Advertisement

ಕೋವಿಡ್ ನಿಯಂತ್ರಣದೊಂದಿಗೆ ಹೆಚ್ಚುವರಿ ಹೊರೆ;  ಪಿಡಿಒಗಳಿಗೆ ಸಂಕಷ್ಟ

02:08 PM Aug 07, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವ ಜತೆಗೆ ಇತರ ಕೆಲಸದ ಜವಾಬ್ದಾರಿ ಪಿಡಿಒಗಳಿಗೆ ನೀಡುವುದರಿಂದ ಕೆಲಸದ ಮೇಲೆ ಏಕಾಗ್ರತೆ ಸಾಧಿಸಲಾಗದೆ ಒತ್ತಡದೊಂದಿಗೆ ಕೆಲಸ ನಿರ್ವಹಿಸುವ ಸನ್ನಿವೇಶ ಎದುರಾಗಿದೆ. ಜಿಲ್ಲೆಯ ಎಲ್ಲ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು, ಪಂಚಾಯತ್‌ ನೌಕರರು ಹಗಲು- ಇರುಳು ಎನ್ನದೆ ಗ್ರಾ.ಪಂ.ನ ಕೆಲಸ ಹಾಗೂ ಕೋವಿಡ್‌ ನಿಯಂತ್ರಣ ಕೆಲಸ ಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಕಾರ್ಯ ನಿಯೋಜಿಸುವುದು, ಪದೇ ಪದೆ ಕೋವಿಡ್‌ ಹೊರತಾದ ಸಭೆ ಕರೆಯುವುದು, ತುರ್ತು ಅಗತ್ಯವಿಲ್ಲದ ವಿಷಯ ಗಳಿಗಾಗಿ ಕಾರ್ಯಾಗಾರ ಏರ್ಪಡಿಸು ವುದು, ಆನ್‌ಲೈನ್‌ ಸಭೆ ಕರೆಯುವುದರಿಂದ ಮತ್ತಷ್ಟು ಒತ್ತಡ ಸೃಷ್ಟಿಯಾಗಿದೆ.

Advertisement

ಕೆಲವೆಡೆ ಪಿಡಿಒಗಳೇ ಇಲ್ಲ
ಜಿಲ್ಲೆಯ 165 ಪಂಚಾಯತ್‌ಗಳಲ್ಲಿ 134 ಪಂಚಾಯತ್‌ಗಳಷ್ಟೇ ಪಿಡಿಒಗಳಿದ್ದಾರೆ. ಉಳಿದ ಪಂಚಾಯತ್‌ಗಳಿಗೆ ಇತರ ಪಂಚಾಯತ್‌ಗಳ ಪಿಡಿಒಗಳನ್ನು ಪ್ರಭಾರ ವಾಗಿ ನೀಡಲಾಗಿದೆ. ಬಾಕಿ ಉಳಿದ 31 ಪಂಚಾಯತ್‌ಗಳ ಪಿಡಿಒಗಳನ್ನು ಸಚಿವರು, ಶಾಸಕರಿಗೆ ಆಪ್ತ ಸಹಾಯಕರು ಸಹಿತ ಇತರ ಹುದ್ದೆಗಳಿಗೆ ಕಳುಹಿಸಿಕೊಡಲಾಗಿದೆ. ಆ ಜಾಗಕ್ಕೆ ಇನ್ನೂ ನೇಮಕಾತಿ ನಡೆದಿಲ್ಲ.

ಕೋವಿಡ್‌ ವಿಮೆಯೂ ಇಲ್ಲ
ಕೋವಿಡ್ ನಿಯಂತ್ರಣದ ಜತೆಗೆ ಗ್ರಾಮ ಮಟ್ಟದಲ್ಲಿ ಸಾಮಾಜಿಕ ಅಂತರ ಪಾಲನೆ, ಕಂಟೈನ್‌ಮೆಂಟ್‌ ವ್ಯಾಪ್ತಿಗಳಿಗೆ ಆಹಾರ ಸಾಮಗ್ರಿ ತಲುಪಿಸುವುದು ಸಹಿತ ಕಸ ನಿರ್ವಹಣೆ, ಎಸ್‌ಎಲ್‌ಆರ್‌ಎಂ, ಎನ್‌ಆರ್‌ಎಲ್‌ಎಂಗಳ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ಕುಡಿಯುವ ನೀರು ಸರಬರಾಜು, ನಮೂನೆ 9/11 ಸಹಿತ ಹಲವು ಕೆಲಸಗಳನ್ನೂ ಇದರ ಜತೆಗೆ ಮಾಡಬೇಕಾಗುವ ಜವಾಬ್ದಾರಿಯಿದೆ. ಇಷ್ಟೆಲ್ಲ ಕರ್ತವ್ಯ ಸ್ಥಳೀಯವಾಗಿ ನಿಭಾಯಿಸುತ್ತಿ ದ್ದರೂ ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾ. ಪಂ. ನೌಕರರನ್ನು ರಾಜ್ಯ ಸರಕಾರ ಕೋವಿಡ್‌ ವಿಮೆ ವ್ಯಾಪ್ತಿಯೊಳಗೆ ತಂದಿಲ್ಲ. ಇದರಿಂದ ಭಯಭೀತರಾಗಿ ಕೆಲಸ ಮಾಡಬೇಕಾದ ಆತಂಕ ಎದುರಾಗಿದೆ.

ನಿರಂತರ ಕೆಲಸ
ಲಾಕ್‌ಡೌನ್‌ ಅವಧಿಯಲ್ಲಿಯೂ ಮಹಿಳಾ ಪಿಡಿಒ-ನೌಕರರು, ಸಿಬಂದಿ ಸೌಕರ್ಯದ ಕೊರತೆಯಿಂದಾಗಿ ತೀವ್ರ ಸಮಸ್ಯೆ ಎದುರಿಸಿದ್ದರು. ಮಹಿಳಾ ಪಿಡಿಒಗಳೂ ಹೆಚ್ಚುವರಿ ಕೆಲಸ ನಿರ್ವಹಿಸುತ್ತಿದ್ದಾರೆ. 50 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಆರೋಗ್ಯ ಸಮಸ್ಯೆಎದುರಿಸುತ್ತಿರುವವರು ಸಹ ಯಾವುದೇ ರಜೆಯನ್ನು ಪಡೆಯದೆ ನಿರಂತರ ಕರ್ತವ್ಯ ನಿರ್ವಹಿಸಿದ್ದಾರೆ.

ಪಿಡಿಒಗಳ ಕರ್ತವ್ಯ
ಸರಕಾರದ ಮಾರ್ಗಸೂಚಿಯಂತೆ ಪಿಡಿಒಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾಗೆ ಸಂಬಂಧಪಟ್ಟ ಕೆಲಸದ ಜತೆಗೆ ಇತರ ಸ್ಥಳೀಯ ಮಟ್ಟದ ಕೆಲಸಗಳನ್ನು ನಿಭಾಯಿಸುವುದು ಪಿಡಿಒಗಳ ಕರ್ತವ್ಯವಾಗಿದೆ.
– ಪ್ರೀತಿ ಗೆಹಲೋಟ್‌, ಜಿ.ಪಂ.ಸಿಇಒ

Advertisement

ಸ್ಪಂದಿಸುವ ವಿಶ್ವಾಸ
ಕೋವಿಡ್‌ ಕೆಲಸ ಮುಗಿಯುವವರೆಗೆ ಗ್ರಾ.ಪಂ.ನ ನಿತ್ಯ ಕೆಲಸ, ಕೋವಿಡ್‌ಗೆ ಸಂಬಂಧಿಸಿದ ಕೆಲಸ ಹೊರತುಪಡಿಸಿ ಇತರ ಕೆಲಸಗಳ ಕುರಿತು ಸಭೆ ನಡೆಸದಂತೆ ಸಿಇಒಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ.
-ಮಂಜುನಾಥ್‌ ಪಿ. ಶೆಟ್ಟಿ, ಅಧ್ಯಕ್ಷರು, ರಾಜ್ಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ಉಡುಪಿ ಜಿಲ್ಲಾ ಘಟಕ

Advertisement

Udayavani is now on Telegram. Click here to join our channel and stay updated with the latest news.

Next