Advertisement

ಮಣಿಪಾಲದಲ್ಲಿ ವಾಸವಾಗಿದ್ದ ಆರೋಪಿ ಆದಿತ್ಯರಾವ್‌

06:52 AM Jan 23, 2020 | mahesh |

ಉಡುಪಿ: ಆದಿತ್ಯ ರಾವ್‌ ಕುಟುಂಬ 20-25ವರ್ಷಗಳಿಂದ ಮಣಿಪಾಲದ ಮಣ್ಣಪಳ್ಳ ಬಳಿಯ ಹುಡ್ಕೋ ಕಾಲನಿಯ ಎಚ್‌ಐಜಿ ಕಾಲನಿಯಲ್ಲಿ ವಾಸಿಸುತ್ತಿತ್ತು ಎಂಬ ಅಚ್ಚರಿಯ ಮಾಹಿತಿ ಲಭಿಸಿದೆ.

Advertisement

10 ಸೆಂಟ್ಸ್‌ ವ್ಯಾಪ್ತಿಯಲ್ಲಿರುವ ಭಾರೀ ಮೌಲ್ಯದ ಮನೆ ಈಗ ಪಾಳುಬಿದ್ದಿದೆ. ಈ ಹಿಂದೆ ಮನೆಯಲ್ಲಿ ತಂದೆ-ತಾಯಿ, ತಮ್ಮನ ಜತೆ ಆದಿತ್ಯ ರಾವ್‌ ವಾಸಿಸಿದ್ದ. ಕ್ಯಾನ್ಸರ್‌ನಿಂದಾಗಿ ವರ್ಷದ ಹಿಂದೆ ತಾಯಿ ನಿಧನ ಹೊಂದಿದ ಬಳಿಕ ಕುಟುಂಬದವರು ಈ ಮನೆಯಲ್ಲಿ ವಾಸಿಸುತ್ತಿರಲಿಲ್ಲ. ತಂದೆ-ತಾಯಿ ಹಾಗೂ ತಮ್ಮ ಸ್ಥಳೀಯರೊಂದಿಗೆ ಬಹಳ ಅನ್ಯೋನ್ಯವಾಗಿದ್ದರು. ಆದಿತ್ಯ ರಾವ್‌ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಆತನನ್ನು ನೋಡಿದರೆ ಅದೇನೂ ಭಯವಾಗುತ್ತಿತ್ತು ಎನ್ನುತ್ತಾರೆ ಸ್ಥಳೀಯ ಅಪಾರ್ಟ್‌ಮೆಂಟ್‌ ನಿವಾಸಿಗಳು

ಮಟಮಟ ಮಧ್ಯಾಹ್ನ ವ್ಯಾಯಾಮ!
ಕೆಲಸವಿಲ್ಲದೆ ಅಲೆದಾಡುತ್ತಿದ್ದ ಆದಿತ್ಯ ರಾವ್‌ ಕೆಲವೊಮ್ಮೆ ಮಾತ್ರ ಮನೆಯಲ್ಲಿ ಕಾಣಸಿಗುತ್ತಿದ್ದ. ಮನೆಯ ಒಳಗೇ ಇರುತ್ತಿದ್ದ. ಮಟಮಟ ಮಧ್ಯಾಹ್ನ ಟೆರೇಸ್‌ ಮೇಲೆ ಬಂದು ವ್ಯಾಯಾಮ ಮಾಡುತ್ತಿದ್ದ. ಆ ಸಂದರ್ಭದಲ್ಲೂ ಯಾರೊಡನೆಯೂ ಮಾತನಾಡುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯರು. ಇದಕ್ಕೆ ಸಾಕ್ಷಿ ಎಂಬಂತೆ ಮನೆಯ ಒಳಭಾಗದಲ್ಲಿ ಆತ ವ್ಯಾಯಾಮ ಮಾಡುತ್ತಿದ್ದ ಉಪಕರಣಗಳಿದ್ದವು.

ಜ. 12ರಂದು ಬಂದು ಹೋಗಿದ್ದರು
ಆದಿತ್ಯರಾವ್‌ ತಂದೆ ಬಿ. ಕೃಷ್ಣಮೂರ್ತಿ ಹಾಗೂ ತಮ್ಮ ಅಕ್ಷತ್‌ ರಾವ್‌ ಅವರು ಜ. 12ರಂದು ಮನೆಗೆ ಬಂದು ಹೋಗಿದ್ದರು. ಅನಂತರ ಟೆಂಪೋದ ಮೂಲಕ ಮನೆಯ ಸಾಮಗ್ರಿಗಳನ್ನು ಕೊಂಡುಹೋಗಿದ್ದರು. ಮನೆಯ ಹಿಂಭಾಗದಲ್ಲಿ ಸುಮಾರು 10 ಕೆ.ಜಿ.ಯಷ್ಟು ಬೆಳ್ತಿಗೆ ಅಕ್ಕಿ ಹಾಗೂ ಒಣಖರ್ಜೂರ, ಕಡಲೆಕಾಯಿಗಳನ್ನು ಚೆಲ್ಲಲಾಗಿತ್ತು. ಮನೆ ಖಾಲಿ ಮಾಡುವ ಸಲುವಾಗಿ ಈ ರೀತಿ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಮನೆ ಸುತ್ತಮುತ್ತ ವಿವಿಧ ಗಿಡಗಳು
ಆದಿತ್ಯ ಅವರ ಹೆತ್ತವರಿಗೆ ಮರಗಿಡಗಳೆಂದರೆ ಅಚ್ಚುಮೆಚ್ಚು. ಹಲವು ಬಗೆಯ ಹಣ್ಣಿನ ಗಿಡಗಳು, ಔಷಧೀಯ ಸಸ್ಯಗಳನ್ನು ನೆಡಲಾಗಿದೆ. ಮನೆಯ ಹೊರಭಾಗದಲ್ಲೂ ಹಲವು ಗಿಡಗಳಿದ್ದವು. ಬಿ. ಕೃಷ್ಣಮೂರ್ತಿ ರಾವ್‌ ಅವರು ಬ್ಯಾಂಕೊಂದರಲ್ಲಿ ಸೇವೆ ಸಲ್ಲಿಸಿದ್ದರು.

Advertisement

ಕಾರಿನಲ್ಲಿ ಬಂದವರ್ಯಾರು?
ಕಾಲನಿಯ ಕೊನೆಗೆ ಬಿ.ಬಿ. ರಾವ್‌ ಅವರ ಮನೆಯಿದ್ದು, ಅದೂ ಕೂಡ ಪಾಳುಬಿದ್ದಂತಿದೆ. ಆದಿತ್ಯ ರಾವ್‌ ತಂದೆಯ ಹೆಸರು ಬಿ. ಕೃಷ್ಣಮೂರ್ತಿ ರಾವ್‌. ಈ ಹೆಸರನ್ನು ಹುಡುಕಿ ಕೆಲವರು ಆ ಮನೆಗೂ ಹೋಗಿದ್ದರು. ವರ್ಷದ ಹಿಂದೆ ಒಂದು ಬಾರಿ ದಾರಿ ತಪ್ಪಿ ಕಾರಿನಲ್ಲಿ ಆಗಮಿಸಿದ್ದ ನಾಲ್ವರ ತಂಡ ಆದಿತ್ಯನ ಮನೆ ಎಲ್ಲಿ ಎಂದು ವಿಚಾರಿಸಿತ್ತು. ಅವರು ಗೆಳೆಯರೋ ಅಥವಾ ಹೊರಗಿನವರೋ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನುತ್ತಾರೆ ಬಿ.ಬಿ. ರಾವ್‌ ಮನೆ ಸನಿಹದ ಶ್ರೀನಿವಾಸ.

ಮಣಿಪಾಲದಲ್ಲೇ ತಯಾರಾಗಿತ್ತಾ ಬಾಂಬ್‌?
ಕೃಷ್ಣಮೂರ್ತಿ ಅವರು ಉಪಯೋಗಿಸುತ್ತಿದ್ದ ಟಿವಿಎಸ್‌ ವಿಕ್ಟರ್‌ ಬೈಕ್‌ ನಿಲ್ಲಿಸಲಾಗಿತ್ತು. 2017ರ ನೋಂದಣಿಯ ಈ ಬೈಕ್‌ ಹಲವಾರು ದಿನಗಳಿಂದ ಇಲ್ಲೇ ಇತ್ತು ಎನ್ನಲಾಗುತ್ತಿದೆ. ಮೇಲ್ಛಾವಣಿಯಲ್ಲಿರುವ ಲೈಟ್‌ ಒಂದು ಉರಿಯುತ್ತಿದ್ದು, ಈ ಮನೆಯಲ್ಲೇ ಆದಿತ್ಯ ಬಾಂಬ್‌ ತಯಾರಿಸುತ್ತಿದ್ದನಾ? ಈ ಮಾಹಿತಿ ಮನೆಯವರಿಗೆ ತಿಳಿದು ಮನೆ ಖಾಲಿ ಮಾಡುವ ನಿರ್ಧಾರ ಮಾಡಿದರಾ ಎಂಬ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸ್‌ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಸೋಮವಾರ ಸ್ಥಳೀಯರಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

ಆದಿತ್ಯ ಅವರ ತಾಯಿ ನಮ್ಮೊಂದಿಗೆ ಬಹಳ ಆತ್ಮೀಯತೆಯಿಂದ ಇದ್ದರು. ಸಂಜೆಯ ವೇಳೆ ನಮ್ಮ ಮಾತುಕತೆ, ವಿಚಾರವಿನಿಮಯ ನಡೆಯುತ್ತಿತ್ತು. ಅವರ ಮಗನ ವಿಚಾರದಲ್ಲಿ ನಾವು ಯಾವತ್ತು ಕೂಡ ಚರ್ಚಿಸಿದ್ದಿಲ್ಲ. ನಿನ್ನೆಯಷ್ಟೇ ಈ ಪ್ರಕರಣದಲ್ಲಿ ಭಾಗಿರಾಗಿರುವ ವ್ಯಕ್ತಿ ಅವರೆಂದು ತಿಳಿಯಿತು.
– ಪೂರ್ಣಿಮಾ ಭಾರದ್ವಾಜ್‌, ಸ್ಥಳೀಯರು

ಅಂಗಡಿಗೆ ಬರುತ್ತಿದ್ದರು
ತಂದೆ-ತಾಯಿ ಹಾಗೂ ತಮ್ಮ ಉತ್ತಮ ರೀತಿಯಲ್ಲಿ ನಮ್ಮೊಂದಿಗೆ ಬೆರೆಯುತ್ತಿದ್ದರು. ಮನೆಗೆ ಬೇಕಿರುವ ಸಾಮಗ್ರಿಗಳನ್ನು ನಮ್ಮ ಅಂಗಡಿಯಿಂದಲೇ ಕೊಂಡೊಯ್ಯುತ್ತಿದ್ದರು. ಸಂಜೆ ವೇಳೆಗೆ ವಾಕಿಂಗ್‌ ಕೂಡ ಹೋಗುತ್ತಿದ್ದರು. ಆದರೆ ಆದಿತ್ಯನನ್ನು ನಾನು ಈವರೆಗೂ ನೋಡಿದಿಲ್ಲ.
   – ಮೋಹನ್‌ದಾಸ್‌ ಪಾಟ್ಕರ್‌, ಸ್ಥಳೀಯ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next