ಬೆಂಗಳೂರು: ಪಿಎಸ್ ಐ ನೇಮಕ ಹಗರಣದ ಬಗ್ಗೆ ಆಡಳಿತ – ಪ್ರತಿಪಕ್ಷದ ಮಧ್ಯೆ ಕೆಸರೆರಚಾಟ ನಡೆಯುತ್ತಿರುವುದರ ಮಧ್ಯೆಯೇ ಸಿಐಡಿ ತನಿಖಾ ಸಂಸ್ಥೆ ಇದುವರೆಗೆ 65 ಆರೋಪಿಗಳನ್ನು ಬಂಧಿಸಿದೆ. ಸೇವಾ ನಿಯನದ ಅನ್ವಯ ಎಡಿಜಿಪಿ ಅಮೃತ್ ಪೌಲ್ ಅವರನ್ನು ಅಮಾನತುಗೊಳಿಸಲಾಗಿದೆ.
ಸೋಮವಾರ ರಾತ್ರಿಯೇ ಆದೇಶ ಹೊರಡಿಸಿರುವ ರಾಜ್ಯ ಸರಕಾರ ಅಮೃತ್ ಪೌಲ್ ಜತೆಗೆ ಎಸಿಬಿ ಬಲೆಗೆ ಬಿದ್ದಿರುವ ಐಎಎಸ್ ಅಧಿಕಾರಿ ಮಂಜುನಾಥ್ ಅವರನ್ನು ಅಮಾನತುಗೊಳಿಸಿದೆ.
ನೇಮಕ ಹಗರಣದಲ್ಲಿ ಸಿಕ್ಕಿ ಬಿದ್ದವರ ಪೈಕಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಸಂಖ್ಯೆಯೇ ಸಿಂಹಪಾಲಿದೆ. ಅಮೃತ್ ಪೌಲ್ ಸೇರಿ ನಾಲ್ವರು ಡಿವೈಎಸ್ಪಿ, 18 ಅಧಿಕಾರಿಗಳು ಹಾಗೂ ಸಹಾಯಕ ಸಿಬ್ಬಂದಿ ಇದ್ದಾರೆ. ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ ಹಗರಣ ಇರಲಿಲ್ಲ. ಇದು ಕರ್ನಾಟಕ ಪೊಲೀಸ್ ಇಲಾಖೆಯ ಮೇಲಿನ ದೊಡ್ಡ ಕಪ್ಪುಚುಕ್ಕೆ ಎಂದು ಪರಿಗಣಿಸಲಾಗಿದೆ.
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರರಣದಲ್ಲಿ ಅಮೃತ್ ಪೌಲ್ 35ನೇ ಆರೋಪಿಯಾಗಿದ್ದು,ಈ ಪ್ರಕರಣ ನ್ಯಾಯಾಲಯದ ಕಣ್ಣಂಚಿನಲ್ಲೇ ಇನ್ನು ಮುಂದೆ ತನಿಖೆಗೆ ಒಳಪಡಲಿದೆ.