ಅಂತೂ ಇಂತೂ ಅಧ್ಯಕ್ಷರ ಆಗಮನವಾಗುತ್ತಿದೆ. ಅಮೆರಿಕ ಸುತ್ತಿ ಬಂದ ಅಧ್ಯಕ್ಷರು, ಈ ವಾರ ತಮ್ಮ ಕಾರುಬಾರು ನಡೆಸೋಕೆ ಸಜ್ಜಾಗುತ್ತಿದ್ದಾರೆ. ಹೌದು, ಶರಣ್ ಅಭಿನಯದ “ಅಧ್ಯಕ್ಷ ಇನ್ ಅಮೆರಿಕ’ ಇಂದು ರಾಜ್ಯಾದ್ಯಂತ ಬಿಡುಗಡೆ. ಬಹುತೇಕರಿಗೆ ಇದು “ಅಧ್ಯಕ್ಷ’ ಪಾರ್ಟ್ 2 ಎಂಬ ಪ್ರಶ್ನೆ ಇದೆ. ಅದರ ಮುಂದುವರೆದ ಭಾಗ ಇರಬಹುದಾ ಎಂಬ ಅನುಮಾನವೂ ಇದೆ. ಆದರೆ, “ಅಧ್ಯಕ್ಷ ಇನ್ ಅಮೆರಿಕ’ ಬೇರೆಯದ್ದೇ ಕಥೆ ಹೊಂದಿದ ಚಿತ್ರ. ಇಲ್ಲಿ ಶರಣ್ ಇದ್ದಾರೆ ಅಂದಮೇಲೆ ಕಾಮಿಡಿಗೆ ಕೊರತೆ ಇಲ್ಲ. ಅದರೊಂದಿಗೆ ಸೆಂಟಿಮೆಂಟ್ ಮತ್ತು ಒಂದೊಳ್ಳೆಯ ಸಂದೇಶವಿದೆ. ಅದೇ ಈ “ಅಧ್ಯಕ್ಷರ’ ಸ್ಪೆಷಲ್.
ನಿರ್ದೇಶಕ ಯೋಗಾನಂದ್ ಮುದ್ದಾನ್ ಅವರ ಮೊದಲ ಚಿತ್ರವಿದು. ಅಂದಹಾಗೆ, ಇದು ಮಲಯಾಳಂನ “ಟು ಕಂಟ್ರೀಸ್’ ಚಿತ್ರದ ಒನ್‌ಲೈನ್ ಇಟ್ಟುಕೊಂಡು ಮಾಡಿರುವ ಸಿನಿಮಾ. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಮಾಡಿರುವ ಚಿತ್ರ. ಬಹುತೇಕ ಅಮೆರಿಕಾದಲ್ಲೇ ಚಿತ್ರೀಕರಣಗೊಂಡಿರುವ ಈ ಚಿತ್ರ, ಇನ್ನು, ಈ ಚಿತ್ರದ ಬಗ್ಗೆ ಹೇಳುವ ನಿರ್ದೇಶಕರು, “ಬದುಕಲ್ಲಿ ಗಂಡ-ಹೆಂಡತಿ ಹೇಗಿರಬೇಕು ಎಂಬುದರ ಜೊತೆಗೆ, ಊರ ಅಧ್ಯಕ್ಷನಾದ ಬಳಿಕ ಅಮೆರಿಕಕ್ಕೆ ಹೋಗಿ ಏನೆಲ್ಲಾ ಅವಾಂತರ ಸೃಷ್ಟಿಸುತ್ತಾನೆ, ಅಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಎಂಬುದೇ ವಿಶೇಷ. ಚಿತ್ರಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ಅದ್ಧೂರಿಯಾಗಿ ಮೂಡಿ ಬರಲು ನಿರ್ಮಾಪಕರು ಶ್ರಮಿಸಿದ್ದಾರೆ’ ಎಂಬುದು ಅವರ ಮಾತು.
ಚಿತ್ರದಲ್ಲಿ ವಿ.ಹರಿಕೃಷ್ಣ ಅವರ ಸಂಗೀತ ಮತ್ತೂಂದು ಹೈಲೈಟ್ ಎಂದು ಮಾತಿಗಿಳಿದ ಶರಣ್, “ಚಿತ್ರದಲ್ಲಿ ಅಧ್ಯಕ್ಷ ಅಮೆರಿಕಾಕ್ಕೆ ಹೋಗುವುದೇ ಒಂದು ಫನ್ನಿ. ಅಲ್ಲಿ ಹೋದಾಗ ಎಷ್ಟೆಲ್ಲಾ ಸಮಸ್ಯೆಗೊಳಪಟ್ಟು, ನಗು ತರಿಸುತ್ತಾನೆ ಅನ್ನೋದು ಕಥೆ. ಚಿತ್ರವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ. ಒಳ್ಳೆಯ ಸಿನಿಮಾ ಕೊಟ್ಟರೆ, ಖಂಡಿತ ಕನ್ನಡಿಗರು ಕೈ ಬಿಡಲ್ಲ’ ಎಂಬುದು ಶರಣ್ ಮಾತು.
ರಾಗಿಣಿ ಅವರಿಗೆ ಇದು 25 ನೇ ಚಿತ್ರ. ಒಂದು ದಶಕದಲ್ಲಿ ಇಷ್ಟೊಂದು ಸಿನಿಮಾ ಮಾಡಿದ್ದು ವಿಶೇಷವಂತೆ. ಆ ಖುಷಿ ಹಂಚಿಕೊಂಡರು ರಾಗಿಣಿ.
ತಬಲನಾಣಿ ಅವರು ಇಲ್ಲಿ ರಾಗಿಣಿ ಜೊತೆ ಹಾಸ್ಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಆ ದೃಶ್ಯಗಳನ್ನು ಜನರು ಮರೆಯುವುದಿಲ್ಲ ಅಷ್ಟೊಂದು ಎಫೆಕ್ಟ್ ಆಗಿ ಮೂಡಿಬಂದಿದೆ ಎಂಬುದು ತಬಲನಾಣಿ ಮಾತು. ಇನ್ನುಳಿದಂತೆ ಚಿತ್ರದಲ್ಲಿ ರಂಗಾಯಣ ರಘು, ಅವಿನಾಶ್, ಶಿವರಾಜ್.ಕೆ.ಆರ್.ಪೇಟೆ, ಚಿತ್ರಾಶೆಣೈ, ಸಾಧುಕೋಕಿಲ, ಸುಂದರ್ ಅಭಿನಯಿಸಿದ್ದಾರೆ. ವಿಶ್ವಪ್ರಸಾದ್.ಟಿ.ಜಿ ನಿರ್ಮಾಣ ಮಾಡಿದ್ದಾರೆ. ಇಂದು ತೆರೆಗೆ ಬರುತ್ತಿರುವ ಈ ಚಿತ್ರವನ್ನು ಶೈಲೇಂದ್ರ ಬಾಬು ವಿತರಣೆ ಮಾಡುತ್ತಿದ್ದಾರೆ.