Advertisement

ದಶ ಪ್ರಯತ್ನಕ್ಕೂ ಒಲಿಯದ ಆಧಾರ್‌ ಕಾರ್ಡ್‌! ಸುಳ್ಯ ತಾಲೂಕಿನ ವಿದ್ಯಾರ್ಥಿನಿಯ ಗೋಳು

02:19 AM Feb 19, 2021 | Team Udayavani |

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿನಿಯೊಬ್ಬಳ ದಶ ಪ್ರಯತ್ನಕ್ಕೂ ಆಧಾರ್‌ ಕಾರ್ಡ್‌ ಒಲಿದಿಲ್ಲ!

Advertisement

ಪೆರುವಾಜೆ ಗ್ರಾಮದ ಕುಂಡಡ್ಕ ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೇರಿರುವ ಕೂಲಿ ಕಾರ್ಮಿಕ ಬಾಬು ಮತ್ತು ಗೀತಾ ದಂಪತಿಯ ಪುತ್ರಿ, ಬೆಳ್ಳಾರೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ 10ನೇ ತರಗತಿಯ ಪವಿತ್ರಾಳ ವ್ಯಥೆಯ ಕಥೆ ಇದು.

5 ವರ್ಷಗಳಿಂದ ಪ್ರಯತ್ನ!
ಐದು ವರ್ಷಗಳಿಂದ ಆಧಾರ್‌ ಕಾರ್ಡ್‌ಗಾಗಿ ಈಕೆ, ಪೋಷಕರು ಸುತ್ತಾಡದ ಕಚೇರಿಗಳಿಲ್ಲ. ಖಾಸಗಿ, ಸರಕಾರಿ ಕೇಂದ್ರಗಳಲ್ಲಿ ನೋಂದಾಯಿಸಿದ ರಶೀದಿಗಳ ಸಂಖ್ಯೆಯೇ 13ಕ್ಕೂ ಅಧಿಕ. ಅದಕ್ಕಾಗಿ ಸಾವಿರಾರು ರೂ. ವ್ಯಯಿಸಿದ್ದಾರೆ.

ಸ್ಕಾಲರ್‌ಶಿಪ್‌ ಸಿಕ್ಕಿಲ್ಲ!
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಸ್ಕಾಲರ್‌ಶಿಪ್‌ ನೀಡುತ್ತಿದೆ. ಆದರೆ ಪವಿತ್ರಾಳಲ್ಲಿ ಆಧಾರ್‌ ಸಂಖ್ಯೆ ಇಲ್ಲವೆಂಬ ಕಾರಣಕ್ಕೆ 5ನೇ ಬಳಿಕ ಸ್ಕಾಲರ್‌ಶಿಪ್‌ ಸಿಕ್ಕಿಲ್ಲ.

ಬಾಲಕಿಯ ಕಲಿಕೆಗೆ ನೆರವಾಗಬೇಕಿದ್ದ ಸ್ಕಾಲರ್‌ಶಿಪ್‌ ಯಾರದೋ ತಪ್ಪಿನಿಂದ ಕೈತಪ್ಪಿದೆ ಎಂದು ತಾಯಿ ಗೀತಾ ಅಳಲು ತೋಡಿಕೊಳ್ಳುತ್ತಾರೆ.

Advertisement

ಕಾರಣ ನಿಗೂಢ!
ಸಮಸ್ಯೆಯ ಬಗ್ಗೆ ಆಧಾರ್‌ ನೋಂದಣಿ ಸಿಬಂದಿಯನ್ನು ಸಂಪರ್ಕಿಸಿದಾಗ, ಮೊದಲ ಬಾರಿ ನೋಂದಾಯಿಸಿದಾಗಲೇ ಆಧಾರ್‌ ಕಾರ್ಡ್‌ ತಯಾರಾಗಿಬಹುದು. ಆದರೆ ಅದು ಈಕೆಗೆ ತಲುಪದೇ ಇರಬಹುದು. ಹಾಗಿದ್ದರೆ ಮತ್ತೆ ಎಷ್ಟು ಸಲ ನೋಂದಾಯಿಸಿದರೂ ಹೊಸ ಕಾರ್ಡ್‌ ಸಾಧ್ಯವಾಗುವುದಿಲ್ಲ. ಹಳೆ ನಂಬರ್‌ನ ಕಾರ್ಡ್‌ನಲ್ಲಿ ತಿದ್ದುಪಡಿಯನ್ನಷ್ಟೇ ಮಾಡಲು ಸಾಧ್ಯ. ಆಕೆ ತನ್ನ ಹೆಸರಿನಲ್ಲಿ ಆಗಿರಬಹುದಾದ ಕಾರ್ಡ್‌ನ ಸಂಖ್ಯೆಯನ್ನು ಅರಿಯಲು ಗ್ರಾಹಕರ ಸೇವಾ ಕೇಂದ್ರವನ್ನು ವಿಚಾರಿಸಬೇಕು ಎಂಬ ಉತ್ತರ ದೊರೆತಿದೆ.

ಸೇವಾಕೇಂದ್ರಕ್ಕಿಲ್ಲ ಕಾಳಜಿ!
ಪವಿತ್ರಾ ಗ್ರಾಹಕರ ಸೇವಾ ಕೇಂದ್ರಕ್ಕೆ ಮೊದಲ ಬಾರಿ ಕರೆ ಮಾಡಿದಾಗ “ಬ್ಯುಸಿ ಇದ್ದೇವೆ, 15 ನಿಮಿಷ ಬಿಟ್ಟು ಮತ್ತೆ ಕರೆ ಮಾಡಿ’ ಎಂಬ ಉತ್ತರ ಬಂದಿದೆ. ಮರು ಕರೆಯ ವೇಳೆ “ಪೋಷಕರು ಮಾತನಾಡಲಿ’ ಎಂದಿದ್ದಾರೆ. ಪೋಷಕರು ಕರೆ ಮಾಡಿದಾಗ “ಸರ್ವರ್‌ ಬ್ಯುಸಿ ಇದೆ, ಸ್ವಲ್ಪ ದಿನ ಬಿಟ್ಟು ಕರೆ ಮಾಡಿ’ ಎಂದಿದ್ದಾರೆ. ಇಂತಹ ನಿರ್ಲಕ್ಷ್ಯದ ಉತ್ತರದಿಂದ ಬೇಸತ್ತ ಕುಟುಂಬ ಆಧಾರ್‌ನ ಆಸೆಯನ್ನೇ ಕೈಬಿಟ್ಟಿದೆ.

ಐದನೇ ತರಗತಿ ತನಕ ಸ್ಕಾಲರ್‌ಶಿಪ್‌ ಸಿಕ್ಕಿದೆ. ಐದು ವರ್ಷಗಳಿಂದ ಇಲ್ಲ. ಆಧಾರ್‌ ಇಲ್ಲದೆ ಏನೂ ಮಾಡಲಾಗದು. ಏನು ಮಾಡುವುದೆಂದೇ ತೋಚುತ್ತಿಲ್ಲ.
– ಪವಿತ್ರಾ ಕೆ., ವಿದ್ಯಾರ್ಥಿನಿ

ವಿದ್ಯಾರ್ಥಿನಿಯ ಆಧಾರ್‌ ಕಾರ್ಡ್‌ ಸಮಸ್ಯೆ ಕುರಿತಂತೆ ವಿಚಾರಿಸಿ ಮಾಹಿತಿ ಪಡೆಯುತ್ತೇನೆ. ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಖುದ್ದು ಮಾತನಾಡುತ್ತೇನೆ.
– ಎಂ.ಜೆ. ರೂಪಾ, ಅಪರ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next