ಜಗಳೂರು: ತಾಲೂಕಿನ ಬರ ನಿರ್ವಹಣೆಗೆ ಇಲಾಖಾ ಅನುಷ್ಠಾನಾಧಿಕಾರಿಗಳು ಸ್ವಯಂ ಪ್ರೇರಿತರಾಗಿ ಹಾಗೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಎಚ್.ಪಿ. ರಾಜೇಶ್ ಸೂಚನೆ ನೀಡಿದರು. ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕುಡಿಯುವ ನೀರು ಸೇರಿದಂತೆ ಇತರೇ ಬರ ಸಂಬಂಧವಾದ ಯಾವುದೇ ಕೆಲಸ-ಕಾರ್ಯಗಳಿರಲಿ, ಸರ್ಕಾರದ ಸೌಲಭ್ಯಗಳಿರಲಿ ಕೂಡಲೇ ಅದರ ಬಗ್ಗೆ ಗಮನಹರಿಸಬೇಕು. ಸಂಬಂಧಪಟ್ಟ ಫಲಾನುಭವಿಗಳಿಗೆ ಒದಗಿಸಬೇಕು. ಜನತೆಯೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು. ಕಾಲ ಕಾಲಕ್ಕೆ ಸರ್ಕಾರ ನೀಡುವ ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ತಿಳಿಸಬೇಕು ಎಂದು ಅವರು ತಾಕೀತು ಮಾಡಿದರು.
ಜಗಳೂರು ವಿಧಾನ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ಅಂತರ್ಜಲ ಹೆಚ್ಚಿಸಲು 5 ನೂತನ ಕೆರೆ ಮತ್ತು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುತ್ತದೆ. ಪಟ್ಟಣದ ಜಗಳೂರು ಕೆರೆಯ ಸುತ್ತ 6 ಕಿ.ಮೀ. ರಿವಿಟ್‌ಮೆಂಟ್ ನಿರ್ಮಿಸಿ ಅದರ ಸುತ್ತಲು 15 ಅಡಿ ಜಾಗದಲ್ಲಿ ವಾಕಿಂಗ್ ಪಾರ್ಕ್ ನಿರ್ಮಾಣಕ್ಕೆ 1.75 ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.
ಬಹುತೇಕ ಇಲಾಖಾ ಅನುಷ್ಟಾನಾಧಿಕಾರಿಗಳು ಸಭೆಗಳಿಗೆ ಹಾಜರಾಗದೇ ಸಿಬ್ಬಂದಿಗಳನ್ನು ನಿಯೋಜಿಸುವುದರಿಂದ ಅಭಿವೃದ್ಧಿಯ ಬಗ್ಗೆ ಸಮರ್ಪಕವಾದ ಮಾಹಿತಿ ದೊರೆಯುತ್ತಿಲ್ಲ. ಗೈರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಎಂದು ತಾಪಂ ಇಒ ಬಿ. ಲಕ್ಷ್ಮೀಪತಿ ಅವರಿಗೆ ಶಾಸಕರು ಸೂಚಿಸಿದರು.
ಸಣ್ಣ ನೀರಾವರಿ ಇಲಾಖೆಯ ಎಇಇ ತಿಪ್ಪೇಸ್ವಾಮಿ, ಕೃಷಿ ಸಹಾಯಕ ನಿರ್ದೇಶಕ ಕೆ.ಟಿ. ಬಸಣ್ಣ, ಲೋಕೋಪಯೋಗಿ ಇಲಾಖೆ ಶೇಖರಪ್ಪ, ಜಿಪಂ ಎಇಇ ಚಂದ್ರಶೇಖರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ರವಿಚಂದ್ರ, ಸಮಾಜ ಕಲ್ಯಾಣ ಇಲಾಖೆಯ ಅಶೋಕ್, ಪಶು ಇಲಾಖೆ ರಂಗಪ್ಪ, ಬಿಸಿಎಂ ಇಲಾಖೆಯ ಅಕºರ್ ಖಾನ್, ಸಿಡಿಪಿಒ ಭಾರತಿಬಣಕಾರ್ ಸೇರಿದಂತೆ ತಾಲೂಕು ಅನುಷ್ಠಾನಾಧಿಕಾರಿಗಳು ತಮ್ಮ ಇಲಾಖಾ ವರದಿಯನ್ನು ಮಂಡಿಸಿದರು.