Advertisement

ಮಠದ ದಿವಾನ್‌ಗಿರಿಗೆ ಛಾಪು ಮೂಡಿಸಿದ್ದ ಅಣ್ಣಾಜಿ ಬಲ್ಲಾಳ್‌

11:20 PM Jan 16, 2020 | Sriram |

ಉಡುಪಿ: ಉಡುಪಿಯ ಅದಮಾರು ಮಠದ ಒಳಗೆ ಪ್ರವೇಶಿಸುತ್ತಿದ್ದಂತೆ ಏನೋ ಒಂದು “ವ್ಯವಸ್ಥಿತ’ ವಿಶಾಲ ಪರಿಕಲ್ಪನೆ ಮೂಡುತ್ತದೆ. ಇದರ ಹಿಂದಿನವರು ಅದಮಾರು ಮಠದ ಹಿಂದಿನ ಗುರುಗಳಾದ ಶ್ರೀವಿಬುಧೇಶತೀರ್ಥರು ಮತ್ತು ಅವರ ಕಲ್ಪನೆಯನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿದವರು ದಿವಾನರಾಗಿದ್ದ ಅಣ್ಣಾಜಿ ಬಲ್ಲಾಳರು.

Advertisement

ಅಣ್ಣಾಜಿ ಬಲ್ಲಾಳರು ಬಂದರೆಂದರೆ ಏನೋ ಒಂದು ಗೌರವ ಮೂಡುತ್ತಿತ್ತು. ಅವರು ಅದಮಾರು ಮಠಕ್ಕೆ ದಿವಾನರಾಗಿದ್ದರೂ ಅಷ್ಟಮಠಗಳಿಗೂ ಮಾರ್ಗದರ್ಶಕರಾಗಿದ್ದರು.

ಆಗ ಸಾಕಷ್ಟು ಭೂಮಿಗಳಿದ್ದು ಅಕೌಂಟ್ಸ್‌, ದಾಖಲೆ ನಿರ್ವಹಣೆಗಳೆಲ್ಲವನ್ನೂ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದರು. ಅದಮಾರು ಮಠದ ವಿಶಾಲ ಕಾರ್ಯಾಲಯ ಇವುಗಳನ್ನು ಸಾರಿ ಹೇಳುತ್ತದೆ.

1947ರಿಂದ ಅದಮಾರು ಮಠದ ಮಣಿಪುರ ಶಾಖೆಯ ಮುಖ್ಯಸ್ಥರಾಗಿದ್ದ ಬಲ್ಲಾಳರು 1960ರ ಅನಂತರ ಅದಮಾರು ಮಠದ ದಿವಾನರಾಗಿ 1990ರ ದಶಕದ ಆರಂಭದವರೆಗೂ ಈ ಜವಾಬ್ದಾರಿಯನ್ನು ಹೊತ್ತಿದ್ದರು.

ಬೈಸಿಕಲ್‌, ಆಟೋದಲ್ಲಿ ಬರುತ್ತಿದ್ದ ಬಲ್ಲಾಳ್‌
1972ರ ವರೆಗೂ ಅವರು ಅಂಬಲಪಾಡಿಯಿಂದ ಉಡುಪಿ ರಥಬೀದಿಗೆ ಬೈಸಿಕಲ್‌ನಲ್ಲಿ ಓಡಾಡುತ್ತಿದ್ದರು. 1972ರಲ್ಲಿ ಅದಮಾರು ಮಠದ ಶ್ರೀವಿಬುಧೇಶತೀರ್ಥರು ಪರ್ಯಾಯ ಪೂಜೆಗೆ ಕುಳಿತಾಗ ಕಾರನ್ನು ಚಲಾಯಿಸದೆ ಇದ್ದರೆ ಹಾಳಾಗುತ್ತದೆ ಎಂಬ ಕಾರಣಕ್ಕೆ ತಮ್ಮ ಕಾರಿನಲ್ಲಿ ಬಂದು ಹೋಗಲು ಬಲ್ಲಾಳರಿಗೆ ತಿಳಿಸಿದರು. ಬಳಿಕ ಆಟೋ ರಿಕ್ಷಾದಲ್ಲಿ ರಥಬೀದಿಗೆ ಬಂದು ಹೋಗುತ್ತಿದ್ದರು. 2000ರ ಅನಂತರವಷ್ಟೇ ಅವರು ಬೇರೆಯವರ ಒತ್ತಾಯಕ್ಕೆ ದೇವಸ್ಥಾನದ ಹೆಸರಿನಲ್ಲಿ ಕಾರನ್ನು ಖರೀದಿಸಿದರು. 1994ರ ವರೆಗೆ ಅವರ ಮನೆಗೆ ದೂರವಾಣಿ ಸಂಪರ್ಕವೂ ಇದ್ದಿರಲಿಲ್ಲ. ಆಗ ಮನೆ ದುರಸ್ತಿ ಮಾಡಿದಾಗ ಮಗ ಡಾ|ವಿಜಯ ಬಲ್ಲಾಳ್‌ ದೂರವಾಣಿ ಸಂಪರ್ಕ ಕಲ್ಪಿಸಿದರು.

Advertisement

ಬಲ್ಲಾಳರ ವರ್ಚಸ್ಸು ಏರಲು ಆಧುನಿಕ ಚಿಂತನೆಯ ಶ್ರೀವಿಬುಧೇಶತೀರ್ಥರು ಒಂದು ಕಾರಣವಾದರೆ, ಸ್ವಯಂ ಸಾಮರ್ಥ್ಯ, ಗಂಭೀರ ಚಿಂತನೆ, ವೈಚಾರಿಕತೆ ಇನ್ನೊಂದು ಕಾರಣ. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿಗಳಾಗಿ 1973ರಿಂದ 2006ರ ವರೆಗೆ ಅಣ್ಣಾಜಿ ಬಲ್ಲಾಳರು ಸಾಕಷ್ಟು ಅಭಿವೃದ್ಧಿಪಡಿಸಿದರು.

ಬಲ್ಲಾಳರು ಅದೆಷ್ಟೋ ಸಭೆಗಳಿಗೆ ಅತಿಥಿಗಳಾಗಿ ಹೋಗುತ್ತಿದ್ದರು. ಸಭೆಗೆ ತಕ್ಕಂತೆ ನಾಲ್ಕೇ ಮಾತುಗಳಲ್ಲಿ ಸರಳವಾಗಿ ಹೇಳುವುದು ಅವರ ವೈಶಿಷ್ಟéವಾಗಿತ್ತು.
ದೇವಸ್ಥಾನದ ಹಣ ಆರ್ಥಿಕವಾಗಿ ಹಿಂದುಳಿದ ದೇವಸ್ಥಾನಗಳಿಗೆ ನೆರವಾಗಬೇಕೆಂಬ ಪರಿಕಲ್ಪನೆ ಅವರದ್ದಾಗಿತ್ತು. 1980ರ ಮೊದಲು ಇದಕ್ಕಾಗಿ ಸರಕಾರಕ್ಕೆ ಬಲ್ಲಾಳರು ಪತ್ರ ಬರೆದಾಗ ಆಯುಕ್ತರು ಒಪ್ಪಿಗೆ ಸೂಚಿಸಲಿಲ್ಲ. ಮರು ವರ್ಷ ಅಂಬಲಪಾಡಿ ಬಬ್ಬುಸ್ವಾಮಿ ದೇವಸ್ಥಾನಕ್ಕೆ ಧನಸಹಾಯ ಮಾಡಲು ಪತ್ರ ಬರೆದರು. ಇದಕ್ಕೆ ಕಾನೂನಿನಲ್ಲಿ ಇರುವ ಅವಕಾಶವನ್ನೂ ನಮೂದಿಸಿದ್ದರು. ಆಯುಕ್ತರು ಒಪ್ಪಿಗೆ ನೀಡಿದರು. ಬಳಿಕ ಇತರ ದೇವಸ್ಥಾನ, ಸಂಘಸಂಸ್ಥೆಗಳಿಗೂ ಅವಕಾಶ ಸಿಕ್ಕಿತು. ಕ್ರಮೇಣ ಶಾಲೆಗಳ ಕಟ್ಟಡ, ಅನಾರೋಗ್ಯ ಪೀಡಿತರಿಗೂ ನೆರವಾಗಲು ಅವಕಾಶ ದೊರಕಿತು.

ಸರಳ ಬದುಕು ಇಷ್ಟವಾಗಿತ್ತು
1972ರ ವರೆಗೆ ಬೈಸಿಕಲ್‌ನಲ್ಲಿ ಮನೆಯಿಂದ ಉಡುಪಿಗೆ ಓಡಾಡುತ್ತಿದ್ದ ನನ್ನ ತಂದೆಯವರು, ಅನಂತರ ಆಟೋರಿಕ್ಷಾದಲ್ಲಿ ಹೋಗಿ ಬರುತ್ತಿದ್ದರು. ಬೇರೆ ದೇವಸ್ಥಾನದವರ ಒತ್ತಾಯದಿಂದಾಗಿ 2000ರ ಬಳಿಕ ಕಾರನ್ನು ತೆಗೆದುಕೊಂಡರು. ಅವರ ಪ್ರಕಾರ ಸರಳವಾಗಿ ಬದುಕಬೇಕು, ಅಂತಸ್ತನ್ನು (ಸ್ಟೇಟಸ್‌) ಹೆಚ್ಚಿಸಿದಂತೆ ಅದು ನಮಗೇ ಭಾರವಾಗುತ್ತದೆ ಎಂಬ ಚಿಂತನೆ ಇತ್ತು. ಶ್ರೀಕೃಷ್ಣಮಠದ ಸಂಪೂರ್ಣ ಚಿನ್ನಾಭರಣಗಳ ದಾಖಲಾತಿಯನ್ನು ಮಾಡಿಸಿದ್ದರು. ಆಡಳಿತಕ್ಕಾಗಿಯಲ್ಲ, ಭಕ್ತರ ಅನುಕೂಲಕ್ಕಾಗಿ ಶ್ರೀಕೃಷ್ಣಮಠಕ್ಕೆ ಒಂದು ಖಾಯಂ ಸಮಿತಿ ಅಗತ್ಯವೆಂದು ಅವರು ಭಾವಿಸಿದ್ದರು.
– ಡಾ|ನಿ.ಬೀ.ವಿಜಯ ಬಲ್ಲಾಳ್‌, ಧರ್ಮದರ್ಶಿಗಳು, ಅಂಬಲಪಾಡಿ ದೇವಸ್ಥಾನ.

ರಾಜಾಂಗಣದಲ್ಲಿನ ಸಮ್ಮಾನವನ್ನು ಒಲ್ಲೆ ಎಂದಿದ್ದರು
1980ರ ದಶಕದಲ್ಲಿ ಮಂಗಳೂರು ವಿ.ವಿ. ಯೋಗ ಪೀಠ ಸ್ಥಾಪನೆಯಾಗಲು ಅಗತ್ಯದ ಹಣಕಾಸು ನೆರವನ್ನು ಒದಗಿಸಿದವರು ಅಣ್ಣಾಜಿ ಬಲ್ಲಾಳರು. ಯೋಗ ಪೀಠದ ಸ್ಥಾಪಕ ಮುಖ್ಯಸ್ಥ ಡಾ|ಕೃಷ್ಣ ಭಟ್ಟರು ಇದನ್ನು ನೆನೆದು 2000ರಲ್ಲಿ ಅಣ್ಣಾಜಿ ಬಲ್ಲಾಳರಿಗೆ ದೊಡ್ಡ ಮಟ್ಟದಲ್ಲಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸಮ್ಮಾನ ಸಮಾರಂಭವನ್ನು ಮಾಡಬೇಕೆಂದು ಹೇಳಿದರು. ಪೇಜಾವರ ಶ್ರೀಗಳಲ್ಲಿ ಹೋಗಿ ಕೇಳಿದಾಗ ಅವರೂ ಸಂತೋಷದಿಂದ ಒಪ್ಪಿದರು. ಬಲ್ಲಾಳರನ್ನು ಕೇಳಲು ಹೋದಾಗ “ನಾನು ವೈಯಕ್ತಿಕವಾಗಿ ಧನ ಸಹಾಯ ಕೊಟ್ಟದ್ದಲ್ಲ. ದೇವಸ್ಥಾನದಿಂದ ಕೊಟ್ಟದ್ದು. ನನಗೆ ಸಮ್ಮಾನ ಮಾಡಬೇಕೆಂದು ಹೇಳಿದ್ದಕ್ಕಾಗಿ ಪೇಜಾವರ ಶ್ರೀಗಳಿಗೆ, ನಿಮಗೆ ಧನ್ಯವಾದಗಳು. ನಾನು ಇದುವರೆಗೆ ಸಮ್ಮಾನ ಸ್ವೀಕರಿಸಿಲ್ಲ, ಮುಂದೆಯೂ ಸ್ವೀಕರಿಸುವುದಿಲ್ಲ’ ಎಂದು ನಯವಾಗಿ ತಿರಸ್ಕರಿಸಿದ್ದರು.
– ರತ್ನಕುಮಾರ್‌, ದಸ್ತಾವೇಜು ಬರಹಗಾರರು, ಉಡುಪಿ.

ವಿದ್ಯಾರ್ಥಿಯಾಗಿದ್ದಾಗ ಅಣ್ಣಾಜಿ ದಿವಾನರಾಗಿದ್ದರು
ಅದಮಾರು ಮಠದ ಶ್ರೀವಿಬುಧೇಶತೀರ್ಥರು ಆಧುನಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದೇ ಹೆಚ್ಚು ಪ್ರಸಿದ್ಧವಾಗಿದೆ. ಅವರು 1956-57ರ ಪರ್ಯಾಯದಲ್ಲಿ ಮೂರೂ ವೇದಗಳ ತರಗತಿಗಳನ್ನು ನೂರಾರು ವಿದ್ಯಾರ್ಥಿಗಳಿಗೆ ನಡೆಸಿದ್ದರು. ಅದರಲ್ಲಿ 12 ಮಂದಿಯನ್ನು ಆಯ್ದು ಅವರಿಗೆ ಮಣಿಪುರ ಶಾಖಾ ಮಠದಲ್ಲಿ, ಅನಂತರ ಅದಮಾರು ಮೂಲಮಠದಲ್ಲಿ ಶ್ರೀವಿಬುಧಪ್ರಿಯ ವಿದ್ಯಾಪೀಠವನ್ನು ಸ್ಥಾಪಿಸಿ ಉನ್ನತ ತರಗತಿಗಳನ್ನು ನಡೆಸಿದರು. ಹೆಸರಾಂತ ವಿದ್ವಾಂಸರಾದ ಲಕ್ಷ್ಮೀನಾರಾಯಣ ಶರ್ಮ, ಮಧ್ವರಮಣ ಆಚಾರ್ಯ, ಸಾಂತೂರು ಪದ್ಮನಾಭ ತಂತ್ರಿ ಮೊದಲಾದವರು ಆಗ ವಿದ್ಯಾರ್ಥಿಗಳಾಗಿದ್ದರು. ನಾನೂ ಅದೇ ತರಗತಿಯ ವಿದ್ಯಾರ್ಥಿಯಾಗಿದ್ದೆ. ಆಗ ದಿವಾನರಾಗಿ ಆಡಳಿತವನ್ನು ನೋಡುತ್ತಿದ್ದುದು ಅಣ್ಣಾಜಿ ಬಲ್ಲಾಳ್‌.
– ಪ್ರೊ| ಶ್ರೀನಿವಾಸ ಪುರಾಣಿಕ್‌,
ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ,
ಉಡುಪಿ ಎಂಜಿಎಂ ಕಾಲೇಜು.

Advertisement

Udayavani is now on Telegram. Click here to join our channel and stay updated with the latest news.

Next