ಹೈದರಾಬಾದ್: ಆಂಧ್ರ ಪ್ರದೇಶವು ರಾಜ್ಯವು 13 ಹೊಸ ಜಿಲ್ಲೆಗಳ ಸೇರ್ಪಡೆಯೊಂದಿಗೆ ತನ್ನ ಜಿಲ್ಲೆಗಳ ಸಂಖ್ಯೆಯನ್ನು 26 ಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ಈ ಬಗ್ಗೆ ಶನಿವಾರ ರಾತ್ರಿ ಅಧಿಸೂಚನೆ ಹೊರಡಿಸಲಾಗಿದೆ.
ಆಂಧ್ರಪ್ರದೇಶದಲ್ಲಿ ಹೊಸ ಜಿಲ್ಲೆಗಳ ರಚನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು 13 ಹೊಸ ಜಿಲ್ಲೆಗಳನ್ನು ಸೋಮವಾರ ಉದ್ಘಾಟಿಸಲಿದ್ದಾರೆ.
ಅಧಿಸೂಚನೆ ಹೊರಡಿಸಿದ ಕೂಡಲೇ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಪುನರ್ರಚಿಸಿ ಹೊಸದಾಗಿ ರಚಿಸಲಾದ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸಿದೆ.
ಇದನ್ನೂ ಓದಿ:ಮುಂದಿನ ಚುನಾವಣೆ ವೇಳೆಗೆ ಬಿಜೆಪಿಗೆ ಸೇರುತ್ತೇನೆ: ಬಸವರಾಜ ಹೊರಟ್ಟಿ
“ಈ ಮಹತ್ವದ ದಿನದಂದು ಜನರು ತೊಡಗಿಸಿಕೊಳ್ಳಲು ಸಾಧ್ಯವಾಗುವಂತೆ ಮುಖ್ಯಮಂತ್ರಿಗಳು ಜಿಲ್ಲಾ ಪೋರ್ಟಲ್‌ಗಳು ಮತ್ತು ಕೈಪಿಡಿಗಳನ್ನು ಬಿಡುಗಡೆ ಮಾಡುತ್ತಾರೆ” ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
“ಮುಖ್ಯಮಂತ್ರಿ ಜಗನ್ ಅವರು ಕಚೇರಿ ಹಂಚಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಧಿಕಾರಿಗಳು ಏಪ್ರಿಲ್ 4 ರಂದು ಜಿಲ್ಲಾ ಕಚೇರಿಯಲ್ಲಿರಬೇಕು ” ಎಂದು ಪ್ರಕಟಣೆ ತಿಳಿಸಿದೆ.