Advertisement

ಆದರ್ಶ ಮಕ್ಕಳಿಗೆ ಭಾರ ಹೊತ್ತೂಯ್ಯುವ ಭಾಗ್ಯ!

10:56 AM Jun 27, 2018 | |

„ಪಿ.ಸತ್ಯನಾರಾಯಣ
ಹೊಸಪೇಟೆ: ನಗರದ ಹೊರ ವಲಯದ ಜಂಬುನಾಥಹಳ್ಳಿಯಲ್ಲಿರುವ ಸರ್ಕಾರಿ ಆದರ್ಶ ಶಾಲೆಯ ಮಕ್ಕಳು ಪ್ರತಿನಿತ್ಯ ಒಂದು ಕಿ.ಮೀ.ಗೂ ಅಧಿಕ ದೂರ ಭಾರವಾದ ಪುಸ್ತಕದ ಚೀಲ ಹೊತ್ತೂಯ್ಯುವ ಭಾಗ್ಯ ಸರ್ಕಾರ ಕಲ್ಪಿಸಿದೆ.!

ಹೌದು, ಜಂಬುನಾಥಹಳ್ಳಿಯ ಆರ್‌ಎಂಎಸ್‌ಎ ಆದರ್ಶ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಸುಮಾರು 400 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.ಶಾಲೆ ಆರಂಭವಾಗಿ ತಿಂಗಳಾದರೂ ತಾಲೂಕಿನ ವಿವಿಧೆಡೆಗಳಿಂದ ಆಗಮಿಸುವ ವಿದ್ಯಾರ್ಥಿಗಳು ಭಾರವಾದ ಪುಸ್ತಕದ ಚೀಲ ಹೊತ್ತು ನಡೆದು 1 ಕಿ.ಮೀ. ದೂರ ಕ್ರಮಿಸಿ ಶಾಲೆಗೆ ಹೋಗುವುದು ತಪ್ಪಿಲ್ಲ.

Advertisement

ಕೇಂದ್ರ ಬಸ್‌ ನಿಲ್ದಾಣದಿಂದ ಜಂಬುನಾಥ ಬೈಪಾಸ್‌ ರಸ್ತೆಯವರೆಗೆ ನಗರಸಾರಿಗೆ ಬಸ್‌ ಸೌಲಭ್ಯವಿದೆ. ಆದರೆ ಬೈಪಾಸ್‌ ರಸ್ತೆಯಿಂದ 1 ಕಿ.ಮೀ. ದೂರದಲ್ಲಿ ಸರ್ಕಾರಿ ಆದರ್ಶ ಶಾಲೆ ಇದೆ. ಶಾಲಾ ಸಮಯಕ್ಕೆ ಸರಿಯಾಗಿ ಹೋಗುವ ಸಾರಿಗೆ ಬಸ್‌ ಬೈಪಾಸ್‌ನಲ್ಲೇ ನಿಲ್ಲಿಸುವುದರಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಬ್ಯಾಗಿನ ಭಾರ ತಾಳಲಾರದೆ ಅಲ್ಲಲ್ಲಿ ಕೂತು, ನಿಂತು, ಎತ್ತರ ಪ್ರದೇಶದಲ್ಲಿರುವ ಶಾಲೆಗೆ ಉಸಿರು ಕಟ್ಟುತ್ತಾ ನಡೆದು ಹೋಗುತ್ತಿರುವುದು ತಪ್ಪಿಲ್ಲ.

ಮಾತ್ರವಲ್ಲ, ಈ ಮಕ್ಕಳನ್ನು ನೋಡಿದವರಿಗೆ ಕರುಳು ಕಿವಿಚಿದಂತಾಗದೆ ಇರದು. ಹುಡುಗರು ಡ್ರಾಪಿಗಾಗಿ ದ್ವಿಚಕ್ರ ವಾಹನಗಳಿಗೆ ಕೈಯೆತ್ತಿ ಅಂಗಲಾಚುತ್ತಾರೆ. ಆದರೆ ವಿದ್ಯಾರ್ಥಿನೀಯರಂತು ಯಾರ ವಾಹನಕ್ಕೂ ಕೈ ಎತ್ತದೆ ನಡೆದು ಹೋಗುತ್ತಿರುವುದನ್ನು ನೋಡಿದವರು ಸರ್ಕಾರಕ್ಕೆ ಹಿಡಿಶಾಪ ಹಾಕದೆ ಇರಲಾರರು.

ಆದರ್ಶ ಶಾಲೆ ಆರಂಭಕ್ಕೂ ಒಂದು ಗಂಟೆ ಮೊದಲೇ ಮೊದಲ ಬಸ್‌ ಜಂಬುನಾಥಹಳ್ಳಿಗೆ ತೆರಳುತ್ತದೆ. ಎರಡನೇ ಬಸ್‌ ಬೈಪಾಸ್‌ ರಸ್ತೆಗೆ ಬಂದು ನಿಂತು ಪ್ರಯಾಣಿಕರಿಗಾಗಿ ಕಾದು.. ಕಾದು.. ಖಾಲಿ ಬಸ್‌ ಮರಳುತ್ತದೆ. ಮೂರನೇ ಬಸ್‌ ತರಗತಿ ಆರಂಭವಾದ ಮೇಲೆ ಜಂಬುನಾಥಹಳ್ಳಿಗೆ ಬರುತ್ತದೆ.

ಸಮಯಕ್ಕೆ ಸರಿಯಾಗಿ ಹೋಗುವ ಎರಡನೇ ಬಸ್ಸನ್ನೇ ಹತ್ತಿದ ಮಕ್ಕಳನ್ನು ಆದರ್ಶ ವಿದ್ಯಾಲಯದವರೆಗೆ ಬಸ್‌ ಪಾಸ್‌ ಇದ್ದರೂ ಬೈಪಾಸ್‌ ರಸ್ತೆಗೆ ಇಳಿಸಲಾಗುತ್ತಿದೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಬಸ್‌ ಚಾಲಕ ಮತ್ತು ಕಂಡಕ್ಟರ್‌ ಅವರನ್ನು ಕೇಳಿದರೆ ಬಸ್‌ ಇಲ್ಲಿಗೆ ಸ್ಟಾಪ್‌ ಮಾಡಬೇಕೆಂದು ಮೇಲಧಿಕಾರಿಗಳ ಸೂಚನೆ ಇದೆ ಎಂದು ಹೇಳಿ ಜಾರಿಕೊಳ್ಳುತ್ತಾರೆ.

ಸಾರ್ಥಕವಾಗದ ಶಿಕ್ಷಕರ ಶ್ರಮ: ನಿತ್ಯ ಒಂದು ಕಿ.ಮೀ. ದೂರ ನಡೆದು ಹೋಗುವ ಶಾಲಾ ಮಕ್ಕಳಿಗೆ ಮೊದಲ ತರಗತಿಗಳಲ್ಲಿ ಶಿಕ್ಷಕರು ಬೋಧಿಸುವ ಪಾಠದ ಕಡೆಗೆ ಹೆಚ್ಚು ಗಮನವಹಿಸಲು ಸಾಧ್ಯವಿಲ್ಲ. ಸುಸ್ತಾದ ಮಕ್ಕಳು ದಣಿವಾರಿಸಿಕೊಳ್ಳವುದರಲ್ಲೇ ಮೊದಲ ಪಾಠದಿಂದ ವಂಚಿತರಾಗುತ್ತಾರೆ. ಇದರಿಂದ ಶಿಕ್ಷಕರ ಶ್ರಮವೂ ಸಾರ್ಥಕವಾಗುವುದಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಮಟ್ಟವೂ ಕುಸಿಯುತ್ತದೆ. ಓದುವ ಮಕ್ಕಳಿಗೆ ಸಮರ್ಪಕವಾಗಿ ಸಾರಿಗೆ ಸೇರಿದಂತೆ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿದ್ದರೆ ಮಕ್ಕಳು ನಿರೀಕ್ಷೆಗೆ ತಕ್ಕಂತೆ ಓದಬಲ್ಲರು ಎಂಬುದು
ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

Advertisement

ಸುಸ್ತಾಗುವ ಮಕ್ಕಳು: ಭಾರವಾದ ಪುಸ್ತಕದ ಚೀಲಗಳನ್ನು ಹೊತ್ತು ಸಾಗುವ ಮಕ್ಕಳು ತರಗತಿಗಳಿಗೆ ಹೋದಾಗ ಮತ್ತು ಮನೆಗೆ ಹಿಂತಿರುಗಿದಾಗ ಓದಿನ ಕಡೆಗೆ ಮನಸ್ಸು ಮಾಡುವುದಿಲ್ಲ. ಕಿ.ಮೀ.ಗಟ್ಟಲೇ ನಡೆಯುವ ಮಕ್ಕಳು ಮನೆಗೆ ಬಂದು ಹೋಮ್‌ವರ್ಕ್‌ ಮಾಡುವುದೂ ಇಲ್ಲ. ಹೊಸಪೇಟೆಯ ಸುತ್ತಮುತ್ತಲಿನ ಹತ್ತಾರು ಕಿ.ಮೀ. ದೂರದ ಗ್ರಾಮಗಳಲ್ಲಿರುವ ಮನೆಗಳಿಗೆ ವಿದ್ಯಾರ್ಥಿಗಳು ಹೋಗುವಷ್ಟರಲ್ಲಿ ಕತ್ತಲಾಗುತ್ತಿದೆ. ಮಕ್ಕಳ ಓದಿನ ಕಡೆಗೆ ಮನಸ್ಸು ಕೊಡಬೇಕೋ, ತಿರುಗಾಟದಲ್ಲೇ ಕಾಲ ಕಳೆಯಬೇಕೋ ಎಂಬುದು ತಿಳಿಯದಂತಾಗಿದೆ. ಸಂಬಂಧಿಸಿದವರು ಇನ್ನಾದರೂ ಮಕ್ಕಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕಿದೆ.

ಆದರ್ಶ ವಿದ್ಯಾಲಯದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ಬೈಪಾಸ್‌ ರಸ್ತೆಯವರೆಗಿದ್ದ ನಗರ ಸಾರಿಗೆ ಬಸ್‌ನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಂಬುನಾಥಹಳ್ಳಿಯಲ್ಲಿರುವ ಶಾಲೆಯವರೆಗೂ ವಿಸ್ತರಿಸಲಾಗುವುದು.
ಮಹಮ್ಮದ್‌ ಫೈಜ್‌, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಹೊಸಪೇಟೆ.

ಕೇಂದ್ರ ಬಸ್‌ ನಿಲ್ದಾಣದಿಂದ ಆದರ್ಶ ವಿದ್ಯಾಲಯದವರೆಗೂ ಬಸ್‌ಪಾಸ್‌ಗೆ ಹಣ ನೀಡಿದ್ದೇವೆ. ಆದರೆ ಬೈಪಾಸ್‌ ರಸ್ತೆಯಲ್ಲೇ ಬಸ್‌ ನಿಲ್ಲಿಸಿಬಿಡುತ್ತಾರೆ. 1 ಕಿ.ಮೀ. ನಡೆದು ಹೋಗುತ್ತಿದ್ದೇವೆ. ಶಾಲೆಯವರೆಗೂ ಬಸ್‌ ಓಡಿಸಿದರೆ ಓದಿನ ಕಡೆ ಹೆಚ್ಚು ಗಮನಕೊಡಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳು, ಆದರ್ಶ ವಿದ್ಯಾಲಯ, ಹೊಸಪೇಟೆ.

Advertisement

Udayavani is now on Telegram. Click here to join our channel and stay updated with the latest news.

Next