Advertisement

ವೃದ್ಧಾಶ್ರಮಕ್ಕೆ ಸೇರಿಸಿ ಪುಣ್ಯಕಟ್ಟಿಕೊಳ್ಳಿ!

02:37 PM Feb 03, 2018 | |

ಔರಾದ: ಗಬ್ಬೆದ್ದು ನಾರುವ ಕೋಣೆಯಲ್ಲಿ, ನಾರುವ ಬಟ್ಟೆಗಳನ್ನು ಹಾಕಿಕೊಂಡ ಹಿರಿಯ ಜೀವವೊಂದು ವೃದ್ಧಾಶ್ರಮದ ದಾರಿಯನ್ನು ನೋಡುತ್ತಿದೆ. ಈ ಹಿರಿಯ ಜೀವಕ್ಕೆ ಮಾಸಾಶನವೂ ಮಂಜೂರಾಗಿದೆ. ಮನೆಯೂ ಮಂಜೂರಾಗಿದೆ. ಆದರೆ ಇವೆಲ್ಲವನ್ನು ಬಳಸಿ ಜೀವನ ಸಾಗಿಸುವಂತಹ ಶಕ್ತಿ, ಚೈತನ್ಯ ಈ ಹಿರಿಯ ಜೀವಕ್ಕಿಲ್ಲ. 

Advertisement

ಈತನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಪುಣ್ಯಕಟ್ಟಿಕೊಳ್ಳಿ ಎಂದು ಸಾರ್ವಜನಿಕರು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಇವರ ಹೆಸರು ಜಾನಿಮಿಯ್ನಾ ನನ್ನೆಸಾಬ್‌. ಇವರಿಗೀಗ 75 ವರ್ಷ ವಯಸ್ಸು. ಇವರು ಮೂಲತಃ ಗಡಿಕುಶನೂರ ಗ್ರಾಮದವರು. ಕಳೆದ ಹತ್ತು ವರ್ಷಗಳ ಹಿಂದೆ ಇವರ ಪತ್ನಿ ಮೃತಪಟ್ಟಿದ್ದಾರೆ. ಮಕ್ಕಳು ಇಲ್ಲ.  ಇವರ ಸ್ಥಿತಿಯನ್ನು ಗಮನಿಸಿ ಕೌಠಾ ಗ್ರಾಪಂನವರು ಗ್ರಾಮಸಭೆಯಲ್ಲಿ ಐದು ವರ್ಷಗಳ ಹಿಂದೆ ಮನೆ ಮಂಜೂರು ಮಾಡಿ, ನಿರ್ಮಿಸಿಕೊಟ್ಟಿದ್ದಾರೆ. ಈ ಮನೆಯಲ್ಲೇ ಜಾನಿಮಿಯ್ನಾ ವಾಸವಾಗಿದ್ದಾರೆ. ಅಂದಿನ ತಹಶೀಲ್ದಾರ್‌ ಜಗನ್ನಾಥ ರೆಡ್ಡಿ ಎನ್ನುವವರು 500ರೂ. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ತಾಲೂಕು ಯೋಜನಾಧಿಕಾರಿ ಮಹಾಂತೇಶ ಒಂದು ಸಾವಿರ ರೂ. ಮಾಸಾಶನ ಮಂಜೂರು ಮಾಡಿಸಿದ್ದಾರೆ. ಆದರೆ ಊಟೋಪಚಾರಕ್ಕಾಗಿ ಯಾರೂ ಇಲ್ಲದೇ ಇರುವುದರಿಂದ ಇವರು ಗ್ರಾಮಸ್ಥರಿಂದಲೇ ಆಹಾರ ಕೇಳಿ ಪಡೆಯುತ್ತಿದ್ದಾರೆ. ಆದರೆ ಇವರ ಕೊಳಕು ಬಟ್ಟೆ, ನಾರುವ ಕೋಣೆ ಕಂಡು ಸಾರ್ವಜನಿಕರು ಸಹಾಯ ಮಾಡುವುದರಿಂದ ಹಿಂದಕ್ಕೆ ಸರಿಯುತ್ತಿದ್ದಾರೆ. ಇವರಿಗೆ ಬಂದ ಮಾಸಾಶನ ಏನು ಮಾಡಬೇಕು? ಎಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಪರಿಜ್ಞಾನವೂ ಇಲ್ಲ.

ಹರಿದ ಬಟ್ಟೆ-ಸಿಕ್ಕ ಆಹಾರ ಸೇವಿಸಿ ನಿತ್ಯ ಜೀವನ: ಸರ್ಕಾರಿ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಅವುಗಳಲ್ಲಿನ ಜಲ್ಲಿಕಲ್ಲು ಎದ್ದು ಕಾಣುತ್ತಿವೆ. ಇಂತಹ ಮನೆಯಲ್ಲೇ ನಡುಗುತ್ತ, ಜನರು ನೀಡಿದ ಆಹಾರ ತಿನ್ನುತ್ತ ದಿನ ದೂಡುತ್ತಿದ್ದಾರೆ ಜಾನಿಮಿಯ್ನಾ. ಕೆಲವೊಮ್ಮೆ ಸಿಕ್ಕ ಆಹಾರವನ್ನು ಇಲಿಗಳು ತೆಗೆದುಕೊಂಡು ಹೋಗಿ ಕಾಡುತ್ತಿವೆ. ಈ ಹಿರಿಯ ಜೀವಕ್ಕೀಗ ವೃದ್ಧಾಶ್ರಮದ ಅವಶ್ಯಕತೆಯಿದೆ. ಸಂಬಂಧಪಟ್ಟವರು ಕರೆದುಕೊಂಡು ಹೋಗಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

ವೃದ್ಧಾಶ್ರಮಕ್ಕೆ ಸೇರಿಸಿಕೊಳ್ಳಿ ಜಾನಿಮಿಯ್ನಾ ಅವರ ನಿತ್ಯದ ಕಷ್ಟ ನೋಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಹಾಗೂ ಸಂಸ್ಥೆಗಳು ಹಣ ನೀಡಿದರೂ ಉಪಯೋಗಿಸುವ ಸ್ಥಿತಿಯಲ್ಲಿ ಅವರಿಲ್ಲ. ಹೀಗಾಗಿ ವೃದ್ಧಾಶ್ರಮದವರು ಆಶ್ರಯ ನೀಡಲು ಮುಂದಾಗಬೇಕು ಎಂದು ಕಳಕಳಿಯ ಮನವಿ.
  ರಾಜೇಶ, ಗ್ರಾಮದ ಹಿರಿಯ ಮುಖಂಡ 

 ರವೀಂದ್ರ ಮುಕ್ತೇದಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next