ಬೆಂಗಳೂರು: ಈಶಾ ಯೋಗ ಕೇಂದದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಅವಲಗುರ್ಕಿ ಗ್ರಾಮದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಜ.15ರಂದು ಪೂರ್ವನಿಗದಿಯಾದ ಕಾರ್ಯಕ್ರಮಕ್ಕೆ ಹೈಕೋರ್ಟ್ ಅವಕಾಶ ನೀಡಿದೆ.ಆದರೆ ಯಾವುದೇ ಕಾಮಗಾರಿಗಳು ನಡೆಸದಂತೆ ಈ ಹಿಂದೆ ನೀಡಿದ್ದ ಆದೇಶ ಮುಂದುವರಿಯಲಿದೆ ಎಂದೂ ತಿಳಿಸಿದೆ.
ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್. ಕ್ಯಾತಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ| ಪಿ.ಬಿ. ವರಾಲೆ ಮತ್ತು ನ್ಯಾ| ಅಶೋಕ್ ಎಸ್. ಕಿಣಗಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಈಶಾ ಪ್ರತಿಷ್ಠಾನದ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದಿಸಿ, ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಉಪರಾಷ್ಟ್ರಪತಿ ಸಹಿತ ಹಲವು ಗಣ್ಯರು ಆಗಮಿಸುತ್ತಿದ್ದಾರೆ. ಅಷ್ಟಕ್ಕೂ ಪ್ರಕರಣ ಸಂಬಂಧ ಅರ್ಜಿದಾರರು ನೈಜ ವಿಚಾರಗಳನ್ನು ಮರೆಮಾಚಿದ್ದಾರೆ. ಆದಿಯೋಗಿ ಮೂರ್ತಿಯು ನಂದಿ ಬೆಟ್ಟದಿಂದ 30 ಕಿ.ಮೀ.ದೂರದಲ್ಲಿದೆ. ಜ.15ರಂದು ಕಾರ್ಯಕ್ರಮ ನಡೆಸಲು ಈ ಹಿಂದೆಯೇ ನಿರ್ಣಯಿಸಲಾಗಿದೆ. ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಭಾಗವಹಿಸಲು ಗಣ್ಯರ ಅನುಮತಿ ಮತ್ತು ಒಪ್ಪಿಗೆ ಪಡೆಯಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.