ಮುಂಬಯಿ: ಶಿವಸೇನಾ ವರಿಷ್ಠ ಉದ್ಭವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಈ ಬಾರಿಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಸ್ಪರ್ಧಾತ್ಮಕ ಚುನಾವಣೆಗೆ ಸ್ಪರ್ಧಿಸುತ್ತಿರುವ ಠಾಕ್ರೆ ಕುಟುಂಬದ ಮೊತ್ತ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಆದಿತ್ಯ ಠಾಕ್ರೆ ಪಾತ್ರರಾಗಲಿದ್ದಾರೆ. ಆದಿತ್ಯ ಠಾಕ್ರೆ ಅವರನ್ನು ಕಣಕ್ಕಿಳಿಸುವ ಕುರಿತಾಗಿ ಆದಿತ್ಯವಾರವಷ್ಟೇ ಶಿವಸೇನಾ ವರಿಷ್ಠರು ನಿರ್ಧಾರವನ್ನು ತೆಗೆದುಕೊಂಡಿದ್ದರು.
ಆದಿತ್ಯ ಠಾಕ್ರೆ ಅವರು ವರ್ಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಈ ಕ್ಷೇತ್ರ ಸದ್ಯಕ್ಕೆ ಶಿವಸೇನೆಯ ಕೈಯಲ್ಲಿದೆ ಮತ್ತು ಸುನಿಲ್ ಶಿಂಧೆ ಅವರು ಈ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಇದಕ್ಕೂ ಮೊದಲು ವರ್ಲಿ ಕ್ಷೇತ್ರವು ಎನ್.ಸಿ.ಪಿ.ಯ ಸಚಿನ್ ಅಹಿರ್ ಅವರು ಪ್ರತಿನಿಧಿಸುತ್ತಿದ್ದರು ಮತ್ತು ಅಹಿರ್ ಅವರು ಎರಡು ತಿಂಗಳ ಹಿಂದೆಯಷ್ಟೇ ಎನ್.ಸಿ.ಪಿ. ತೊರೆದು ಶಿವಸೇನೆಗೆ ಸೇರ್ಪಡೆಗೊಂಡಿದ್ದರು.
ಭಾಳಾ ಠಾಕ್ರೆ ಅವರ ಮೊಮ್ಮಗ ಆದಿತ್ಯ ಠಾಕ್ರೆ ಬಿ.ಎ., ಎಲ್.ಎಲ್.ಬಿ. ಪದವೀಧರರಾಗಿದ್ದಾರೆ. ಉದ್ಭವ್ ಠಾಕ್ರೆ ಅವರ ಪುತ್ರರಾಗಿರುವ ಆದಿತ್ಯ ಅವರು ತೇಜಸ್ ಠಾಕ್ರೆ ಅವರ ಕಿರಿಯ ಸಹೋದರರಾಗಿದ್ದಾರೆ.
ಇದಕ್ಕೂ ಮೊದಲು ಠಾಕ್ರೆ ಕುಟುಂಬದ ದೂರದ ಸಂಬಂಧಿಯೊಬ್ಬರು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದನ್ನು ಹೊರತುಪಡಿಸಿದರೆ ಠಾಕ್ರೆ ಕುಟುಂಬದಿಂದ ನೇರ ಚುನಾವಣೆಗೆ ಸ್ಪರ್ಧಿಸುತ್ತಿರುವ ಮೊದಲ ವ್ಯಕ್ತಿ ಆದಿತ್ಯ ಠಾಕ್ರೆ ಆಗಲಿದ್ದಾರೆ. ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರ ಸಹೋದರ ಸಂಬಂಧಿಯಾಗಿರುವ ಜಿತೇಂದ್ರ ಠಾಕ್ರೆ ಅವರ ಪತ್ನಿ ಶಾಲಿನಿ ಠಾಕ್ರೆ ಅವರು ಎಂ.ಎನ್.ಎಸ್. ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು.
ಉದ್ಭವ್ ಠಾಕ್ರೆ ಅವರ ಪುತ್ರನಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲು ಬಿಜೆಪಿ ಸಿದ್ಧವಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇತ್ತೀಚೆಗಷ್ಟೇ ಸಮಾರಂಭದಲ್ಲಿ ಹೇಳಿಕೆಯೊಂದನ್ನು ನೀಡಿದ್ದರು ಮತ್ತು ಆದಿತ್ಯ ಅವರು ಸರಕಾರದ ಭಾಗವಾಗುವುದನ್ನು ಕಾಣಲು ತಾವು ಇಷ್ಟಪಡುವುದಾಗಿಯೂ ಫಡ್ನವೀಸ್ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
288 ಸಂಖ್ಯಾಬಲದ ಮಹಾರಾಷ್ಟ್ರ ವಿಧಾನಸಭೆಗೆ ಅಕ್ಟೋಬರ್ 21ಕ್ಕೆ ಚುನಾವಣೆ ನಡೆಯಲಿದೆ ಮತ್ತು ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ.