Advertisement
ಗೋಪಾಲಕೃಷ್ಣ ಅಡಿಗರ ನೂರರ ನೆನಪಿನಲ್ಲಿ ಅವರ ಕಾವ್ಯದ ಕುರಿತ ವಿಚಾರಗೋಷ್ಠಿಗಳು ನಾಡಿನಾದ್ಯಂತ ಜರಗುತ್ತಿವೆ.
Related Articles
Advertisement
ಜೊತೆಗೆ ಪ್ರಾಸ, ಅನುಪ್ರಾಸ, ಧ್ವನಿ, ಸಾಮ್ಯ, ಶ್ಲೇಷೆ, ಶಬ್ದಚಿತ್ರ, ವಿಡಂಬನೆ ಮೊದಲಾದವುಗಳನ್ನು ಸೂಕ್ತವೆನಿಸಿದ ಕಡೆಯಲ್ಲೆಲ್ಲ ಬಳಸಿ ನಮ್ಮ ಭಾಷೆಯ ಸಾಧ್ಯತೆಗಳನ್ನು ನಮಗೆ ತೋರಿಸಿಕೊಟ್ಟರು. ಕನ್ನಡಕ್ಕೆ ಸಹಜವೆನ್ನಿಸುವ ಗತಿ, ಲಯ, ಶಬ್ದರೂಪಕ ಮುಂತಾದವುಗಳ ಮೂಲಕ ಅರ್ಥಾನುಭವವೇ ಸ್ವತಃ ಅಭಿನಯಿಸುವಂತೆ ಮಾಡಿದರು. ಇದೆಲ್ಲದರ ಪರಿಣಾಮವಾಗಿ ಅವರ ಕಾವ್ಯ ಹೊಸ ಭಾಷೆಯಲ್ಲಿ, ಅರ್ಥಾನುಸಾರಿಯಾದ ಲಯದಲ್ಲಿ, ನಾಟಕೀಯ ಧಾಟಿಯಲ್ಲಿ, ಪ್ರತಿಮಾಲಂಕಾರದಲ್ಲಿ, ಎಂಥವರನ್ನಾದರೂ ಚುಚ್ಚುವಂಥ ವ್ಯಂಗ್ಯದಲ್ಲಿ, ಅಕರಾಳವಿಕರಾಳವೆನ್ನಿಸುವಂಥ ಪ್ರತಿಮೆ, ವಿವರಗಳಲ್ಲಿ ಅಪೂರ್ವವೆನಿಸಿತು.
ಭಾವದ ಕೂಡೆ ಕಾವ್ಯಅಡಿಗರ ಕಾವ್ಯದಲ್ಲಿ ಭಾವಾಭಿನಯ ಹೇಗಿರುತ್ತದೆ ಎಂಬುದಕ್ಕೆ ದೀಪಾವಳಿ ಎಂಬ ಕವನದ ಈ ಒಂದು ಸಾಲು ಸಾಕು: ಮರವೆಯಲಿ ನೆನಪು ಥಳಥಳಿಸಿ ಗರಗರ ಗೀರಿ ಸರಭರೆನ್ನುತ್ತಲಿದೆ ಸೊಗದ ನೇಗಿಲ ಮೊನೆ. ಇದರಲ್ಲಿ ಶಬ್ದಗಳು ಹೊಮ್ಮಿಸುವ ದನಿಯನ್ನಷ್ಟೇ ಆಲಿಸಿದರೆ ದೀಪಾವಳಿಯ ಮತಾಪು, ಬಾಣ ಬಿರುಸು, ಸುರುಸುರುಬತ್ತಿ, ಭೂಚಕ್ರ ಮೊದಲಾದವುಗಳ ಸದ್ದು ಕೇಳಿಸುತ್ತದೆಯಲ್ಲವೆ? ಮತ್ತೆ ಅವರ ಉಪಯೋಗಿಸಿರುವ ಪ್ರತಿಮೆಗಳು ಕೂಡ ಅನುಕ್ರಮವಾಗಿ, ಸಹಜವಾಗಿ ಬೆಳೆಯುವಂಥವು. ಉದಾಹರಣೆಗೆ, ಈ ಸಾಲುಗಳನ್ನು ನೋಡಿ: ಮೂಡಿದೆ ಗುಲಾಬಿ ದಳದಲಿ ಮುಳ್ಳು; ಸಂಪಿಗೆಯ
ಕಂಪಿನಲಿ ಕಾಳಿYಚ್ಚು ಭುಸುಗುಟ್ಟಿದೆ;
ಮೆತ್ತೆಯಲಿ ಕುಟುಕುತಿದೆ ನೂರು ಚೇಳಿನ ಕೊಂಡಿ;
ಹಾಲು ಹಾಲಾಹಲದ ಗುರಿಮುಟ್ಟಿದೆ.
ಕಾಳನಾಗರ ನೇತ್ರಭೀತ ಪರವಶ ಪಕ್ಷಿ
ಮತ್ತೆ ರಕ್ಕೆಯ ಬಿಚ್ಚಿ ಗರಿಗಟ್ಟಿದೆ. ಇಲ್ಲಿರುವುದು ಒಂದು ಹಾವಿನ ಪ್ರತಿಮೆ. ಇದು ಏಕಾಏಕಿ ಬೆಳೆದದ್ದಲ್ಲ; ಕ್ರಮಕ್ರಮವಾಗಿ ಬೆಳೆದದ್ದು. ಮುಳ್ಳು, ಭುಸುಗುಟ್ಟಿದೆ, ಚೇಳಿನ ಕೊಂಡಿ, ಹಾಲಾಹಲ, ಇತ್ಯಾದಿ ಶಬ್ದಗಳು ಹಾವನ್ನು ಮುನ್ಸೂಚಿಸುವ ಪರಿಕರಗಳಾಗಿ ಕೆಲಸಮಾಡುತ್ತವೆ.
ಅಡಿಗರು ತಮ್ಮ ಕಾವ್ಯದಲ್ಲಿ ಅಲ್ಲಲ್ಲಿ ತಂದಿರುವ ನಾಟಕೀಯ ಅಂಶಗಳು ಕೂಡ ಅವರಿಗೂ ಹಿಂದಿನ ಕಾವ್ಯದಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಒಮ್ಮೊಮ್ಮೆ ಯಕ್ಷಗಾನದ ರಾಕ್ಷಸನ ವಾಗ್ವೆ„ಖರಿಯಂತೆ, ಇನ್ನು ಕೆಲವೊಮ್ಮೆ ವಿಡಂಬನೆಯ ಸಹಜ ದನಿಯಂತೆ ಕೇಳಿಸುವ ಈ ನಾಟಕೀಯ ಗುಣ ಕವನದ ಒಟ್ಟು ಆಶಯಕ್ಕೆ ಎಷ್ಟೆಲ್ಲ ಪೂರಕವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ನಿದರ್ಶನಕ್ಕಾಗಿ ಈ ಕೆಲವು ಸಾಲುಗಳನ್ನು ನೋಡಬಹುದು: “ಮಹಾ ಧಮ್ಮಸ್ಸಿನವನೆ, ಹುಮ್ಮಸ್ಸಿದೆಯೆ ಬಾ ಈಚೆ ಕಡೆ ತೋರಿಸುತ್ತೇನೊಂದು ಕೈಯ’; “ಬಂದರಲ್ಲಾ ಕೊನೆಗು ಯಜಮಾನರು’; “ಪ್ರಭೂ, ಪರಾಕುಪಂಪನ್ನೊತ್ತಿಯೊತ್ತಿ ನಡಬಗ್ಗಿರುವ ಬೊಗಳು ಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ’; “ದೊಡ್ಡವರ ಸಹವಾಸ ಸಾಕೋ ಸಾಕು ಈ ದೇಶಕ್ಕೆ’. ಅಡಿಗರಿಗೆ ಸ್ವಾನುಭವ, ಆತ್ಮವಿಮರ್ಶೆ ತುಂಬ ಮುಖ್ಯವಾಗಿದ್ದವು. ಆದ್ದರಿಂದಲೇ ಅವರು ಭಕ್ತಿ ಪಂಥದ ದಾಸರಂತೆ, ಅನುಭಾವಿ ಕವಿಗಳಂತೆ ಕಾವ್ಯದಲ್ಲಿ ತನ್ಮಯರಾಗಲಿಲ್ಲ. ಬೌದ್ಧಿಕ ಎಚ್ಚರದ ಜೊತೆಗೆ ವಿಮಶಾì ಪ್ರಜ್ಞೆಯೂ ಅತ್ಯಗತ್ಯವೆಂದು ಪ್ರತಿಪಾದಿಸಿದ ಅವರು ವ್ಯಕ್ತಿ ವೈಶಿಷ್ಟ್ಯಕ್ಕೆ ಒತ್ತು ಕೊಡುವಾಗ ಕೂಡ ಅದಕ್ಕಿರುವ ಸಮಷ್ಟಿಯ ಆಯಾಮವನ್ನು ಕಡೆಗಣಿಸಿದವರಲ್ಲ. ಈ ದೃಷ್ಟಿಯಿಂದ ನೋಡಿದಾಗ “ವಿಮರ್ಶಕ’ ಎಂಬ ಅವರ ಕವನ ಬಹು ಮುಖ್ಯವೆನಿಸುತ್ತದೆ. ಮೊದಲಮೊದಲು ಅವರದು ಅಂತರ್ಮುಖತೆಯ ಕಾವ್ಯವಾಗಿತ್ತು. ಭಾವತರಂಗ, ಕಟ್ಟುವೆವು ನಾವು ಸಂಕಲನಗಳಲ್ಲಿ ಚರಿತ್ರೆ, ಭೂಗೋಳ, ಪರಂಪರೆ, ಭೂತ, ವರ್ತಮಾನ ಇವುಗಳನ್ನು ಕುರಿತ ಕವನಗಳಿವೆ. ಈ ಕವನಗಳಲ್ಲಿ ಕಾಣಿಸಿಕೊಳ್ಳುವ ನಾಯಕ ಈ ಇಹಕ್ಕೆ ದೂರವಾದ, ಅವರ್ಣನೀಯವಾದ, ಅಲೌಕಿಕವಾದ ಜಗತ್ತಿಗೆ ಕರೆಗೆ ಓಗೊಡುವವನು. ತುಂಬ ಪ್ರಸಿದ್ಧವಾದ ಕವನ “ಮೋಹನ ಮುರಲಿ’ಯಲ್ಲಿ ಅನಿರ್ವಚನೀಯದ ಸೆಳೆತ ಇರುವಂತೆಯೇ ಈ ಇಹವನ್ನು ತೊರೆಯುವುದೇನೂ ಸುಲಭವಲ್ಲ ಎಂಬ ಧ್ವನಿಯೂ ಇದೆ. ಇದೇ ಧ್ವನಿ ಹಿಮಗಿರಿಯ ಕಂದರದಲ್ಲಿ ಎಂಬ ದೀರ್ಘ ಕವನದಲ್ಲಿ ಚಲನಚಿತ್ರದ ಮೊಂತಾಜ್‌ನಂತೆ ವಿಭಿನ್ನ ಪ್ರತಿಮೆಗಳ ಮೂಲಕ ಮತ್ತೆ ಮತ್ತೆ ಹೊಳಲಿಡುತ್ತದೆ. ಅಡಿಗರು ಪ್ರಗತಿಶೀಲರ ಪ್ರಭಾವಕ್ಕೊಳಗಾಗಿದ್ದ ಕಾಲದಲ್ಲಿ ಕೆಲವು ಸಮಾಜಕೇಂದ್ರಿತ ಕವನಗಳನ್ನು ಬರೆದರು. ಉದಾಹರಣೆಗೆ ಸಮಾಜಭೈರವ, ಕಟ್ಟುವೆನು ನಾವು ಹೊಸ ನಾಡೊಂದನು ಇತ್ಯಾದಿ. ಮೊದಲ ಸಂಗ್ರಹದಲ್ಲಿದ್ದ “ನಾನು’ ಇಲ್ಲಿ “ನಾವು’ ಎಂದಾದದ್ದು ಗಮನಾರ್ಹ. ಈ ಕವನಗಳಲ್ಲಿ ಅವರು ಸಮಾಜದ ಅವನತಿಯ ಕುರುಹುಗಳನ್ನು ಅನುಕಂಪದಿಂದ, ಜಿಗುಪ್ಸೆಯಿಂದ, ವ್ಯಂಗ್ಯದಿಂದ ಚಿತ್ರಿಸಿದ್ದಾರೆ. ಇಂದು ನಮ್ಮಿà ನಾಡು ಎಂಬ ಮೂರು ಕವನಗಳನ್ನು ಬರೆಯುವ ಹೊತ್ತಿಗೆ ಅವರಲ್ಲಿ ಭ್ರಮನಿರಸನಕ್ಕೊಂದು ರೂಪಕವೇ ಸಿದ್ಧವಾಗಿತ್ತೆನ್ನಬೇಕು. ಚಂಡೆಮದ್ದಳೆ, ಭೂಮಿಗೀತ, ವರ್ಧಮಾನ ಸಂಗ್ರಹಗಳಲ್ಲಿ ಮತ್ತೆ ನಾನು ಎನ್ನುವ ವ್ಯಕ್ತಿ ಅವತರಿಸುತ್ತಾನೆ. ಅಡಿಗರನ್ನು ಶ್ರೇಷ್ಠ ಕವಿಯೆಂದು ಕರೆಯುವುದಕ್ಕೆ ಕಾರಣವಾಗುವ ಅನೇಕ ಕವನಗಳು ಈ ಸಂಗ್ರಹಗಳಲ್ಲಿವೆ. ಭೂಮಿಗೀತ ಎಂಬ ಮಹತ್ವಾಕಾಂಕ್ಷೆಯ ಕವನದಲ್ಲಿರುವ ಕೆಲವು ಧ್ವನಿಗಳು ಅವರ ಮೊದಲ ಸಂಗ್ರಹದ ಒಳತೋಟಿ ಎಂಬ ಕವನದಲ್ಲೇ ಇರುವುದನ್ನು ಗಮನಿಸಬೇಕು. ಭೂಮಿಗೀತದಲ್ಲಿ ಭೂಮಿತಾಯಿಯ ಆಕರ್ಷಣೆ ವಿಕರ್ಷಣೆ, ಅವಳ ಸಂಬಂಧದಲ್ಲಿರುವ ಹಿಂಸೆ, ಪ್ರಕೃತಿಯಲ್ಲಿರುವ ದ್ವಂದ್ವ , ಅವುಗಳಿಗೆ ಮನುಷ್ಯನೇ ಸೇರಿಸುವ ಇನ್ನಷ್ಟು ದ್ವಂದ್ವ (ಇವಳೆದೆಗೆ ಬೇರಿಳಿದ ಕಾಲು ನನ್ನದು; ಬಿತ್ತಿದೆನು, ಬೆಳೆದೆ ಆಟಂಬಾಬು) ಇವೆಲ್ಲವೂ ರೂಪಕಸಮೃದ್ಧಿಯಿಂದಾಗಿ ಅರ್ಥದ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತವೆ. ಸೃಷ್ಟಿಕ್ರಿಯೆಯನ್ನು ಕುರಿತ ಪ್ರಾರ್ಥನೆ ಕವನವಂತೂ ಪ್ರತಿಮೆಯಿಂದ ಪ್ರತಿಮೆಗೆ, ಸಂಕೇತದಿಂದ ಸಂಕೇತಕ್ಕೆ ಬೆಳೆಯುವ, ಒಂದು ಇನ್ನೊಂದರ ಜೊತೆ ಸಂಪರ್ಕ ಸಾಧಿಸುವ, ಹೊಸ ಹೊಸ ಅರ್ಥಗಳನ್ನು ಹೊಳೆಯಿಸುವ ಒಂದು ಸಾವಯವ ಶಿಲ್ಪವಾಗಿಬಿಟ್ಟಿದೆ. ಈ ಮಾತು ಶ್ರೀರಾಮನವಮಿಯ ದಿವಸ, ವರ್ಧಮಾನ, ಕೂಪಮಂಡೂಕ ಎಂಬ ಕವನಗಳಿಗೂ ಅನ್ವಯಿಸುವಂಥದು. ತುರ್ತುಪರಿಸ್ಥಿತಿಯ ವಿರುದ್ಧ ದನಿ
ಅಡಿಗರು ಒಬ್ಬ ಧೀಮಂತ ಕವಿ. ಆದ್ದರಿಂದಲೇ ಅವರು ಎಲ್ಲವನ್ನೂ ಪ್ರಶ್ನಿಸುತ್ತಿದ್ದ ಕವಿ. ಅವರದು ಸರ್ವಾಧಿಕಾರದ ವಿರುದ್ಧ ಮೊಳಗಿದ ದನಿ. ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದ ಅವರಿಗೆ ನಮ್ಮ ದೇಶ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಸರ್ವಾಧಿಕಾರದತ್ತ ಸಾಗುತ್ತಿದೆ ಎಂಬ ಆತಂಕವಿತ್ತು. 1975ರ ಜೂನ್ 26ರಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರಷ್ಟೆ. ಮಾರನೆಯ ಬೆಳಿಗ್ಗೆ ನಾವೆಲ್ಲ ಪತ್ರಿಕೆಗಳಲ್ಲಿ ಆ ಬಗ್ಗೆ ಓದಿದರೂ ಕೂಡ ನಮ್ಮಲ್ಲಿ ಕೆಲವರಿಗೆ ಅಂಥ ಶಾಸನದಿಂದ ಏನೇನು ಅನರ್ಥವಾಗಬಹುದೆಂಬ ಕಲ್ಪನೆಯೂ ಇರಲಿಲ್ಲ. ಆ ಸಂಜೆ ಅಡಿಗರು ಎಂದಿನಂತೆ ಬೆಂಗಳೂರಿನ ಗಾಂಧಿಬಜಾರಿಗೆ ಬಂದರು. ನಾವು ಮೂವರು ನಾಲ್ವರು ಅವರ ಜೊತೆ ಹೊಟೇಲಿನಲ್ಲಿ ಕಾಫಿ ಕುಡಿದೆವು. ಆದರೆ ಹೊಟೇಲಿನಲ್ಲಿ ಕುಳಿತಿರುವಷ್ಟು ಹೊತ್ತೂ ಅವರು ಹೆಚ್ಚೇನೂ ಮಾತಾಡಲಿಲ್ಲ. ಅಂದಿನ ಅವರ ಆ ವ್ಯಗ್ರತೆಗೆ ಕಾರಣವೇನೆಂದು ನಾವೂ ಊಹಿಸಲಾಗಲಿಲ್ಲ. ಹೊಟೇಲಿನಿಂದ ಹೊರಗೆ ಬಂದು ಅಲ್ಲೇ ಇದ್ದ ಕೆನರಾ ಬ್ಯಾಂಕಿನ ಕಟ್ಟೆಯ ಮೇಲೆ ಕುಳಿತದ್ದೇ ಅಡಿಗರು, “”ಏನ್ರೀ, ಎಂಥಾ ಧೂರ್ತ ಹೆಂಗಸು ಈಕೆ? ಪ್ರಜಾತಂತ್ರದ ಮೂಲಕ್ಕೇ ಕೊಡಲಿ ಹಾಕಿದಳಲ್ಲ” ಎಂದು ಮೊದಮೊದಲು ಪೇಚಾಡುತ್ತ ಆಮೇಲೆ ಅತೀವ ಸಿಟ್ಟಿನಿಂದ ಒಂದರ್ಧ ಗಂಟೆ ಪ್ರಜಾತಂತ್ರದ ಪರಮಮೌಲ್ಯಗಳ ಬಗ್ಗೆ ಮಾತಾಡಿದರು. ಪರಿಣಾಮವಾಗಿ ನಾವೂ ಸ್ವಲ್ಪ$ಹೊತ್ತು ಇಂದಿರಾ ಗಾಂಧಿಯ ಕೃತ್ಯದ ಬಗ್ಗೆ ಯೋಚಿಸುವಂತಾಯಿತು. ರಾತ್ರಿ ಏಳೂವರೆ ಗಂಟೆಯಾದದ್ದೇ ಅವರು ಮನೆಗೆ ಹೊರಡಲೆಂದು ಎದ್ದರು. ನಾನು ಅದೇ ಹೊತ್ತಿಗೆ ಆ ದಾರಿಯಲ್ಲಿ ಬಂದ ಒಂದು ಆಟೋವನ್ನು ನಿಲ್ಲಿಸಿ ಅವರನ್ನು ಕೂಡಿಸಿದೆ. ಅವರು, “”ಬರುತ್ತೇನೆ, ನಾಳೆ ನೋಡೋಣ” ಎಂದದ್ದೇ ಆಟೋ ಹೊರಟಿತು. ಆಶ್ಚರ್ಯವೆಂದರೆ ಹತ್ತು ಗಜ ಹೋದದ್ದೇ ಅದು ನಿಂತುಬಿಟ್ಟದ್ದು. ಆಟೋದವನೇನಾದರೂ ಬರುವುದಿಲ್ಲ ಎಂದನೇನೋ ಎಂದುಕೊಂಡು ನಾನು ಓಡಿಹೋದೆ. ಅಡಿಗರು ಕೆಳಗಿಳಿದು ನನ್ನ ಭುಜ ಹಿಡಿದುಕೊಂಡು, “”ನಾವೀಗ ಬಾಂಬು ಮಾಡಬೇಕು” ಎಂದು ಹೇಳಿದವರೇ ಮತ್ತೆ ಆಟೋದೊಳಗೆ ತೂರಿಕೊಂಡುಬಿಟ್ಟರು. ಆಮೇಲೆ ಮೂರು ದಿನ ಅವರು ಗಾಂಧಿಬಜಾರಿನತ್ತ ಸುಳಿಯಲಿಲ್ಲ. “”ಬಹುಶಃ ಬಾಂಬು ಮಾಡುತ್ತಿರಬೇಕು” ಎಂದು ನಾವು ನಕ್ಕದ್ದುಂಟು. ಆದರೆ ನಾಲ್ಕನೆಯ ದಿನ ಬಂದಿತು ಅವರ ಸವಾರಿ. ಎಲ್ಲರೂ ಕಾಫಿ ಹೀರುತ್ತಿರುವಾಗ ಒಂದು ಸಿಗರೇಟು ಹಚ್ಚಿದ ಅಡಿಗರು ಮೆಲ್ಲನೆ ತಮ್ಮ ಕೋಟಿನ ಜೇಬಿನಿಂದ ಮಡಿಸಿದ ಒಂದು ಕಾಗದ ತೆಗೆದು ನಾಡಿಗರ ಕೈಗಿತ್ತರು. ಅದರಲ್ಲಿದ್ದದ್ದು ತುರ್ತು ಪರಿಸ್ಥಿತಿಯನ್ನು ವಿಡಂಬಿಸುವ ಈ ಕವನ:
ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದು
ಬೇಕಾದ್ದ ಬೆಳೆದುಕೋ ಬಂಧು
ಬಹುಶಃ ಅಡಿಗರಂಥ ಸಮರ್ಥನಾದ ಕವಿ ಮಾಡಬಹುದಾದ ಬಾಂಬು ಅಂದರೆ ಇದೇ ಅಲ್ಲವೆ? ಗಜೇಂದ್ರಮೋಕ್ಷ, ದೆಹಲಿಯಲ್ಲಿ, ಎಡ ಬಲ, ಸಾಮಾನ್ಯನಂತೆ ಈ ನಾನು, ಮೂಲಕ ಮಹಾಶಯರು ಮೊದಲಾದ ಕವನಗಳಲ್ಲಿ ಕೂಡ ಅವರ ಪ್ರಜಾತಂತ್ರಪರ ನಿಲುವೇ ಎದ್ದು ಕಾಣುತ್ತದೆ. ಇಂಗ್ಲಿಷಿನಲ್ಲಿ ಶೇಕ್ಸ್‌ಪಿಯರ್ ಫಾರ್ ಆಲ್ ಅಕೇಷನ್ಸ್ ಎಂಬ ಮಾತಿದೆ. ಬದುಕಿನಲ್ಲಿ ಯಾವುದೇ ಸಂದರ್ಭಕ್ಕೂ ಹೊಂದುವ ಸೂಕ್ತವಾದೊಂದು ನಾಣ್ನುಡಿಯ ರೂಪದ ಸಾಲು ಶೇಕ್ಸ್ ಪಿಯರ್‌ನಲ್ಲಿ ಸಿಕ್ಕೇ ಸಿಕ್ಕುತ್ತದೆ ಎನ್ನುವುದು ಅದರ ಅರ್ಥ. ವೈಯನೆRಯವರು ಒಮ್ಮೊಮ್ಮೆ ಅಡಿಗರ ಒಂದೆರಡು ಸಾಲುಗಳನ್ನು ಹೇಳಿದ್ದೇ ಅಡಿಗ ಫಾರ್ ಆಲ್ ಅಕೇಷನ್ಸ್ (ಎಲ್ಲ ಸಂದರ್ಭಗಳಿಗೂ ಅಡಿಗ) ಎನ್ನುತ್ತಿದ್ದರು. ಆ ಮಾತಿಗೆ ಸಾಕ್ಷಿಯಾಗಿವೆ ಈ ಕೆಲವು ಸಾಲುಗಳು: “ಮೂಗು ಮುಚ್ಚಿಕೋ ನಗರಸಭೆಯ ಲಾರಿ’; “ದೊಡ್ಡ ದೊಡ್ಡ ಮಾತು-ಬಲೂನು ಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ’; “ನಾತದಿಂದಲೇ ಜಗದ್ವಿಖ್ಯಾತನಾಗುತ್ತಿರುವ ನಾಥಪ್ರೇತ’; “ಶಸ್ತ್ರಕ್ರಿಯೆಗೆ ಇಲ್ಲಿ ಯಾವ ಶೈಲಿ?’ ಈ ಲೇಖನದ ಆರಂಭದಲ್ಲಿ ಅಡಿಗರದು ಮಾರ್ಗಪ್ರವರ್ತಕ ಕಾವ್ಯ ಎಂದೆನಷ್ಟೆ. ಅವರಿಗೆ ತಾವೆಷ್ಟು ದೊಡ್ಡ ಕವಿ ಎಂದು ಗೊತ್ತಿದ್ದುದಲ್ಲದೆ ಕವಿಯಾಗಿ ತನ್ನ ಬಾಳು ಸಾರ್ಥಕವಾಯಿತೆಂಬ ಅರಿವೂ ಇತ್ತು. ಕೂಪಮಂಡೂಕ ಕವನದಲ್ಲಿ ಬರುವ ಬಾಳೆಗಿಡದ ಈ ರೂಪಕ ಹೇಳುತ್ತಿರುವುದು ಅದನ್ನೇ ಅಲ್ಲವೆ?
ಗೊನೆಮಾಗಿ ಬಾಳೆ ಜೀವನ್ಮುಕ್ತ; ಹಳಸುತಿದೆ
ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ. – ಎಸ್. ದಿವಾಕರ್