Advertisement

ಬಿಜೆಪಿಯಿಂದ ಮತ್ತೆ ದೂರವಾಗುತ್ತಾ ಜೆಡಿಯು? ರಾಜಕೀಯ ವಲಯದಲ್ಲಿ ಚರ್ಚೆ

03:24 PM Aug 06, 2022 | Team Udayavani |

ಪಾಟ್ನಾ : ಬಿಜೆಪಿ ಮತ್ತು ಜೆಡಿಯು ನಡುವೆ ಮತ್ತೆ ಬಿರುಕು ಕಾಣಿಸಿಕೊಂಡಿದೆಯೇ ಎನ್ನುವ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಎದ್ದಿದ್ದು, ಇದಕ್ಕೆ ಬಿಹಾರ ರಾಜಕಾರಣದಲ್ಲಿ ನಡೆದ ಇತ್ತೀಚಿಗಿನ ಹಲವು ಬೆಳವಣಿಗೆಗಳು ಕಾರಣವಾಗಿವೆ.

Advertisement

ಜೆಡಿಯು ಮತ್ತೆ ಬಿಹಾರದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲು ಹವಣಿಸುತ್ತಿದ್ದು, ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅವರು ಕೆಲ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಚರ್ಚೆಯ ಕೇಂದ್ರ ಬಿಂದುವಾಗಿದೆ. ”ನಮ್ಮ ಪಕ್ಷ ಸಾಮರ್ಥ್ಯವನ್ನು ಮತ್ತೆ ಹೆಚ್ಚಿಸಿಕೊಳ್ಳುವತ್ತ ಕೆಲಸ ಮಾಡುತ್ತಿದ್ದು, 2020 ರ ವಿಧಾನಸಭಾ ಚುನಾವಣೆಯಲ್ಲಿ ಪಿತೂರಿಯಿಂದಾಗಿ ನಾವು ಗೆಲ್ಲುವ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಯಿತು” ಎಂದು ಹೇಳಿಕೆ ನೀಡಿ ಬಿಜೆಪಿಗೆ ಶಾಕ್ ನೀಡಿದ್ದರು.

ಈ ಪ್ರಸ್ತಾಪವನ್ನು ಅವರು ಎಲ್ ಜೆಪಿ ನಾಯಕ ಚಿರಾಗ್ ಪಾಸ್ವಾನ್ ಅವರನ್ನು ಉಲ್ಲೇಖಿಸಿ ನೀಡಿದ್ದು, ಜೆಡಿಯು ಅಭ್ಯರ್ಥಿಗಳ ಎದುರು ಎಲ್ ಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತವಿಭಜನೆಗೆ ಕಾರಣವಾಗಿದ್ದರು.ಆ ಪೈಕಿ ಹೆಚ್ಚಿನವರು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿದ್ದರು. ಇದರಿಂದಾಗಿ ಐದು ವರ್ಷಗಳ ಹಿಂದೆ 71 ವಿಧಾನಸಭಾ ಸ್ಥಾನ ಗೆದ್ದಿದ್ದ ಜೆಡಿಯು 43 ಕ್ಕೆ ಇಳಿದಿತ್ತು. ರಾಷ್ಟ್ರಪತಿ ಚುನಾವಣೆಗೂ ಮುನ್ನ ಎನ್ ಡಿಎ ಸಭೆಗೆ ಚಿರಾಗ್ ಪಾಸ್ವಾನ್ ಅವರನ್ನು ಬಿಜೆಪಿ ಕರೆದಿತ್ತು.

ಜೆಡಿಯು ಉನ್ನತ ನಾಯಕನ ಹೇಳಿಕೆಗಳು ವಿಪಕ್ಷಗಳಿಗೆ ಟೀಕಾಸ್ತ್ರವಾಗಿದ್ದು, ಆರ್ ಜೆಡಿ ವಕ್ತಾರ ಮೃತ್ಯುಂಜಯ ತಿವಾರಿ ಈ ಬಗ್ಗೆ ಪ್ರತಿಕ್ರಿಯಿಸಿ, ”ಎನ್ ಡಿಎಯಲ್ಲಿ ಎಲ್ಲವೂ ಸರಿಯಿಲ್ಲ, ಈ ಮಳೆಗಾಲದಲ್ಲಿ ನೆರೆಯಲ್ಲಿ ಅವರ ಹಡಗು ಮುಳುಗಲಿದೆ” ಎಂದಿದ್ದಾರೆ.

”ಸಮಾಜವಾದಿ ಸಿದ್ದಂತದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಿಂದುತ್ವ ಪ್ರತಿಪಾದಕ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಸಾಧ್ಯವಿಲ್ಲ” ಎಂದು ಮೃತ್ಯುಂಜಯ ತಿವಾರಿ ಹೇಳಿದ್ದಾರೆ.

Advertisement

”ಬಿಜೆಪಿಯೊಂದಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ಸ್ಪಷ್ಟವಾದ ಬಾಂಧವ್ಯ ಹೊಂದಿದ್ದು ಅನಗತ್ಯವಾದ ವಿಚಾರಗಳಿಂದ ದಿಗ್ಭ್ರಮೆಯಾಗುತ್ತಿದೆ” ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಹೇಳಿಕೆ ನೀಡಿದ್ದು, ”2024 ಮತ್ತು 2025 ರ ಚುನಾವಣೆ ಕುರಿತು ಈಗೇಕೆ ಚರ್ಚೆ ? ನಿತೀಶ್ ಕುಮಾರ್ ಅವರ ನಾಯಕತ್ವವನ್ನು ಎನ್ ಡಿಎ ಯಲ್ಲಿ ಯಾರೊಬ್ಬರೂ ಪ್ರಶ್ನಿಸುವವರಿಲ್ಲ” ಎಂದರು.

”1996 ರಿಂದ ಸಮತಾ ಪಕ್ಷವಿದ್ದ ವೇಳೆಯಲ್ಲೇ ಬಿಜೆಪಿ ನಿತೀಶ್ ಕುಮಾರ್ ಅವರೊಂದಿಗೆ ಮಿತ್ರತ್ವ ಹೊಂದಿತ್ತು. ಅವರ ಪಕ್ಷದಲ್ಲಿ ಇತರರು ಏನು ಹೇಳುತ್ತಾರೆ ಎನ್ನುವ ಕುರಿತು ನಾವು ಹೆಚ್ಚು ಯೋಚಿಸುವುದಿಲ್ಲ. ಬಿಜೆಪಿ ಯಾವಾಗಲೂ ನಿತೀಶ್ ಕುಮಾರ್ ಎನ್ ಡಿಎ ನಾಯಕ ಎಂದು ನಮ್ಮ ಪಕ್ಷ ಒಪ್ಪಿದೆ” ಎಂದು ಬಿಹಾರ ಬಿಜೆಪಿ ವಕ್ತಾರ ಪ್ರೇಮ್ ರಂಜನ್ ಪಟೇಲ್ ಹೇಳಿಕೆ ನೀಡಿದ್ದಾರೆ.

”ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟ ವಾದ ವೇಳೆ ನಮ್ಮ ಪಕ್ಷ ಕೊಟ್ಟ ಮಾತಿಗೆ ಬದ್ಧವಾಗಿ ನಡೆದುಕೊಂಡಿರುವುದನ್ನು ನೆನಪಿಸಿಕೊಳ್ಳಿ. ಯಾವ ಪಕ್ಷ ಎಷ್ಟು ಸ್ಥಾನ ಗೆದ್ದಿದೆ ಎನ್ನುವುದನ್ನು ನೋಡದೆ, ನಿತೀಶ್ ಅವರು ಸ್ಥಾನ ಬಿಡಲು ಸಿದ್ಧವಾಗಿದ್ದರೂ ಅವರನ್ನೇ ನಮ್ಮ ನಾಯಕ ಎಂದು ತೋರಿಸಿದ್ದೇವೆ” ಎಂದು ಪ್ರೇಮ್ ರಂಜನ್ ಪಟೇಲ್ ಹೇಳಿದರು.

”ರಾಷ್ಟ ಮಟ್ಟದಲ್ಲಿ ನರೇಂದ್ರ ಮೋದಿ ನಮ್ಮ ನಾಯಕ, ಬಿಹಾರ ದಲ್ಲಿ ನಿತೀಶ್ ನಮಗೆ ನಾಯಕ. ಅವರ ನೇತೃತ್ವದಲ್ಲಿ ಮೈತ್ರಿ ಮಾಡಿಕೊಂಡು ಮುಂದಿನ ಲೋಕಸಭಾ, ವಿಧಾನಸಭಾ ಚುನಾವಣೆಗಳನ್ನು ಎದುರಿಸುತ್ತೇವೆ” ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next