು. 2000-01ರ ನಾಲ್ಕನೆಯ ಪರ್ಯಾಯದಲ್ಲಿ ಇನ್ನಷ್ಟು ವ್ಯವಸ್ಥಿತ ಕಟ್ಟಡ ಆಗಿ, 2016-18ರ ಐದನೆಯ ಪರ್ಯಾಯದಲ್ಲಿ ಮೇಲ್ಭಾಗದಲ್ಲಿಯೂ ಕಟ್ಟಡ ನಿರ್ಮಿಸಲಾಯಿತು.

ಗ್ಯಾಸ್‌ಲೈಟ್‌ನಲ್ಲಿ ಮೆರವಣಿಗೆ
1968ರ ವರೆಗೂ ಪರ್ಯಾಯ ಮೆರವಣಿಗೆ ಗ್ಯಾಸ್‌ ಲೈಟ್‌ನಲ್ಲಿ ನಡೆಯುತ್ತಿತ್ತು, ಟ್ಯಾಬ್ಲೋ ಕಲ್ಪನೆಗಳಿರಲಿಲ್ಲ. ಹೆಚ್ಚಾ ಕಡಿಮೆ ಕತ್ತಲಿನಲ್ಲಿ ಮೆರವಣಿಗೆ ಸಾಗಿಬರುತ್ತಿತ್ತು. ಪರ್ಯಾಯ ದರ್ಬಾರ್‌ ನೋಡಲು ಹೆಚ್ಚಿನ ಬೇಡಿಕೆ ಇತ್ತೇ ವಿನಾ ಮೆರವಣಿಗೆಗೆ ಅಷ್ಟೊಂದು ಜನರು ಇರಲಿಲ್ಲ ಅಥವಾ ಮೆರವಣಿಗೆ ಆರಂಭದಲ್ಲಿ ನೋಡಿ ಓಡೋಡಿ ದರ್ಬಾರ್‌ ಸಭೆಗೆ ಬರುತ್ತಿದ್ದುದು ಈಗಲೂ ನಡೆಯುತ್ತಿದೆ.

Advertisement

ಲಾರಿ ಮೇಲೆ ವೇಷ
ಮಣಿಪಾಲದ ಹೆರಿಟೇಜ್‌ ವಿಲೇಜ್‌ ರೂವಾರಿ ವಿಜಯನಾಥ ಶೆಣೈಯವರ ಮುತುವರ್ಜಿಯಿಂದ 1968ರ ಪೇಜಾವರ ಶ್ರೀಗಳ ಎರಡನೆಯ ಪರ್ಯಾಯದಲ್ಲಿ ಟ್ಯಾಬ್ಲೋ ಕಲ್ಪನೆ ಮೂರ್ತರೂಪ ಪಡೆಯಿತು. ಟ್ಯಾಬ್ಲೋಗಳೆಂದರೆ ಲಾರಿಯ ಮೇಲೆ ವೇಷಧಾರಿಗಳು ನಿಲ್ಲುವುದು ಮತ್ತು ಅದಕ್ಕೆ ಜನರೇಟರ್‌ ಮೂಲಕ ಟ್ಯೂಬ್‌ ಲೈಟ್‌ ವ್ಯವಸ್ಥೆ ಮಾಡುವುದಷ್ಟೆ ಆಗಿತ್ತು.

ಆಗ ರಥಬೀದಿಯಲ್ಲಿದ್ದ ರಮಾನಾಥ ಕುಡ್ವ ಮತ್ತು ದೇವರಾಜರ ತಂದೆ ಅಪ್ಪುರಾಯರು ಗ್ಯಾಸ್‌ಲೈಟ್‌ ಪೂರೈಕೆದಾರರಾಗಿದ್ದರು. ಒಂದೊಂದು ಪರ್ಯಾಯಕ್ಕೆ ಒಬ್ಬೊಬ್ಬರು ಗ್ಯಾಸ್‌ಲೈಟ್‌ ಪೂರೈಸುತ್ತಿದ್ದರು.

ಈಗ ಎಲ್ಲೆಂದರಲ್ಲಿ ವಿದ್ಯುದ್ದೀಪಗಳ ಅಲಂಕಾರ, ಪರ್ಯಾಯ ಮೆರವಣಿಗೆಗೆ ನಾನಾ ವಿಧ ಟ್ಯಾಬ್ಲೋಗಳು, ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಜ. 17ರ ರಾತ್ರಿಯೂ ಭೋಜನದ ವ್ಯವಸ್ಥೆ, ದರ್ಬಾರ್‌ ಸಭೆಗೆ ಮಂತ್ರಿಗಳು, ಗಣ್ಯರ ಭಾಗವಹಿಸುವಿಕೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next