Advertisement

ಸದಾ ಜಾಗೃತವಿರಲಿ ಸತ್‌ಚಿಂತನೆ : ಶ್ರೀ ಈಶಪ್ರಿಯತೀರ್ಥರು

10:08 AM Jan 20, 2020 | Sriram |

ಉಡುಪಿ: ಉತ್ತಮ ಕೆಲಸ ವಾಗಬೇಕಾದರೆ, ಸಮಾಜ ಸುಭಿಕ್ಷೆ ಯಾಗಬೇಕಾದರೆ ಪ್ರತಿಯೊಬ್ಬರಲ್ಲೂ ಸತ್‌ ಚಿಂತನೆ ಸದಾ ಜಾಗೃತಗೊಂಡಿರಬೇಕು ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದರು.

Advertisement

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಪರ್ಯಾಯ ದರ್ಬಾರ್‌ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಶ್ರೀಕೃಷ್ಣನ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂದರು.

ಶ್ರೀಕೃಷ್ಣ ಒಬ್ಬ ಉತ್ತಮ ರಾಜಕೀಯ ನಿಪುಣ, ಶೋಷಿತರನ್ನು ಉದ್ಧರಿಸಿದವ, ಅವನ ಕೆಲಸಗಳಲ್ಲಿ ಪೂರ್ಣತೆಯನ್ನು ಕಾಣಲು ಸಾಧ್ಯ. ಹೀಗೆ ಆತನನ್ನು ಆರಾಧಿಸಿದಾಗ ನಾವೂ ಎತ್ತರಕ್ಕೆ ಏರಲು ಸಾಧ್ಯ ಎಂದರು.

ಈಗ ಕಾಣುತ್ತಿರುವ ಎಲ್ಲ ಸಮಸ್ಯೆ ಗಳಿಗೂ ಪರಿಹಾರರೂಪವಾಗಿ ಶಾಸ್ತ್ರ, ಪುರಾಣಗಳಲ್ಲಿ ದೃಷ್ಟಾಂತಗಳು ಸಿಗುತ್ತವೆ. ಕೆಲವೊಮ್ಮೆ ಕೆಲವು ಪಾತ್ರ ಗಳು ನಮಗೆ ಹತ್ತಿರವಾದಂತೆ ಕಂಡು ಬರುತ್ತವೆ ಎಂದರು.

ಉಡುಪಿಯ ಪರ್ಯಾಯ ನಾಡಿನ ಉತ್ಸವ ಆಗುತ್ತಿದೆ. ಶ್ರೀಕೃಷ್ಣ ಸೇವಾ ಬಳಗ, ಜಿಲ್ಲಾಡಳಿತ, ವಿವಿಧ ಇಲಾಖೆಗಳು ಕೈಜೋಡಿಸಿದ್ದರಿಂದ ಯಶಸ್ಸನ್ನು ಕಂಡಿದೆ ಎಂದರು.
ಪ್ರಾಚೀನ ಮತ್ತು ಅರ್ವಾಚೀನ ವಿದ್ಯೆಗಳು ಎರಡೂ ಬೇಕು. ಇದು ಚೈತನ್ಯ ಮತ್ತು ಶರೀರದಂತೆ. ಒಂದಿಲ್ಲದಿದ್ದರೆ ಇನ್ನೊಂದಕ್ಕೆ ಬೆಲೆ ಇರುವುದಿಲ್ಲ. ಶ್ರೀ ಈಶಪ್ರಿಯತೀರ್ಥರಿಗೆ ಎರಡೂ ವಿದ್ಯೆಗಳಿರುವುದರಿಂದ ಅವರ ಪರ್ಯಾಯ ಅವಧಿ ಯಶಸ್ಸನ್ನು ಕಾಣುತ್ತದೆ. ನಾವು ಹಿರಿಯರು ಕೊಟ್ಟ ಸಂಸ್ಕೃತಿಯನ್ನು ಉಳಿಸಿ ಹಸ್ತಾಂತರಿಸದೆ ಇರುವುದು ದೊಡ್ಡ ಸಮಸ್ಯೆಯಾಗಿದೆ. ಇದರ ಬಗ್ಗೆ ಅಗತ್ಯ ಗಮನ ಹರಿಸಬೇಕು ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ತಿಳಿಸಿದರು.

Advertisement

ಪರ್ಯಾಯ ದರ್ಬಾರ್‌ ಪಾಸ್‌ ನಲ್ಲಿಯೂ ಬೀಜಗಳನ್ನು ಹಾಕಿ ಪರಿಸರಸ್ನೇಹಿತ್ವವನ್ನು ರೂಪಿಸಿದ ಶ್ರೀ ಈಶಪ್ರಿಯರಲ್ಲಿ ಹಲವು ವಿಶಿಷ್ಟ ಚಿಂತನೆಗಳಿವೆ ಎಂದು ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು ಹೇಳಿದರು.

ಮನುಷ್ಯನಾಗಿ ಹುಟ್ಟಿ ಅತ್ಯುತ್ತಮ ಸಂದೇಶ ಸಾರಲು ಕೃಷ್ಣ ಭೂಮಿಯಲ್ಲಿ ಅವತರಿಸಿದ. ಮಥುರೆಯಲ್ಲಿ ಹುಟ್ಟಿದ ಕೃಷ್ಣ ನಂದಗೋಕುಲದಲ್ಲಿ ಬೆಳೆದ. ಅದು ನಿಧಾನವಾಗಿ ಪಟ್ಟಣವಾಗುತ್ತ ಹೋದಂತೆ ಶುದ್ಧ ಪ್ರಕೃತಿಗಾಗಿ ವೃಂದಾವನಕ್ಕೆ ಹೋದ. ಉಡುಪಿಯಲ್ಲಿಯೇ ಇಂದ್ರಾಳಿ ನದಿ ಕಲುಷಿತಗೊಂಡಿದೆ. ಕಾಳೀಯ ಮರ್ದನ ಕೃಷ್ಣನ ಆರಾಧಕರಾದ ಶ್ರೀ ಈಶಪ್ರಿಯತೀರ್ಥರಿಂದ ಸ್ವತ್ಛ ಪ್ರಕೃತಿಯ ಪರ್ಯಾಯ ನಡೆಯುವಂತಾ ಗುತ್ತದೆ ಎಂದು ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥರು ಹಾರೈಸಿದರು.

ಮೈಸೂರಿನ ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಶುಭ ಕೋರಿದರು. ತಿರುಪತಿ, ಶ್ರೀರಂಗ, ಭದ್ರಾಚಲ ದೇಗುಲಗಳಿಂದ ಪ್ರಸಾದಗಳನ್ನು ಪರ್ಯಾಯ ಶ್ರೀಗಳಿಗೆ ನೀಡಲಾಯಿತು. ಓಂಪ್ರಕಾಶ್‌ ಭಟ್‌ ಅವರು ಶ್ರೀ ವಿಶ್ವಪ್ರಿಯತೀರ್ಥರ ಉಪನ್ಯಾಸಗಳಿಂದ ಸಂಗ್ರಹಿಸಿದ ಪುಸ್ತಕ ವನ್ನು ಬಿಡುಗಡೆಗೊಳಿ ಸಲಾಯಿತು.

ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ, ಶಾಸಕ ರಘುಪತಿ ಭಟ್‌ ಸ್ವಾಗತಿಸಿ ಅಧ್ಯಕ್ಷ ಪ್ರೊ|ಎಂ.ಬಿ. ಪುರಾಣಿಕ್‌ ವಂದಿಸಿದರು. ಶ್ರೀನಿವಾಸ ಪೆಜತ್ತಾಯ, ವಿಜಯೀಂದ್ರ ಆಚಾರ್ಯ, ಕೃಷ್ಣರಾಜ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

“ಕಾಳೀಯ ಮರ್ದನ ಸಮರ್ಥ ಆಡಳಿತದ ಲಕ್ಷಣ’
ಅದಮಾರು ಕಿರಿಯ ಶ್ರೀಗಳಿಗೆ ತಮ್ಮ ಗುರುಗಳ ಆಶಯದಂತೆ ಪರ್ಯಾಯ ಪೂಜಾವಕಾಶ ದೊರಕಿದೆ. ಇದನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಅವರಿಗೆ ಇದೆ ಎಂದು ನಿರ್ಗಮನ ಪೀಠಾಧೀಶ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು. ಕಾಳಿಯಮರ್ದನ ಕೃಷ್ಣನ ಸಂಕೇತವೇ ಸಮರ್ಥ ಆಡಳಿತದ ಲಕ್ಷಣ. ಆದ್ದರಿಂದ ಪರ್ಯಾಯದ ಯಶಸ್ಸು ಸಾಧ್ಯ ಎಂದು ಶ್ರೀ ವಿದ್ಯಾರಾಜೇಶ್ವರತೀರ್ಥರು ವಿಶ್ವಾಸ ವ್ಯಕ್ತಪಡಿಸಿದರು.

ಗಣ್ಯರ ಉಪಸ್ಥಿತಿ
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಚ್ಚ ನ್ಯಾಯಾಲಯದ ನ್ಯಾ| ದಿನೇಶಕುಮಾರ್‌, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಭೀಮಾ ಜುವೆಲರ್ ಆಡಳಿತ ಪಾಲುದಾರ ವಿಷ್ಣು ಶರಣ್‌ ಭಟ್‌, ಬ್ಯಾಂಕ್‌ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಮುರಳಿ ರಾಮಸ್ವಾಮಿ, ಕರ್ಣಾಟಕ ಬ್ಯಾಂಕ್‌ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌., ಸಿಂಡಿಕೇಟ್‌ ಬ್ಯಾಂಕ್‌ ವಲಯ ಪ್ರಬಂಧಕ ಭಾಸ್ಕರ ಹಂದೆ, ಎಸ್‌ಬಿಐ ಬೆಂಗಳೂರು ವೃತ್ತದ ಮುಖ್ಯ ಮಹಾಪ್ರಬಂಧಕ ಅಭಿಜಿತ್‌ ಮುಜುಂದಾರ್‌, ಎಲ್ಲೆ çಸಿ ಹಿರಿಯ ವಿಭಾಗೀಯ ವ್ಯವಸ್ಥಾಪಕ ಅನಂತಪದ್ಮನಾಭ ಕೆ., ಐಸಿಐಸಿಐ ಬ್ಯಾಂಕ್‌ ಹಿರಿಯ ಅಧಿಕಾರಿ ಗಿರಿರಾಜ ಮಹೇಶ್ವರಿ, ಸಿಂಡಿಕೇಟ್‌ ಬ್ಯಾಂಕ್‌ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಲಕ್ಷ್ಮೀನಾರಾಯಣ್‌, ತಿರುಪತಿ ದೇವಸ್ಥಾನದ ಹಿರಿಯ ಐಎಎಸ್‌ ಅಧಿಕಾರಿ ಬಸಂತಕುಮಾರ್‌, ಮುಖ್ಯಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿ ಡಾ| ವಿಶಾಲ್‌, ಡಾ| ಎಂ.ಎಸ್‌. ಆಳ್ವ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next