ಎಚ್.ಡಿ.ಕೋಟೆ: ಸ್ವಾತಂತ್ರ ಪೂರ್ವದಲ್ಲಿಯೇ ಆದಿವಾಸಿಗರನ್ನು ಸಂಘಟಿಸಿ ನಮ್ಮನ್ನು ಹಾಳುತ್ತಿದ್ದ ಬ್ರಿಟಿಷರ ವಿರುದ್ಧ ಹೋರಾಡಿ ಭಾರತದಿಂದ ಅವರನ್ನು ಹೊರ ಓಡಿಸಿದ ಧೀಮಂತ ನಾಯಕ ಬಿರ್ಸಾಮುಂಡ ಅವರ ತತ್ವ ಆದರ್ಶಗಳನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ 23ನೇ ವಿಶ್ವ ಅದಿವಾಸಿ ದಿನಾಚರಣೆ ಮತ್ತು ಸಂಘದ ವಾರ್ಷಿಕ ಮಹಾಸಭೆ ಮಾತನಾಡಿ, ದೇಶದ ಎಲ್ಲ ವರ್ಗದ ಜನರಿಗೂ ಅಧಿಕಾರ ಬೇಕು, ಇಂದು ಆದಿವಾಸಿಗರು ರಾಜಕೀಯ ಸ್ಥಾನಮಾನ ಅಧಿಕಾರ ಕೇಳುತ್ತಿದ್ದು ಮಾನ್ಯ ಮಾಡಬೇಕು ಎಂದರು.
ಕ್ರಮ ಕೈಕೊಳ್ಳದ ಸರ್ಕಾರಗಳು: ಮಾಜಿ ಸಿಎಂ ಎಸ್.ಎಂ.ಕೃಷ್ಣರ ಸರ್ಕಾರದಲ್ಲಿ ನಾನು ಎಂ.ಶಿವಣ್ಣ ಮಂತ್ರಿಗಳಾಗಿದ್ದಾಗ ಅವರನ್ನೇ ಕಾಡಿಗೆ ಕರೆತಂದು ಕ್ಯಾಬಿನೇಟ್ ಮಾಡಿದ್ದೇವು, ಅದರ ಪರಿಣಾಮ ಆದಿವಾಸಿಗರು ಅರಣ್ಯದಲ್ಲಿ ಕಿರು ಉತ್ಪನ್ನ ಸಂಗ್ರಹಣೆಗೆ ಅಧಿಕಾರ ನೀಡಲಾಗಿತ್ತು. ಕಾಡಿನಲ್ಲಿ ಮದ್ಯದಂಗಡಿ ಸಂಪೂರ್ಣ ನಿಷೇಧ ಮಾಡಲಾಗಿತ್ತು, ನ್ಯಾಯಬೆಲೆ ಅಂಗಡಿಯನ್ನು ಅವರಿಗೆ ನೀಡಲು ತೀರ್ಮಾನ ಮಾಡಲಾಗಿತ್ತು, ಆದರೆ ನಂತರ ಬಂದ ಯಾವ ಸರ್ಕಾರಗಳು ಇವುಗಳನ್ನು ಕಾರ್ಯರೂಪಕ್ಕೆ ತರಲಿಲ್ಲ ಎಂದು ತಿಳಿಸಿದರು.
ಆದಿವಾಸಿಗಳ ಪಾಲೇನು: ಆದರೆ ಈಗಿನ ಸರ್ಕಾರದ ಸಮಾಜ ಕಲ್ಯಾಣ ಸಚಿವ ಆಂಜನೇಯ ಮತ್ತು ಸಿಎಂ ಬೂಟಾಟಿಕೆಯ ಮಾತುಗಳನ್ನು ಆಡುತ್ತಿದ್ದು, 94 ಸಾವಿರ ಕೋಟಿ ರೂ ಎಸ್ಸಿ ಮತ್ತು ಎಸ್ಟಿ ಸಮುದಾಯದವರಿಗೆ ಖರ್ಚುಮಾಡಿದ್ದೇವೆಂದು ಹೇಳುತ್ತಿದ್ದು, ಎಲ್ಲಿ ಹೇಗೆ ಖರ್ಚು ಮಾಡಿದ್ದಾರೆ, ಅದರಲ್ಲಿ ಆದಿವಾಸಿಗಳ ಪಾಲೇನು, ಆದಿವಾಸಿಗಳಿಗೆ ಒಂದು ಮನೆ, ಹಕ್ಕು ಪತ್ರ ನೀಡಿಲ್ಲ ಎಂದು ಟೀಕಿಸಿದರು.
ಕರ್ನಾಟಕ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆಯ ಉಪಾಧ್ಯಕ ಜಡೇಸ್ವಾಮಿ, ಶಿವರಾಜು, ರಾಮಣ್ಣ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಸಂಘಟನಾ ಕಾರ್ಯದರ್ಶಿ ಸುಲೋಚನಾ, ರಾಜ್ಯ ನಿರ್ದೇಶಕ ಬಿ.ಕೆ.ಮೋಹನ್, ಹುಣಸೂರು ತಾಲೂಕು ಅಧ್ಯಕ್ಷ ಶಿವಣ್ಣ, ಕೊಡಗು ಜಿಲ್ಲಾಧ್ಯಕ್ಷ ಪ್ರಕಾಶ್, ಖಜಾಂಚಿ ಸೋಮಶೇಖರ್, ಬಸವಣ್ಣ, ಪಿರಿಯಾಪಟ್ಟಣ ಸಮಾಜ ಸೇವಕ ಎಸ್.ಮಂಜುನಾಥ್, ಮಾನವ ಹಕ್ಕು ಹೋರಾಟಗಾರ ಸುರೇಶ್, ಪ್ರಸನ್ನ, ಕೊಡಗು ಲ್ಯಾಂಪ್ಸ್ ಅಧ್ಯಕ್ಷ ರಾಜಾರಾಂ, ಸೇರಿದಂತೆ 700ಕ್ಕೂ ಹೆಚ್ಚು ಆದಿವಾಸಿಗರು ಹಾಜರಿದ್ದರು.
ಎಲ್ಲ ಪಕ್ಷಗಳು ಆದಿವಾಸಿಗರಿಗೆ ರಾಜಕೀಯ ಸ್ಥಾನಮಾನ ಕೊಡಬೇಕು, ಆದಿವಾಸಿ ಯುವಕರಲ್ಲಿ ಇಂದು ವಿದ್ಯಾವಂತರಿದ್ದೀರಿ ಡಾಕ್ಟರೇಟ್ ಪದವಿ ಪಡೆದಿದ್ದೀರಿ ಬನ್ನಿ ಚಿಂತಿಸಿ ಎಲ್ಲ ಸಂಘಟನೆಗಳು ಒಂದಾಗಿ ಹೋರಾಟ ಮಾಡಿದರೆ ಮಾತ್ರ ನಿಮ್ಮ ಕೂಗು ಸರ್ಕಾರಕ್ಕೆ ಕೇಳುತ್ತದೆ.
-ಎಚ್.ವಿಶ್ವನಾಥ್, ಮಾಜಿ ಸಂಸದ.