ಕಾರವಾರ: ಮರಾಠ ಸಮಾಜವನ್ನು ಪ್ರವರ್ಗ 2ಎ ಗೆ ಸೇರಿಸಿ ಎಂದು ಜಿಲ್ಲೆಯ ಮರಾಠ ಸಮಾಜದ ವತಿಯಿಂದ ಕಾರವಾರದಲ್ಲಿ ಬುಧುವಾರ ಸಾಂಕೇತಿಕ ಪ್ರತಿಭಟನೆ ಮಾಡಿ, ರಾಜ್ಯ ಸರ್ಕಾರಕ್ಕೆ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಮರಾಠ ಸಮಾಜದ 8 ಉಪ ವರ್ಗಗಳು 3 ಬಿ ಪಂಗಡದಲ್ಲಿವೆ. ಈ ಮರಾಠ ಉಪ ವರ್ಗಗಳನ್ನು 2 ಎ ಪಂಗಡಕ್ಕೆ ಸೇರಿಸಬೇಕು. ತಕ್ಷಣ ಈ ಸಂಬಂಧ ಕ್ರಮಗಳಾಗಬೇಕು . ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಕ್ಷತ್ರಿಯ ಮರಾಠ ಸಮಾಜದ ಜಿಲ್ಲಾಧ್ಯಕ್ಷ ಕುಮಾರ್ ಬೊಬಾಟೆ ಎಚ್ಚರಿಕೆ ನೀಡಿದರು. ಸರಕಾರಕ್ಕೆ ಮನವಿ ನೀಡಿದ ನಂತರ ಸಮುದಾಯದ ಮುಖಂಡರು ಹಾಗೂ ಪ್ರತಿಭಟನಾಕರರನ್ನು ಉದ್ದೇಶಿಸಿ ಮಾತನಾಡಿ ನಾವು ಏನನ್ನೇ ಪಡೆಯಲು ರಾಜಕೀಯ ನಾಯಕತ್ವ ಅಗತ್ಯ. ನಾವೇ ರಾಜಕೀಯ ಪ್ರಾತಿನಿಧ್ಯ ಪಡೆದರೆ ನಮ್ಮ ಬೇಡಿಕೆಗಳಿಗೆ ಯಾರ ಮುಂದೆಯೂ ಕೈಯೊಡ್ಡ ಬೇಕಿಲ್ಲ ಎಂದರು. ಮರಾಠರು ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಒಗ್ಗಟ್ಟಾಗುವ ಕಾಲ ಬಂದಿದೆ ಎಂದು ಅವರು ನುಡಿದರು. ಇನ್ನು ಹೋರಾಟಕ್ಕೆ ತಯಾರಾಗೋಣ. ಇವತ್ತಿನದು ಮೊದಲ ಹೆಜ್ಜೆ ಎಂದರು.
ಮರಾಠ ಸಮುದಾಯ ಬೇರೆ. ಮರಾಠಿ ಭಾಷೆ ಬೇರೆ. ಕನ್ನಡ ನಮ್ಮ ವ್ಯವಹಾರದ ಭಾಷೆ. ಮರಾಠಿ ಮನೆ ಭಾಷೆ. ಆದರೆ ಎಲ್ಲಾ ಭಾಷೆ ಮಾತನಾಡುವ ಮರಾಠ ಸಮುದಾಯವಿದೆ. ಅವರನ್ನು ಸಮುದಾಯದ ದೃಷ್ಟಿಯಿಂದ ಒಗ್ಗೂಡಿಸಬೇಕು. ಕರ್ನಾಟಕದಲ್ಲಿ ಇರುವ ಲಕ್ಷಾಂತರ ಮರಾಠ ಸಮುದಾಯ ಒಗ್ಗೂಡಿಸಿ ರಾಜಕೀಯ ಪ್ರಾತಿನಿಧ್ಯ ಪಡೆಯಬೇಕು ಎಂದರು.
ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ
ಮರಾಠ ಸಮಾಜದ ಮುಖಂಡ ಎಲ್.ಟಿ.ಪಾಟೀಲ್ ಮಾತನಾಡಿ ಯಡಿಯೂರಪ್ಪ ಮುಖ್ಯಮಂತ್ರಿಯಾದ 24 ಗಂಟೆಯಲ್ಲಿ ಮರಾಠ ಸಮಾಜವನ್ನು 2 ಎ ಗುಂಪಿಗೆ ಸೇರಿಸುವ ಮಾತು ಕೊಟ್ಟಿದ್ದರು. ಆದರೆ ಮಾತು ಉಳಿಸಿಕೊಳ್ಳಲಿಲ್ಲ. ಬೊಮ್ಮಾಯಿ ಅವರು ನಮ್ಮ ಸಮಾಜದತ್ತ ತಿರುಗಿ ನೋಡಿಲ್ಲ.ಮರಾಠ ಸಮಾಜವನ್ನು ಮರಳಿ ಒಗ್ಗೂಡಿಸೋಣ. ಅದಕ್ಕಾಗಿ ನಾನು ರಾಜ್ಯ ಸುತ್ತಲು ಸಿದ್ದ ಎಂದರು. ನಮ್ಮನ್ನು ಇತ್ತ ಬಿಜೆಪಿಗರು ನಂಬುತ್ತಿಲ್ಲ. ನಮ್ಮನ್ನು ಕಾಂಗ್ರೆಸ್ ನವರು ಎಂದು ಬಿಂಬಿಸಲಾಗಿದೆ. ಕಾಂಗ್ರೆಸ್ ನವರು ನಮ್ಮನ್ನು ಬಿಜೆಪಿಯವರಂತೆ ಕಾಣುತ್ತಾರೆ. ಇದು ನಮ್ಮ ಸಂಕಟ. ನಮಗೆ ನಾವೇ ಈಗ ನಾಯಕರಾಗಬೇಕಿದೆ. ಘೋರ್ಪಡೆ ಕಾಲಕ್ಕೆ ಸಮಾಜ ಒಗ್ಗೂಡಲಿಲ್ಲ. ಪಿ.ಜಿ.ಆರ್ .ಸಿಂಧ್ಯಾ ಅವರ ಪ್ರಯತ್ನವೂ ಸಾಕಗಲಿಲ್ಲ. ಈಗ ನಾವು ಮತ್ತೆ ಪ್ರಯತ್ನಿಸೋಣ ಎಂದರು.
ಮರಾಠ ಸಮಾಜದ ರಾಜ್ಯ ಉಪಾಧ್ಯಕ್ಷ ನಾಗೇಂದ್ರ ಜೋವೂಜಿ ಮಾತನಾಡಿ, ನಮ್ಮ ಮೊದಲ ಬೇಡಿಕೆ 2 ಎ ಸಮಾಜಕ್ಕೆ ಸೇರ್ಪಡೆಯಾಗುವುದು. ನಾವು ಕೇಂದ್ರ , ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ ಎಂದರು.
ಎಸ್.ಕೆ.ಗೌಡ ಮಾತನಾಡಿ ಮರಾಠ ಸಮಾಜ ಒಗ್ಗೂಡಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಇದು ಸಕಾಲ. ನಮ್ಮ ಸಮಾಜದ ವ್ಯಕ್ತಿಗೆ ಚುನಾವಣೆಯಲ್ಲಿ ಬೆಂಬಲ ನೀಡಬೇಕಿದೆ ಎಂದರು.
ಮರಾಠ ಸಮಾಜದ ಮುಖಂಡರು ಸಭೆಯಲ್ಲಿ ಮಾತನಾಡಿ ಸರ್ಕಾರ ಮರಾಠರನ್ನು ನಿರ್ಲಕ್ಷಿಸಿದೆ ಎಂದು ಕಿಡಿಕಿಡಿಯಾದರು. ಸಮಾಜದ ಮುಖಂಡರಾದ ಉಡಚಪ್ಪ ಬೊಬಾಟೆ, ಸುಭಾಷ್ , ಮಹೇಶ್ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು. ಮನವಿ ನೀಡಿಕೆಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಹ ಎಲ್ .ಟಿ.ಪಾಟೀಲ್ ಮಾತನಾಡಿ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ, ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಲಾಗಯವುದು ಎಂದರು.ವೀರ ಮರಾಠ ಸೇನಾ ಪದಾಧಿಕಾರಿಗಳು ಉಪಸ್ಥಿತರಿದ್ದರು.