Advertisement
ತ್ಯಾಜ್ಯ ವಿಂಗಡನೆಯ ಪಾಠಮಂಗಳವಾರ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ತಂಡ ಕೆಮ್ಮಿಂಜೆಯ ವಸತಿ ಸಮುಚ್ಚಯದ ನಿವಾಸಿಗಳ ಸಭೆ ನಡೆಸಿ ತ್ಯಾಜ್ಯ ವಿಂಗಡನೆಯ ಪಾಠ ಮಾಡಿದರು. ಮನೆಯಲ್ಲಿ ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕ ಬುಟ್ಟಿಗಳಲ್ಲಿ ಸಂಗ್ರಹಿಸಬೇಕು. ಈ ಅಭ್ಯಾಸವನ್ನು ರೂಢಿಸಿಕೊಳ್ಳದಿದ್ದರೆ ನಗರಸಭೆಗೆ ತ್ಯಾಜ್ಯ ಸಂಗ್ರಹಣೆಗೆ ಕಷ್ಟವಾಗುತ್ತದೆ. ಅಲ್ಲದೇ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನಗರ ಸಭೆಯು ಸಂಸ್ಕರಿಸುತ್ತಿರುವುದರಿಂದ ಹಸಿ ತ್ಯಾಜ್ಯ, ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ನೀಡಬೇಕು ಎಂದು ತಿಳಿಸಿದರು.
ನಗರಸಭಾ ವ್ಯಾಪ್ತಿಯ 31 ವಾರ್ಡ್ ಗಳಲ್ಲಿಯೂ ಕಸ ವಿಂಗಡನೆಯ ಕುರಿತು ಮನೆ ಮನೆ ಅಭಿಯಾನವನ್ನು ಪುತ್ತೂರು ನಗರಸಭೆ ಹಮ್ಮಿಕೊಳ್ಳಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸ್ವಯಂಸೇವಾ ಸಂಘಟನೆಗಳ ಸಹಕಾರದೊಂದಿಗೆ ನಗರದ ಎಲ್ಲ ಮನೆ ಹಾಗೂ ಉದ್ಯಮಗಳಿಗೆ ತ್ಯಾಜ್ಯ ವಿಂಗಡನೆಯ ಕುರಿತು ಮಾಹಿತಿ ಕರ ಪತ್ರಗಳನ್ನು ವಿತರಿಸಲಾಗಿದೆ. ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿ ನೀಡುವ ಕುರಿತು ನಗರಸಭೆಯು ನಾಗರಿಕರಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಡ್ಡಾಯ ಜಾರಿ
ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ತ್ಯಾಜ್ಯ ಸಂಗ್ರಾಹಕರಿಗೆ ನೀಡಬೇಕೆಂಬ ನಿಯಮವನ್ನು ನಗರಸಭಾ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಜಾರಿ ಮಾಡಲಾಗಿದೆ. ಎಲ್ಲರೂ ಈ ನಿಯಮವನ್ನು ಪಾಲಿಸುವಂತೆ ಸೂಚಿಸಲಾಗಿದೆ.
– ರೂಪಾ ಟಿ. ಶೆಟ್ಟಿ, ಪೌರಾಯುಕ್ತರು, ನಗರಸಭೆ