Advertisement

ಕೆಕೆಆರ್ ಟಿಸಿ ಗೆ 802 ಬಸ್ ಸೇರ್ಪಡೆ: 28ರಂದು ಸೇಡಂದಲ್ಲಿ ಲೋಕಾರ್ಪಣೆ

02:37 PM Mar 26, 2023 | Team Udayavani |

ಕಲಬುರಗಿ: ಬಸ್ ಅಭಾವ ಎದುರಿಸುತ್ತಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಹೊಸದಾಗಿ 802 ಬಸ್ ಗಳ ಸೇರ್ಪಡೆಯಾಗಿವೆ ಎಂದು ನಿಗಮದ ಅಧ್ಯಕ್ಷರಾಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.

Advertisement

ನಿಗಮದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 330 ಕೋ.ರೂ ವೆಚ್ಚದಲ್ಲಿ ಬಸ್ ಗಳ ಖರೀದಿ ಮಾಡಿ ನಿಗಮ ಕ್ಕೆ ಸೇರಿಸಲಾಗಿದೆ. ಹೊಸ ಬಸ್ ಗಳನ್ನು ಇದೇ ಮಾಚ್೯ 28 ರಂದು ಸಾರಿಗೆ ಸಚಿವ ಶ್ರೀ ರಾಮುಲು ಚಾಲನೆ ನೀಡುವರು ಎಂದು ವಿವರಿಸಿದರು.

ಹೊಸ ಬಸ್ ಗಳ ಸೇರ್ಪಡೆಯಿಂದ ಬಸ್ ಗಳ ಕೊರತೆ ನಿವಾರಣೆ ಯಾಗಲಿದ್ದು, ಗ್ರಾಮೀಣ ಭಾಗಕ್ಕೆ ಸಾರಿಗೆ ಸೇವೆ ಮತ್ತಷ್ಟು ವಿಸ್ತರಿಸಲಾಗಲಿದೆ. 802 ಬಸ್ ಗಳಲ್ಲಿ 6ವೋಲ್ವೋ, 40 ಎಸಿ ಸ್ಲೀಪರ್ ಬಸ್ ಗಳಿದ್ದು, ಒಟ್ಟಾರೆ ಎಲ್ಲ ಹೊಸ ಬಸ್ ಗಳು ಅತ್ಯಾಧುನಿಕ ತಾಂತ್ರಿಕತೆ ಹೊಂದಿವೆ ಎಂದು ತಿಳಿಸಿದರು.

ಸಾವಿರ ಕೋ.ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ: ಇದೇ ಮಾಚ್೯ 28ರಂದು ಬೆಳಿಗ್ಗೆ 11ಕ್ಕೆ ಸೇಡಂ ವಿಧಾನಸಭಾ ಕ್ಷೇತ್ರದ ಸಾವಿರ ಕೋ.ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಸಚಿವರು ನೆರವೇರಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಶಾಸಕ ತೇಲ್ಕೂರ ತಿಳಿಸಿದರು.

ಕಾಗಿಣಾ ಏತ ನೀರಾವರಿಗೆ ಅಡಿಗಲ್ಲು

Advertisement

ಬಹು ದಶಕಗಳ ಬೇಡಿಕೆಯಾದ ಕಾಗಿಣಾ ಏತ ನೀರಾವರಿ ಯೋಜನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾ. 28 ರಂದು ಅಡಿಗಲ್ಲು ನೆರವೇರಿಸುವರು.

160 ಕೋ. ರೂ ವೆಚ್ಚದ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದ್ದು, ಈ ಯೋಜನೆಯಿಂದ 40 ಹಳ್ಳಿಗಳ 75 ಸಾವಿರ ಎಕರೆ ಭೂಮಿ ನೀರಾವರಿಯಾಗಲಿದೆ. 650 ಕೋ.ರೂ ವೆಚ್ಚದ ಈ ಯೋಜನೆ ಸಾಕಾರಗೊಳಿಸದೇ ಹಾಗೆ ಬರಲಾಗಿತ್ತು. ಆದರೆ ತಾವು ಬಂದ ಮೇಲೆ ಚಾಲನೆ ದೊರಕಿರುವುದು ನಿಜಕ್ಕೂ ಒಂದು ಮೈಲುಗಲ್ಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೂ ಚಾಲನೆ: ಮನೆ- ಮನೆಗೆ ನೀರು ಯೋಜನೆಯ ಮಾದರಿಯಂತೆ ಹರ ಖೇತ ಕೊ ಪಾನಿ ಯೋಜನೆಗೂ ಅಂದರೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್ ವೈ- ಎಚ್ ಕೆಕೆಪಿ) 93 ಕೋ.ರೂ ವೆಚ್ಚದ 28 ಬ್ಯಾರೇಜ್ ಗಳ ನಿರ್ಮಾಣ ಕಾರ್ಯಕ್ಕೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅಡಿಗಲ್ಲು ನೆರವೇರಿಸುವರು.

ಕಲಬುರಗಿ- ಯಾದಗಿರಿ ಜಿಲ್ಲೆಯ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ಹೊಲಕ್ಕೆ ನೀರು ಕಲ್ಪಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು,ಸೇಡಂ ತಾಲೂಕಿನ ಕಮಲಾವತಿ ನದಿಗೆ ದೇವನೂರ ಗ್ರಾಮದ ಬಳಿ ಕಾಲುವೆ‌ ಮೂಲಕ ಹೊಲ ಕ್ಕೆ ನೀರು ಹರಿಸುವ ಕಾಮಗಾರಿ ಗೆ ಹಾಗೂ ತೊಟ್ನಳ್ಳಿ- ಸಂಗಾವಿ ಗ್ರಾಮದ ನಡುವೆ ತಲಾ 7.32 ಕೋ.ರೂ ವೆಚ್ಚದ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಿ ಕಾಲುವೆ ‌ಮೂಲಕ ಹೊಲಗಳಿಗೆ ನೀರುಣಿಸುವ, ಅದೇ ರೀತಿ ಕಾಚಾವರ ಗ್ರಾಮದ ಬಳಿ 2.58 ಕೋ.ರೂ ಮೊತ್ತದ ಕಾಮಗಾರಿ, ಚಂದಾಪುರ ಗ್ರಾಮ್ ಮಲ್ಲಿಕಾರ್ಜುನ ದೇವಾಲಯ ಹತ್ತಿರ 2.81 ಕೋ.ರೂ ಮೊತ್ತದ ಕಾಮಗಾರಿ ಸೇರಿ ಒಟ್ಟಾರೆ 28 ಕಾಮಗಾರಿಗಳಿಗೆ 138 ಕೋ.ರೂ ಮೊತ್ತದ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡುವರು.

ಹೊಲದ ಪಕ್ಕದಲ್ಲೇ ಇರುವ ಹಳ್ಳ ಕೊಳ್ಳಗಳು, ಬ್ಯಾರೇಜ್, ಕೆರೆ ಕಾಲುವೆಗಳ ಮೂಲಕ ಹೊಲ ಕ್ಕೆ ನೀರು ಹರಿಸಿ ಚಿಕ್ಕ ಪುಟ್ಟ ಬೆಳೆಗಳನ್ನು ಬೆಳೆಯುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ ಎಂದರು.

ಅದಲ್ಲದೇ ಸನ್ನತಿ ಬ್ಯಾರೇಜ್ ದಿಂದ ಸೇಡಂ ತಾಲೂಕಿನ 54 ಕೆರೆಗಳಿಗೆ ನೀರು ತುಂಬುವ 592 ಕೋ.ರೂ ವೆಚ್ಚದ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ. ‌ಈಯೋಜನೆಯೂ ಮುಂದಿನ ದಿನಗಳಲ್ಲಿಕಾರ್ಯಾನುಷ್ಡಾನಗೊಳ್ಳಲಿದೆ ಎಂದರು.

ಸೇಡಂದಲ್ಲಿ ಬಸವಣ್ಣನವರ, ಅಂಬಿಗರ ಚೌಡಯ್ಯ, ಸಂಗೋಳಿ ರಾಯಣ್ಣ, ಮಾದಾರ ಚನ್ನಯ್ಯ, ಶಿವಾಜಿ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆಯಲ್ಲದೇ ದೇವಾಲಯ ಅಭಿವೃದ್ಧಿ ಗಳಿಗಾಗಿ 20 ಕೋ.ರೂ ಖರ್ಚು ಮಾಡಲಾಗಿದೆ. ‌ಕೊರೊನಾ ನಡುವೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಒಟ್ಟಾರೆ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಶ್ವೇತ ಪತ್ರದ ಪುಸ್ತಕವೊಂದನ್ನು ಹೊರ ತರಲಾಗುತ್ತಿದೆ. ಇದನ್ನು ಎಲ್ಲರಿಗೂ ವಿತರಿಸಲಾಗುವುದು ಎಂದು ರಾಜಕುಮಾರ ಪಾಟೀಲ್ ತೇಲ್ಕೂರ ಇದೇ ಸಂದರ್ಭದಲ್ಲಿ ತಿಳಿಸಿದರು. ಕೆಕೆಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಹಾಗೂ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next