Advertisement

ಹೆಚ್ಚುವರಿ ತೆರಿಗೆ, ಆರ್ಥಿಕ “ಹಿಂಜರಿಕೆ’ಹೊಂದಾಣಿಕೆ

09:56 AM Mar 07, 2020 | Sriram |

ಬೆಂಗಳೂರು: ರಾಜ್ಯ ಒಟ್ಟು ಆಂತರಿಕ ಉತ್ಪನ್ನದಲ್ಲಿ ಶೇ. 1 ಇಳಿಕೆ ನಿರೀಕ್ಷೆ, ಕೇಂದ್ರ ಸರಕಾರದ ಅನುದಾನ, ಪರಿಹಾರದಲ್ಲಿ 12,000 ಕೋಟಿ ರೂ. ಕಡಿತ, 2020-21ನೇ ಸಾಲಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಡಿ 11,215 ಕೋಟಿ ರೂ. ಖೋತಾದಿಂದಾಗಿ ರಾಜ್ಯದ ತೆರಿಗೆ ಆದಾಯ ಉತ್ತಮವಾಗಿದ್ದರೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜನರ ಮೇಲೆ ಒಂದಿಷ್ಟು ತೆರಿಗೆ ವಿಧಿಸುವ ಜತೆಗೆ ಬಜೆಟ್‌ ಗಾತ್ರದ ಶೇ.22.24ರಷ್ಟು ಸಾಲವನ್ನೇ ಪ್ರಧಾನವಾಗಿ ಅವಲಂಬಿಸಿರುವ ಮಂಡಿಸಿದಂತೆ ಕಾಣುತ್ತಿದೆ.

Advertisement

ಹಿಂದೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್‌ ಗಾತ್ರಕ್ಕಿಂತ ಕೇವಲ 3,741 ಕೋಟಿ ರೂ. ಹೆಚ್ಚುವರಿ ಗಾತ್ರದ ಆಯವ್ಯಯ ಮಂಡಿಸಲು ಯಡಿಯೂರಪ್ಪ ಶಕ್ತರಾದಂತಾಗಿದೆ. ಹಾಗಾಗಿ 2019-20 ಹಾಗೂ 2020-21ನೇ ಸಾಲಿನ ಬಜೆಟ್‌ ಗಾತ್ರ ಏಕರೂಪದಂತಿದ್ದು, ಲಭ್ಯವಿರುವ ಸಂಪನ್ಮೂಲ ದಲ್ಲೇ ಹೊಂದಾಣಿಕೆ ಜಾಣ್ಮೆ ಪ್ರದರ್ಶಿಸುವಲ್ಲಿ ಬಿಎಸ್‌ವೈ ಯಶಸ್ವಿಯಾದಂತಿದ್ದಾರೆ. ಸದ್ಯದ ಆರ್ಥಿಕ ಪರಿಸ್ಥಿತಿಗೆ ಪೂರಕವಾಗಿ ವಾಸ್ತವ ಬಜೆಟ್‌ ಮಂಡನೆಯಾದಂತಿದೆ.
ರಾಜ್ಯದಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆ ಯೋಜಿತ ವಾಗಿರುವ ಹಿನ್ನೆಲೆಯಲ್ಲಿ ತೆರಿಗೆ ಆದಾಯವೂ ಉತ್ತಮವಾಗಿದೆ. ಆ ಕಾರಣಕ್ಕಾಗಿಯೇ ರಾಜ್ಯದ ಸ್ವಂತ ತೆರಿಗೆ ರಾಜಸ್ವ ಗುರಿಯನ್ನು ಬಹುತೇಕ ತಲುಪಲ್ಲಿ ಸರಕಾರ ಯಶಸ್ವಿಯಾಗಿದೆ. ಆದರೆ ಕೇಂದ್ರದಿಂದ ಅನುದಾನ, ತೆರಿಗೆ ಪಾಲಿನ ಕಡಿತದಿಂದ ರಾಜ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಜಿಎಸ್‌ಡಿಪಿ ಕುಸಿತ?: 2018-19ನೇ ಸಾಲಿನಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಪ್ರಮಾಣ (ಜಿಎಸ್‌ಡಿಪಿ) ಶೇ. 7.8ರಷ್ಟಿತ್ತು. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಏರುಮುಖವಾಗಿರಬೇಕು. ಆದರೆ 2019-20ನೇ ಸಾಲಿನಲ್ಲಿ ಜಿಎಸ್‌ಡಿಪಿ ಪ್ರಮಾಣ ಶೇ.6.8 ಬೆಳವಣಿಯಾಗಲಿದೆ ಎಂದು ಅಂದಾಜಿಸಲಾಗಿದೆ. 2018-19 ಹಾಗೂ 2019-20ನೇ ಸಾಲಿನಲ್ಲಿ ಕೈಗಾರಿಕೆ ವಲಯದ ಬೆಳವಣಿಗೆ ಕ್ರಮವಾಗಿ ಶೇ. 5.6ರಿಂದ ಶೇ.4.8ಕ್ಕೆ ಹಾಗೂ ಸೇವಾ ವಲಯ ಕ್ರಮವಾಗಿ ಶೇ. 9.8ರಿಂದ ಶೇ. 7.9ಕ್ಕೆ ಇಳಿಕೆಯಾಗಿದೆ.

ಸಾಲು ಸಾಲು ಕಡಿತ: ಪ್ರಸ್ತುತ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ದಲ್ಲಿ ಸಾಕಷ್ಟು ಕಡಿತವಾಗಿದೆ. ಮುಖ್ಯವಾಗಿ 2019-20ನೇ ಸಾಲಿನಲ್ಲಿ ಕೇಂದ್ರೀಯ ತೆರಿಗೆಯಲಿ ರಾಜ್ಯಕ್ಕೆ 8,887 ಕೋಟಿ ರೂ. ಕಡಿತವಾಗಿದೆ. ಹಾಗೆಯೇ ಜಿಎಸ್‌ಟಿ ಪರಿಹಾರ ಉಪಕರದಲ್ಲೂ 3,000 ಕೋಟಿ ರೂ. ಖೋತಾ ಆಗುವ ನಿರೀಕ್ಷೆ ಇದೆ. ಮಾತ್ರವಲ್ಲದೇ 15ನೇ ಹಣಕಾಸು ಆಯೋಗದ ಶಿಫಾರಸಿನಡಿ 2020-21ನೇ ಸಾಲಿನಲ್ಲಿ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಕ್ಕೆ ಬರಬೇಕಾದ ಪಾಲಿನಲ್ಲಿ 11,215 ಕೋಟಿ ರೂ. ಕಡಿತವಾಗುವ ನಿರೀಕ್ಷೆ ಇದೆ. ಹಾಗಾಗಿ ಕೇಂದ್ರದಿಂದ ಅನುದಾನ ಕಡಿತ ಪರ್ವ ಮುಂದಿನ ಹಣಕಾಸು ವರ್ಷಕ್ಕೂ ಮುಂದುವರಿದೆ.

ಅಬಕಾರಿ ಸುಂಕ ಏರಿಕೆಯಿಂದ 1,200 ಕೋಟಿ ರೂ.: ಪ್ರಸಕ್ತ ವರ್ಷದಲ್ಲಿ ಅಬಕಾರಿ ಸುಂಕದಿಂದ 20,950 ಕೋಟಿ ರೂ. ಆದಾಯ ಸಂಗ್ರಹ ಮೀರಿ ಶೇ.5ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹ ನಿರೀಕ್ಷೆ ಇದೆ. ಹಾಗಿದ್ದರೂ ಅಬಕಾರಿ ಸುಂಕವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಎಲ್ಲ 18 ಘೋಷಿತ ಬೆಲೆ ಸ್ಲಾéಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರದ ಮೇಲೆ ಶೇ. 6 ಹೆಚ್ಚಳ ಮಾಡಲಾಗಿದೆ. ಇದರಿಂದ ವಾರ್ಷಿಕ 1,200 ಕೋಟಿ ರೂ. ಹೆಚ್ಚು ವರಿ ಆದಾಯ ಸಂಗ್ರಹವಾಗುವ ಅಂದಾಜು ಇದೆ.

Advertisement

ಮುದ್ರಾಂಕ ಮತ್ತು ನೊಂದಣಿ ಶುಲ್ಕದಿಂದಲೇ ಹೆಚ್ಚಿನ ಆದಾಯ ನಿರೀಕ್ಷೆ ಮಾಡಿಲ್ಲ. ಆರ್ಥಿಕ ಹಿಂಜರಿಕೆ ಸ್ಥಿತಿಯಿಂದಾಗಿ ರಾಜ್ಯದಲ್ಲಿ ಹೊಸ ವಾಹನ ನೋಂದಣಿ ಪ್ರಕ್ರಿಯೆಗೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ನಿರೀಕ್ಷಿತ ಆದಾಯ ಸಂಗ್ರಹವಾಗಿಲ್ಲ. ಹಾಗಾಗಿ 2019-20ನೇ ಸಾಲಿಗೆ ಹೋಲಿಸಿದೆ 2020-21ನೇ ಸಾಲಿನಲ್ಲಿ ಕೇವಲ 15 ಕೋಟಿ ರೂ. ಹೆಚ್ಚುವರಿ ಆದಾಯವನ್ನಷ್ಟೇ ನಿರೀಕ್ಷಿಸಲಾಗಿದೆ.

ಸಾಲ ಭಾರವಾದರೂ ಆಧಾರ: ರಾಜ್ಯ ಸಾಲವನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ. 2.37 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸಿದ್ದರೂ ಅದರದಲ್ಲಿ 52,918 ಕೋಟಿ ರೂ. ಸಾಲದ ಉಲ್ಲೇಖವಾಗಿದೆ. ಸಾಲ ಮೊತ್ತು ಬಜೆಟ್‌ ಗಾತ್ರ ಶೇ. 22.24ರಷ್ಟಿದೆ. ಸಾಲ ಆಶ್ರಯಿಸುವಂತಾಗಿದೆ.

ಹೊಂದಾಣಿಕೆ ಕಸರತ್ತು
ಮುಂದಿನ ಹಣಕಾಸು ವರ್ಷದಲ್ಲಿ ಕೇಂದ್ರೀಯ ತೆರಿಗೆ ಮೂಲದಿಂದ 11,215 ಕೋಟಿ ರೂ. ಖೋತಾ ಆಗುವ ನಿರೀಕ್ಷೆ ಇದೆ. ಅದನ್ನು ಹೊಂದಾಣಿಕೆ ಮಾಡಲು ರಾಜ್ಯದ ಸ್ವಂತ ತೆರಿಗೆ ಆದಾಯ ಮೂಲದಿಂದಲೇ ಸುಮಾರು 9000 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಜತೆಗೆ ಸಾಲದ ಮೂಲಕವೂ ಹೊಂದಾಣಿಕೆ ಮಾಡುವ ಕಸರತ್ತನ್ನು ಸಿಎಂ ನಡೆಸಿದಂತಿದೆ.

ತೈಲ ತೆರಿಗೆ ಹೆಚ್ಚಳದಿಂದ 1,500 ಕೋಟಿ ರೂ.
ಕೇಂದ್ರ ಸರಕಾರದ ಅನುದಾನದಲ್ಲಿ ಉಂಟಾಗುವ ಕಡಿತವನ್ನು ಹೊಂದಾಣಿಕೆ ಮಾಡಲು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸ್ವಂತ ತೆರಿಗೆ ಮೂಲದಲ್ಲೇ ತೆರಿಗೆ ಹೆಚ್ಚಳಕ್ಕೆ ಕೈಹಾಕಿದ್ದಾರೆ. ಜಿಎಸ್‌ಟಿ ಜಾರಿ ಬಳಿಕ ವಾಣಿಜ್ಯ ತೆರಿಗೆ ಹೆಚ್ಚಳಕ್ಕೆ ಅವಕಾಶವಿಲ್ಲದ ಕಾರಣ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದಾರೆ. ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಗೆ 1.60 ರೂ. ಹಾಗೂ ಪ್ರತಿ ಲೀಟರ್‌ ಡೀಸೆಲ್‌ ಬೆಲೆ ಮೇಲೆ 1.59 ರೂ. ತೆರಿಗೆ ವಿಧಿಸಿದ್ದಾರೆ. ಇದರಿಂದ ವಾರ್ಷಿಕವಾಗಿ 1,500 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹ ನಿರೀಕ್ಷೆ ಇದೆ. ಹಾಗಾಗಿ ವಾಣಿಜ್ಯ ತೆರಿಗೆ ಮೂಲದಿಂದ ಮುಂದಿನ ಹಣಕಾಸು ವರ್ಷದಲ್ಲಿ ಒಟ್ಟು 82,443 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

ಅನುದಾನ ಕಡಿತ: ಸಚಿವರ ಕಿಡಿ?
ಆಯವ್ಯಯದಲ್ಲಿ ಇಲಾಖಾವಾರು ಅನುದಾನ ಹಂಚಿಕೆ ವಿವರ ನೀಡದೆ ವಲಯವಾರು ವಿಂಗಡಣೆ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಇಲಾಖಾವಾರು ಅನುದಾನ ಪ್ರಮಾಣ ಭಾರಿ ಕಡಿತವಾಗು ಆತಂಕವನ್ನೂ ಮೂಡಿಸಿದೆ. ಈ ಸೂಕ್ಷ್ಮದ ಸುಳಿವು ಹಿಡಿದ ಕೆಲ ಸಚಿವರು ಬಜೆಟ್‌ ಮಂಡನೆ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. ಆಯ್ದ ಇಲಾಖೆಗಳಿಗೆ ಅನುದಾನದ ಬಗ್ಗೆ ಸ್ಪಷ್ಟತೆಯನ್ನೇ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅಸಮಾಧಾನವನ್ನೂ ಹೊರ ಹಾಕಿದ್ದಾರೆ ಎನ್ನಲಾಗಿದೆ.

-ಎಂ. ಕೀರ್ತಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next