Advertisement

ಮದುವೆಗೂ ಇನ್ನು ಆಧಾರ ಕಡ್ಡಾಯ

03:45 AM Jul 05, 2017 | Harsha Rao |

ಹೊಸದಿಲ್ಲಿ: ಮದುವೆಯಾದ 30 ದಿನಗಳಲ್ಲಿ ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸಲೇಬೇಕು. ಇದಕ್ಕೆ ಜಾತಿ-ಧರ್ಮದ ಹಂಗಿಲ್ಲ. ನೋಂದಣಿ ಮಾಡಿಸದಿದ್ದರೆ 31ನೇ ದಿನದಿಂದ ನಿತ್ಯ 5 ರೂ. ದಂಡ ಖಾತ್ರಿ. ಇದಷ್ಟೇ ಅಲ್ಲ, ನೋಂದಣಿ ಮಾಡಿಸಿ ಆಧಾರ್‌ ಜತೆ ಲಿಂಕ್‌ ಮಾಡ ಬೇಕಾದದ್ದು ಕಡ್ಡಾಯ! ಇವು ಕಾನೂನು ಆಯೋಗ ಕೇಂದ್ರ ಸರ ಕಾರಕ್ಕೆ ನೀಡಿರುವ ಶಿಫಾರಸುಗಳು. ಒಟ್ಟು 41 ಪುಟ ಗಳ ವರದಿ ನೀಡಿರುವ ಆಯೋಗ, ವಿವಾಹ ವಂಚನೆಗಳನ್ನು ಗಣನೆಗೆ ತೆಗೆದು ಕೊಂಡು ಇದನ್ನು ತಪ್ಪಿಸಲು ಮಾಡಬೇಕಾದ ಕ್ರಮಗಳು ಯಾವುವು ಎಂಬ ಬಗ್ಗೆ ವಿವರಣೆ ನೀಡಿದೆ.

Advertisement

ಆದರೆ ಇದು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಕೇಂದ್ರ ಸರಕಾರದ ಪ್ರಯತ್ನ ಎಂದೂ ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ತಲಾಖ್‌ ನಿಷೇಧಿಸುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗುತ್ತಿದೆ. ಈ ಸಾಲಿಗೆ ವಿವಾಹ ನೋಂದಣಿಯನ್ನೂ ಸೇರಿಸಿದರೆ ಕದ್ದು ಅಥವಾ ಮೊದಲ ಪತ್ನಿಗೆ ಮೋಸ ಮಾಡಿ ವಿವಾಹವಾಗುವುದಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಮತ್ತು ಬಹುಪತ್ನಿತ್ವ ಪದ್ಧತಿ ಯನ್ನು ನಿಯಂತ್ರಿಸಿದಂತಾಗುತ್ತದೆ ಎನ್ನಲಾಗಿದೆ.

ಆಧಾರ್‌ ಏಕೆ?: ಇತ್ತೀಚೆಗೆ ವಿವಾಹದ ಹೆಸರಲ್ಲಿ ವಂಚನೆ ಯಾಗುತ್ತಿರುವುದು ಹೆಚ್ಚಾಗಿದೆ. ಹೀಗಾಗಿ ಆಧಾರ್‌ನ ಜತೆ ಸೇರಿಸಿ ವಿವಾಹ ನೋಂದಣಿ ಮಾಡಿಸಿದರೆ, ಇಂಥ ವಂಚನೆ ಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ.
ಇದರಲ್ಲಿ ಬಯೋಮೆಟ್ರಿಕ್‌ ವಿಧಾನ ಬಳಕೆಯಾಗುತ್ತಿರುವುದರಿಂದ ಬೇರೊಂದು ಕಡೆ ವಿವಾಹವಾಗಿದ್ದರೂ ಅದು ತತ್‌ಕ್ಷಣವೇ ಗೊತ್ತಾಗುತ್ತದೆ. ಹೀಗಾಗಿ ಆಧಾರ್‌ ಬಳಕೆ ಮಾಡಬಹುದು ಎಂದು ಕಾನೂನು ಆಯೋಗ ಅಭಿಪ್ರಾಯಪಟ್ಟಿದೆ.

ಕಡ್ಡಾಯ ಏಕೆ?:  ಜನನ ಅಥವಾ ಮರಣ ಪತ್ರಗಳನ್ನು ಕಡ್ಡಾಯ ಮಾಡಿರುವಂತೆಯೇ ವಿವಾಹ ನೋಂದಣಿಯನ್ನೂ ಕಡ್ಡಾಯ ಮಾಡಬೇಕು ಎಂಬುದು ಆಯೋಗದ ಬಹುಮುಖ್ಯ ಸಲಹೆ. ಮದುವೆಯಾದ 30 ದಿನದೊಳಗೆ ನೋಂದಣಿ ಮಾಡಿಸಲೇಬೇಕು. ಮಾಡಿಸದಿದ್ದರೆ ದಿನಕ್ಕೆ 5 ರೂ.ಗಳಂತೆ ದಂಡ ವಿಧಿಸಬೇಕು ಎಂದಿದೆ. ಜನನ ಮತ್ತು ಮರಣ ಪ್ರಮಾಣಪತ್ರಗಳಲ್ಲೂ ದಂಡದ ಪ್ರಸ್ತಾವವಿದೆ. ಇದರಂತೆಯೇ ವಿವಾಹ ನೋಂದಣಿಯಲ್ಲೂ ದಂಡದ ನೀತಿಯನ್ನು ಜಾರಿಗೆ ತರಬೇಕು ಎಂದಿದೆ.

ವಿವಾಹ ನೋಂದಣಿ ಕಡ್ಡಾಯ ಎಂದು ಹೇಳಿದ್ದರೂ ಯಾವುದೇ ವೈಯಕ್ತಿಕ ಕಾನೂನು ಮಂಡಳಿಗಳನ್ನು ರದ್ದು ಮಾಡಬೇಕು ಎಂದು ಕಾನೂನು ಆಯೋಗ ತಿಳಿಸಿಲ್ಲ. ಈಗಾಗಲೇ ಅವಕಾಶ ಕೊಟ್ಟಿರುವಂತೆ ಎಲ್ಲ ವೈಯಕ್ತಿಕ ಕಾನೂನು ಮಂಡಳಿಗಳೂ ಅದೇ ಸ್ವರೂಪದಲ್ಲೇ ಇರಲಿ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next