ಬೆಂಗಳೂರು: ರಾಜ್ಯದಲ್ಲಿನ ಮಳೆ ಹಾನಿ ಪರಿಹಾರಕ್ಕೆ 55 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್.ಅಶೋಕ್ ಹೇಳಿದರು.
ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಮುಂಗಾರು ಮಳೆಯಾಗುತ್ತಿದ್ದು ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಮಾನವ ಹಾನಿ, ಜಾನುವಾರು ಜೀವ ಹಾನಿ, ಬೆಳೆಹಾನಿ, ಮನೆ ಹಾನಿ ಹಾಗೂ ಸಾರ್ವಜನಿಕ ಮೂಲಸೌಕರ್ಯ ಹಾನಿಯಾಗಿದೆ. ಹಾಗಾಗಿ ಹೆಚ್ಚುವರಿಯಾಗಿ ಜಿಲ್ಲಾಧಿಕಾರಿಗಳ ಖಾತೆಗೆ ಕಂದಾಯ ಇಲಾಖೆಯಿಂದ (ವಿಪತ್ತು ನಿರ್ವಹಣಾ ಪ್ರಾಧಿಕಾರ) 55 ಕೋಟಿ ಬಿಡುಗಡೆ ಮಾಡಿದ್ದೇನೆ. ಇದರಿಂದ ಪರಿಹಾರ ಕಾರ್ಯಕ್ಕೆ ಇನ್ನಷ್ಟು ಅನುಕೂಲ ಆಗಲಿದೆ ಎಂದರು.
ಸರ್ಕಾರ ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ. ಈಗಾಗಲೇ 680.59 ಕೋಟಿ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇತ್ತು. ಈಗ 55 ಕೋಟಿ ಬಿಡುಗಡೆ ಮಾಡಿದ್ದು, ಒಟ್ಟು 735.59 ಕೋಟಿ ಹಣ ಲಭ್ಯವಿದೆ ಎಂದರು.
ಇದನ್ನೂ ಓದಿ:ಜಗನ್ ಮೋಹನ್ ರೆಡ್ಡಿಯನ್ನು ಬಿಟ್ಟು ಪುತ್ರಿ ಶರ್ಮಿಳಾ ನೆರವಿಗೆ ಬಂದ ವಿಜಯಮ್ಮ
ಎರಡು ದಿನಗಳ ಮಡಿಕೇರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಳೆಯಿಂದ ಆದ ಸಮಸ್ಯೆ ಹಾಗೂ ಲಘು ಭೂಕಂಪ, ಕಡಲ್ಗೊರತ ಆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದ್ದರು.