Advertisement
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳಗಳು ಮತ್ತು ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡದ್ದರಿಂದ ಹಲವರನ್ನು ರಕ್ಷಿಸಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.
ಹೀಗೆ ತನ್ನ ಪ್ರಾಣದ ಹಂಗನ್ನೂ ತೊರೆದು ಧಗಧಗಿಸಿ ಉರಿಯುತ್ತಿದ್ದ ಆ ಕಟ್ಟಡದ ಒಳಭಾಗಕ್ಕೆ ನುಗ್ಗಿ ಅಲ್ಲಿ ಹೊಗೆಯ ಕಾರಣದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದವರನ್ನು ರಕ್ಷಣಾ ತಂಡದ ಸಹಾಯದಿಂದ ಹೊತ್ತುಕೊಂಡೇ ಬಂದು ಆ್ಯಂಬುಲೆನ್ಸ್ ಗೆ ತುಂಬುತ್ತಿದ್ದ ಆ ದಿಟ್ಟ ಅಧಿಕಾರಿಯ ಹೆಸರು ರಾಜೇಶ್ ಶುಕ್ಲಾ. ಅಗ್ನಿ ದುರಂತ ಸಂಭವಿಸಿರುವ ವಿಷಯ ತಿಳಿದು ಶುಕ್ಲಾ ಅವರು ಘಟನಾ ಸ್ಥಳಕ್ಕೆ ತಲುಪಿದ ಸಂದರ್ಭದಲ್ಲಿ ಕಟ್ಟಡದ ಎರಡನೇ ಮಹಡಿಯಲ್ಲಿ ಒಂದಷ್ಟು ಜನ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಅಲ್ಲಿದ್ದವರು ಅವರಿಗೆ ನೀಡುತ್ತಾರೆ.
Related Articles
Advertisement
ಆ ಇಬ್ಬರನ್ನು ತಕ್ಷಣವೇ ತನ್ನ ಜೊತೆಯಲ್ಲಿ ಹೊರಬರಲು ತಿಳಿಸಿದ ರಾಜೇಶ್ ಶುಕ್ಲಾ ಇತರರನ್ನು ರಕ್ಷಣಾ ಕಾರ್ಯಾಚರಣಾ ತಂಡದವರ ಜೊತೆಯಲ್ಲಿ ಹೊತ್ತುಕೊಂಡು ಹೊರಬರಲಾಯಿತು. ಹೀಗೆ ಪ್ರಥಮ ಹಂತದ ಕಾರ್ಯಾಚರಣೆಯಲ್ಲಿ ಶುಕ್ಲಾ ಅವರು ಪ್ರಜ್ಞಾಹೀನರಾಗಿದ್ದ 12 ಜನರನ್ನು ರಕ್ಷಿಸಿದರು.
ಕಿರಿದಾದ ಆ ಪ್ರದೇಶದಲ್ಲಿ ಅಗ್ನಿಶಾಮಕ ದಳದ ವಾಹನಗಳು ಆಗಾಗಲೇ ಕಾರ್ಯಾಚರಣೆಗೆ ಇಳಿದಿದ್ದ ಕಾರಣ ಆ್ಯಂಬುಲೆನ್ಸ್ ಗಳು ಗಲ್ಲಿಯೊಳಗೆ ಪ್ರವೇಶಿಸುವಂತಿರಲಿಲ್ಲ. ಹೀಗಾಗಿ ಶುಕ್ಲಾ ಮತ್ತು ರಕ್ಷಣಾ ತಂಡದವರು ಸಂತ್ರಸ್ತರನ್ನು ಹೊತ್ತುಕೊಂಡೇ ಮುಖ್ಯ ರಸ್ತೆಯವರೆಗೆ ಬಂದು ಅಲ್ಲಿಂದ ಆ್ಯಂಬುಲೆನ್ಸ್ ನಲ್ಲಿ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸುತ್ತಿದ್ದರು.
ರಾಜೇಶ್ ಶುಕ್ಲಾ ಅವರು ಮತ್ತೆ ಎರಡನೇ ಸಲ ದುರಂತ ಕಟ್ಟಡದ ಸಮೀಪಕ್ಕೆ ಬಂದಾಗ ಕಟ್ಟಡದೊಳಗೆ ಇನ್ನಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಸಿಗುತ್ತದೆ. ಈ ಸಂದರ್ಭದಲ್ಲಿ ಬೆಂಕಿ ತನ್ನ ರುದ್ರನರ್ತನವನ್ನು ಪ್ರಾರಂಭಿಸಿಯಾಗಿತ್ತು. ಆದರೂ ಹೇಗೋ ಅವರು ಅದನ್ನು ನಿವಾರಿಸಿಕೊಂಡು ಒಳನುಗ್ಗುತ್ತಾರೆ. ಆಗ ಕೋಣೆಯೊಂದರಲ್ಲಿ ಸುಮಾರು 30 ಜನರು ಪ್ರಜ್ಞಾಹೀನರಾಗಿ ಬಿದ್ದಿರುವುದು ಅವರ ಕಣ್ಣಿಗೆ ಬೀಳುತ್ತದೆ.
ಅವರಲ್ಲಿ ಕೆಲವರನ್ನು ರಕ್ಷಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಬಹಳಷ್ಟು ಹೊಗೆಯನ್ನು ಸೇವಿಸಿದ್ದರಿಂದ ರಾಜೇಶ್ ಶುಕ್ಲಾ ಅವರು ಅಸ್ವಸ್ಥಗೊಳ್ಳುತ್ತಾರೆ ಮತ್ತು ಅವರ ಮಂಡಿಚಿಪ್ಪಿಗೂ ಸಹ ಘಾಸಿಯಾಗಿರುತ್ತದೆ. ಆ ಬಳಿಕ ಅವರನ್ನು ಲೋಕ ನಾಯಕ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಅಲ್ಲಿ ಅವರಿಗೆ ಆಮ್ಲಜನಕ ಪೂರೈಕೆ ಮಾಡಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗುತ್ತದೆ. ಇದೀಗ ಶುಕ್ಲಾ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ.
ಒಟ್ಟಿನಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಹನ್ನೆರಡು ಅಮೂಲ್ಯ ಜೀವಗಳನ್ನು ಉಳಿಸುವಲ್ಲಿ ನೆರವಾದ ಸರಕಾರಿ ಅಧಿಕಾರಿ ರಾಜೇಶ್ ಶುಕ್ಲಾ ಅವರ ಈ ಕಾರ್ಯಕ್ಕೆ ಇದೀಗ ಪ್ರಶಂಸೆ ವ್ಯಕ್ತವಾಗುತ್ತಿದೆ.