ಯೋಗಾನಂದ ಮುದ್ದಾನ್ ಇದೇ ಮೊದಲ ಸಲ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಶರಣ್ ಹೀರೋ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆದರೆ, ಆ ಚಿತ್ರಕ್ಕೆ ಆಗ ನಾಮಕರಣ ಮಾಡಿರಲಿಲ್ಲ. ಈಗ ಅದಕ್ಕೊಂದು ಶೀರ್ಷಿಕೆ ಪಕ್ಕಾ ಮಾಡಿದ್ದಾರೆ ಯೋಗಾನಂದ್ ಮುದ್ದಾನ್. ಮಲಯಾಳಂನ “ಟೂ ಸ್ಟೇಟ್ಸ್’ ಚಿತ್ರದಿಂದ ಸ್ಫೂರ್ತಿ ಪಡೆದಿರುವ ಈ ಚಿತ್ರಕ್ಕೆ “ಅಧ್ಯಕ್ಷ ಇನ್ ಅಮೆರಿಕ’ ಎಂದು ನಾಮಕರಣ ಮಾಡಲಾಗಿದೆ.
ಈಗಾಗಲೇ ಶರಣ್, “ಅಧ್ಯಕ್ಷ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಈಗ ಆ ಅಧ್ಯಕ್ಷ ಅಮೆರಿಕಕ್ಕೆ ಹೋಗಿ ಏನೆಲ್ಲಾ ಮಾಡುತ್ತಾರೆಂಬುದನ್ನು ನೋಡಬೆಕು. ಹಾಗಂತ, ಆ “ಅಧ್ಯಕ್ಷ’ ಚಿತ್ರಕ್ಕೂ ಈ “ಅಧ್ಯಕ್ಷ ಇನ್ ಅಮೆರಿಕ’ ಚಿತ್ರಕ್ಕೂ ಸಂಬಂಧವಿಲ್ಲ. ಇನ್ನು, ಶರಣ್‌ಗೆ ರಾಗಿಣಿ ನಾಯಕಿ ಎಂಬುದು ವಿಶೇಷ. ಈ ಹಿಂದೆ ರಾಗಿಣಿ ಅವರು ಶರಣ್ ಅಭಿನಯದ “ವಿಕ್ಟರಿ’ ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಈಗ ಶರಣ್‌ಗೆ ನಾಯಕಿಯಾಗಿದ್ದಾರೆ. ಇದು ಮಲಯಾಳಂನ “ಟು ಕಂಟ್ರೀಸ್’ ಚಿತ್ರದ ಸ್ಫೂರ್ತಿ ಎನ್ನಬಹುದು.
ಆದರೆ, ಕನ್ನಡಕ್ಕೆ ಬಹಳಷ್ಟು ಬದಲಾವಣೆ ಮಾಡಿಕೊಂಡು ಮಾಡಿದ್ದಾರಂತೆ ಯೋಗಾನಂದ್. ಇದೊಂದು ಫ್ಯಾಮಿಲಿ ಡ್ರಾಮ ಎಂಬುದು ಯೋಗಾನಂದ್ ಮುದ್ದಾನ್ ಮಾತು. ಪೀಪಲ್ ಮೀಡಿಯ ಟೆಕ್ ಎಂಬ ಸಾಫ್ಟ್ವೇರ್ ಕಂಪೆನಿಯ ವಿಶ್ವ ಹಾಗೂ ವಿವೇಕ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ “ಅಲಾ ಮೊದಲಯಂದಿ’ ಮತ್ತು “ಕೇಶವ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮೇ 15 ರಿಂದ ವಿದೇಶದಲ್ಲೇ ಸಂಪೂರ್ಣ ಚಿತ್ರೀಕರಣ ನಡೆಯಲಿದೆ.
ಸುಮಾರು 35 ದಿನಗಳ ಕಾಲ ಅಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗುವುದು ಎಂಬುದು ನಿರ್ದೇಶಕರ ಮಾತು. ಯೋಗಾನಂದ್ ಮುದ್ದಾನ್ “ಬಿರುಗಾಳಿ’ ಮೂಲಕ ಸಂಭಾಷಣೆಗಾರರಾಗಿ ಗುರುತಿಸಿಕೊಂಡವರು. ಅದಕ್ಕೂ ಮುನ್ನ “ಆಪ್ತಮಿತ್ರ’ ಚಿತ್ರದ ಕೆಲ ಸೀನ್‌ಗಳಿಗೂ ಸಂಭಾಷಣೆ ಬರೆದಿದ್ದರು. ಆ ಬಳಿಕ “ತುಘಲಕ್’, “ಚಾರುಲತ’, “ಚಿಂಗಾರಿ’, “ವಜ್ರಕಾಯ’, “ಭಜರಂಗಿ’, “ಮುಕುಂದ ಮುರಾರಿ’, “ಚೌಕ’, “ಕಲಾಕಾರ್’, “ಟೈಗರ್’. “ವಿಐಪಿ’ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ಯೋಗಾನಂದ್‌ಗೆ ಮೊದಲ ನಿರ್ದೇಶನ ಮಾಡಿದರೆ, ಅದು ಶರಣ್‌ಗೆ ಮಾಡಬೇಕು ಅಂತ ನಿರ್ಧರಿಸಿದ್ದರಂತೆ. ಅದರಂತೆ, “ಅಧ್ಯಕ್ಷ ಇನ್ ಅಮೆರಿಕ’ ಚಿತ್ರ ಮಾಡುತ್ತಿದ್ದಾರೆ.